12 ದಿನಗಳ ಹಿಂದೆ ನಾಪತ್ತೆಯಾಗಿದ್ದ ತಂದೆ ಮಕ್ಕಳ ಮೃತದೇಹ ಕಾರಿನ ಸಮೇತ ನಾಲೆಯಲ್ಲಿ ಪತ್ತೆ

ಮಂಡ್ಯ: 12 ದಿನಗಳ ಹಿಂದೆ ನಾಪತ್ತೆಯಾಗಿದ್ದ ತಂದೆ ಹಾಗೂ ಇಬ್ಬರು ಮಕ್ಕಳ ಮೃತ ದೇಹ ಕೆ.ಆರ್.ಎಸ್ ನ ವಿಸಿ ನಾಲೆಯಲ್ಲಿ ಕಾರಿನ ಸಮೇತ ಪತ್ತೆಯಾಗಿದೆ.
ಕುಮಾರಸ್ವಾಮಿ, ಅದ್ವೈತ್ (7) ಮತ್ತು ಅಕ್ಷರ (3) ಮೃತಪಟ್ಟವರಾಗಿದ್ದಾರೆ. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಘಟನೆ ಅಪಘಾತದಿಂದ ಸಂಭವಿಸಿದೆಯೇ ಅಥವಾ ಆತ್ಮಹತ್ಯೆಯೇ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.
ಮೂಲತಃ ಮೈಸೂರಿನ ಕೆ.ಆರ್.ನಗರದ ಹೆಬ್ಬಾಳದವರಾದ ಕುಮಾರಸ್ವಾಮಿ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಏಪ್ರಿಲ್ 17ರಂದು ಕೆ.ಆರ್.ನಗರಕ್ಕೆ ಹೋಗುವುದಾಗಿ ಹೇಳಿ ಮಕ್ಕಳೊಂದಿಗೆ ತೆರಳಿದ್ದರು. ಬಳಿಕ ನಾಪತ್ತೆಯಾಗಿದ್ದರು.
ಇದೀಗ ಮೂವರ ಮೃತ ದೇಹಗಳು ಕೆ.ಆರ್.ಎಸ್ ನಾರ್ಥ್ ಬ್ಯಾಂಕ್ನ ವಿಸಿ ನಾಲೆಯಲ್ಲಿ ಕಾರಿನ ಸಮೇತ ಪತ್ತೆಯಾಗಿದೆ.
ಈ ಘಟನೆಗೂ ಮುನ್ನ ಅಂದರೆ ಏಪ್ರಿಲ್ 17ರಂದು ರಾತ್ರಿ 8 ಗಂಟೆಗೆ ತಮ್ಮ ತಂದೆಗೆ ಕರೆ ಮಾಡಿದ್ದ ಕುಮಾರಸ್ವಾಮಿ ಕೆಆರ್ ಎಸ್ ಬಳಿ ಇದ್ದೇನೆ, ಊರಿಗೆ ಬರ್ತಾ ಇದ್ದೇನೆ ಅಂತ ಹೇಳಿದ್ದಾರೆ. ನಂತರ ಅವರ ಫೋನ್ ಸ್ವಿಚ್ ಆಫ್ ಆಗಿತ್ತು.
ಹೀಗಾಗಿ ಆತಂಕಗೊಂಡಿದ್ದ ಕುಟುಂಬಸ್ಥರು ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಇಂದು ನಾಲೆಗೆ ಹರಿಯುತ್ತಿದ್ದ ನೀರನ್ನು ನಿಲ್ಲಿಸಿದ ವೇಳೆ ನಾಲೆಯಲ್ಲಿ ಕಾರು ಪತ್ತೆಯಾಗಿದೆ. ಕುಮಾರಸ್ವಾಮಿ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಬಳಿ ಕೆಲಸ ಬಿಟ್ಟು ಸ್ನೇಹಿತರ ಜೊತೆ ಸೇರಿ ಬ್ಯುಸಿನೆಸ್ ಆರಂಭಿಸಿದ್ದರು. ಆದ್ರೆ ಬ್ಯುಸಿನೆಸ್ ನಲ್ಲಿ ಲಾಸ್ ಆಗಿದ್ದರು ಎನ್ನಲಾಗಿದೆ.
ಕುಮಾರಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಅಥವಾ ಇದೊಂದು ಅಪಘಾತವೇ? ಅಥವಾ ಹತ್ಯೆ ನಡೆಸಲಾಯಿತೇ ಎನ್ನುವ ಹಲವು ಅನುಮಾನಗಳನ್ನ ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ. ಕೆ.ಆರ್. ಎಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: