ಮಿಜೋರಾಂ ಮೇಲೆ ಬಾಂಬ್ ದಾಳಿ ಮಾಡಿದ್ರಂತೆ ರಾಜೇಶ್ ಪೈಲಟ್: ಬಿಜೆಪಿಯ ಅಮಿತ್ ಪೋಸ್ಟ್ ಗೆ ಸಚಿನ್ ಪೈಲಟ್ ಕೊಟ್ಟ ತಿರುಗೇಟು ಏನ್ ಗೊತ್ತಾ..? - Mahanayaka
8:24 AM Saturday 21 - September 2024

ಮಿಜೋರಾಂ ಮೇಲೆ ಬಾಂಬ್ ದಾಳಿ ಮಾಡಿದ್ರಂತೆ ರಾಜೇಶ್ ಪೈಲಟ್: ಬಿಜೆಪಿಯ ಅಮಿತ್ ಪೋಸ್ಟ್ ಗೆ ಸಚಿನ್ ಪೈಲಟ್ ಕೊಟ್ಟ ತಿರುಗೇಟು ಏನ್ ಗೊತ್ತಾ..?

16/08/2023

ತಮ್ಮ ತಂದೆ ರಾಜೇಶ್ ಪೈಲಟ್ 1966 ರ ಮಾರ್ಚ್ ನಲ್ಲಿ ಮಿಜೋರಾಂನಲ್ಲಿ ವಾಯುಪಡೆಯ ಪೈಲಟ್ ಆಗಿದ್ದಾಗ ಬಾಂಬ್ ಗಳನ್ನು ಎಸೆದಿದ್ದರು ಎಂಬ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರ ಹೇಳಿಕೆಗೆ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ತಿರುಗೇಟು ನೀಡಿದ್ದಾರೆ.

1966ರ ಮಾರ್ಚ್ 5ರಂದು ಮಿಜೋರಾಂ ರಾಜಧಾನಿ ಐಜ್ವಾಲ್ ಮೇಲೆ ಬಾಂಬ್ ದಾಳಿ ನಡೆಸಿದ ಭಾರತೀಯ ವಾಯುಪಡೆಯ ವಿಮಾನದಲ್ಲಿ ರಾಜೇಶ್ ಪೈಲಟ್ ಮತ್ತು ಸುರೇಶ್ ಕಲ್ಮಾಡಿ ಪ್ರಯಾಣಿಸುತ್ತಿದ್ದರು ಎಂದು ಮಾಳವೀಯ ಆರೋಪಿಸಿದ್ದರು.

ನಂತರ ಇಬ್ಬರೂ ಕಾಂಗ್ರೆಸ್ ಟಿಕೆಟ್ ಪಡೆದು ಸಂಸದರಾದರು. ಹಾಗೂ ಸರ್ಕಾರದಲ್ಲಿ ಮಂತ್ರಿಗಳಾದರು. ಇಂದಿರಾ ಗಾಂಧಿ ಅವರು ಇದಕ್ಕೆ ಪ್ರತಿಫಲವಾಗಿ ರಾಜಕೀಯದಲ್ಲಿ ಸ್ಥಾನ ನೀಡಿದರು. ಈ ಮೂಲಕ ಈಶಾನ್ಯದಲ್ಲಿ ತಮ್ಮದೇ ಜನರ ಮೇಲೆ ವಾಯು ದಾಳಿ ನಡೆಸಿದವರಿಗೆ ಗೌರವ ನೀಡಿದರು ಎಂಬುದು ಸ್ಪಷ್ಟವಾಗಿದೆ ಎಂದು ಮಾಳವೀಯ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದರು.


Provided by

ಇದಕ್ಕೆ ಬಿಜೆಪಿ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದ ಸಚಿನ್ ಪೈಲಟ್, “ಅಮಿತ್ ಮಾಳವೀಯ – ನೀವು ತಪ್ಪು ದಿನಾಂಕಗಳನ್ನು ಬರೆದಿದ್ದೀರಿ. ಜೊತೆಗೆ ತಪ್ಪು ಸಂಗತಿಗಳನ್ನು ಹೊಂದಿದ್ದೀರಿ.

ಹೌದು. ಭಾರತೀಯ ವಾಯುಪಡೆಯ ಪೈಲಟ್ ಆಗಿ, ನನ್ನ ತೀರಿಹೋದ ತಂದೆ ಬಾಂಬ್ ಗಳನ್ನು ಹಾಕಿದರು. ಆದರೆ ಅದು 1971 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ. ಈ ಹಿಂದಿನ ಪೂರ್ವ ಪಾಕಿಸ್ತಾನದ ಮೇಲೆ. ನೀವು ಹೇಳಿದಂತೆ 1966 ರ ಮಾರ್ಚ್ 5 ರಂದು ಮಿಜೋರಾಂ ಮೇಲೆ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
1966 ರ ಅಕ್ಟೋಬರ್ 29 ರಂದು ಮಾತ್ರ ಅವರನ್ನು ಭಾರತೀಯ ವಾಯುಪಡೆಗೆ ನಿಯೋಜಿಸಲಾಗಿತ್ತು. ಜೈ ಹಿಂದ್ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು” ಎಂದು ಪೈಲಟ್ ಎಕ್ಸ್ ನಲ್ಲಿ ಬರೆದು ಪ್ರಮಾಣಪತ್ರವನ್ನು ಹಂಚಿಕೊಂಡಿದ್ದಾರೆ. ಅದರ ಪ್ರಕಾರ ರಾಜೇಶ್ ಪೈಲಟ್ ಅವರನ್ನು ಅಕ್ಟೋಬರ್ 29, 1966 ರಂದು ಭಾರತೀಯ ವಾಯುಪಡೆಗೆ ನಿಯೋಜಿಸಲಾಗಿತ್ತು.

ಇತ್ತೀಚಿನ ಸುದ್ದಿ