ಅವಘಡ: ತೃಣಮೂಲ ಸಂಸದರು, ಶಾಸಕರನ್ನು ಕರೆದೊಯ್ಯುತ್ತಿದ್ದ ದೋಣಿ ಪಲ್ಟಿ
ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳನ್ನು ಪರಿಶೀಲಿಸುವಾಗ ತೃಣಮೂಲ ಕಾಂಗ್ರೆಸ್ ಸಂಸದರು, ಶಾಸಕರು ಮತ್ತು ಉನ್ನತ ಅಧಿಕಾರಿಗಳು ಸೇರಿದಂತೆ ಕನಿಷ್ಠ 13 ಜನರು ಹೋಗುತ್ತಿದ್ದ ದೋಣಿ ಪಲ್ಟಿಯಾದ ಘಟನೆ ನಡೆದಿದೆ.
ಲಬ್ಬೂರಿನ ಟಿಎಂಸಿ ಶಾಸಕ ಅಭಿಜಿತ್ ಸಿಂಗ್, ಪಕ್ಷದ ಸಂಸದರು, ಅಸಿತ್ ಮಾಲ್ ಮತ್ತು ಶಾಮಿರುಲ್ ಇಸ್ಲಾಂ, ಬಿರ್ಭುಮ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿಧಾನ್ ರಾಯ್ ಮತ್ತು ಇತರ ಅಧಿಕಾರಿಗಳು ಬಿರ್ಭುಮ್ ನ ಬಲರಾಂಪುರ ಮತ್ತು ಲಬ್ಬೂರಿನ ಪ್ರವಾಹ ಪೀಡಿತ ಪ್ರದೇಶಗಳನ್ನು ಪರಿಶೀಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಘಟನೆಯ ನಂತರ, ಸ್ಥಳೀಯರು ಸ್ಥಳಕ್ಕೆ ಧಾವಿಸಿ ಯಾವುದೇ ಸುರಕ್ಷತಾ ಜಾಕೆಟ್ ಗಳನ್ನು ಧರಿಸಿರದ ತೃಣಮೂಲ ಸಂಸದರು ಮತ್ತು ಸ್ಥಳೀಯ ಅಧಿಕಾರಿಗಳನ್ನು ರಕ್ಷಿಸಿದ್ದಾರೆ.
ಪಶ್ಚಿಮ ಬಂಗಾಳದ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದೆ. ಇದರ ಪರಿಣಾಮವಾಗಿ ಅಲ್ಪಾವಧಿಯಲ್ಲಿಯೇ ಬ್ಯಾರೇಜ್ ಗಳಿಂದ ನೀರಿನ ಹರಿವು ಹೆಚ್ಚಾಗಿದೆ.
ಪಶ್ಚಿಮ ಬಂಗಾಳದ ದಕ್ಷಿಣ ಭಾಗದ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದ್ದು, ಅಲ್ಪಾವಧಿಯಲ್ಲಿಯೇ ಬ್ಯಾರೇಜ್ ಗಳಿಂದ ನೀರಿನ ಹರಿವು ಹೆಚ್ಚಾಗಿರುವುದರಿಂದ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಲಹೆಗಾರ ಆಲಾಪನ್ ಬಂಡೋಪಾಧ್ಯಾಯ ಹೇಳಿದ್ದಾರೆ.
ಬಿರ್ಭುಮ್, ಬಂಕುರಾ, ಹೌರಾ, ಹೂಗ್ಲಿ, ಉತ್ತರ ಮತ್ತು ದಕ್ಷಿಣ 24 ಪರಗಣಗಳು, ಪುರ್ಬಾ ಮತ್ತು ಪಶ್ಚಿಮ ಮೇದಿನಿಪುರ, ಪಶ್ಚಿಮ ಬರ್ಧಮಾನ್ ಜಿಲ್ಲೆಗಳ ಕೆಲವು ಭಾಗಗಳು ಜಲಾವೃತಗೊಂಡಿವೆ ಎಂದು ಬಂಡೋಪಾಧ್ಯಾಯ ಹೇಳಿದರು.
ಭಾರೀ ಮಳೆಯಿಂದಾಗಿ ಕಳೆದ 24 ಗಂಟೆಗಳಲ್ಲಿ ದುರ್ಗಾಪುರ ಬ್ಯಾರೇಜ್ನಿಂದ 1,33,750 ಕ್ಯೂಸೆಕ್, ಕಂಗ್ಸಾಬತಿ ಅಣೆಕಟ್ಟಿನಿಂದ 40,000 ಕ್ಯೂಸೆಕ್, ಮೈಥಾನ್ ಅಣೆಕಟ್ಟಿನಿಂದ 2,00,000 ಕ್ಯೂಸೆಕ್ ಮತ್ತು ಪಂಚೇತ್ ಅಣೆಕಟ್ಟಿನಿಂದ 50,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth