ಬೊಲ್ಲೆಯ ಜನ್ಮ ವೃತ್ತಾಂತ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 03 - Mahanayaka
10:46 AM Thursday 14 - November 2024

ಬೊಲ್ಲೆಯ ಜನ್ಮ ವೃತ್ತಾಂತ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 03

kanada katada
26/10/2021

  • ಸತೀಶ್ ಕಕ್ಕೆಪದವು

ಸುಮಾರು 450 ವರ್ಷಗಳ ಹಿಂದೆ ಇಟ್ಟೆ ಕೊಪ್ಪ ಪೆರಿಯ ಮಂಜವು ಕಾಲುವೆ ಯೊಂದರ ಇಕ್ಕೆಡೆಗಳಲ್ಲಿ ಎರಡು ಊರುಗಳ ಜೋಡಣೆಯಾಗಿದ್ದು, “ಮನ್ಸರ”  ( ಸಂವಿಧಾನ ಜಾರಿಯಾದ ನಂತರ/ ಜಾತಿ ದೃಢೀಕರಣ ಪಡೆಯುವ ಪ್ರಕ್ರಿಯೆ ಆರಂಭವಾದ ಮೇಲೆ  ಪ್ರಸ್ತುತ ಜಾತಿಪಟ್ಟಿಯ ಪ್ರಕಾರ ಹೊಲೆಯ, ಹಸಲರು, ಪಾಲೆ, ತೋಟಿ, ಆದಿ ದ್ರಾವಿಡ, ಆದಿ ಕರ್ನಾಟಕ ) ಸಾವಿರಾರು ಒಕ್ಕಲುಗಳು/ ಬಿಡಾರಗಳು ಈ ಪ್ರದೇಶದಲ್ಲಿ ಇದ್ದವು ಎಂಬುದನ್ನು ತಲೆಮಾರುಗಳಿಂದ ಕೇಳಿ ತಿಳಿಯಬಹುದಾಗಿದೆ.

ಮೂಲತಃ ಪ್ರಕೃತಿ ಆರಾಧಕರಾಗಿದ್ದ ಇವರು ಮೂಡಣ ದಿಕ್ಕಿಗೆ ನಮಿಸಿ ಸೂರ್ಯ ನಮಸ್ಕಾರ ದೊಂದಿಗೆ ದಿನಚರಿಯನ್ನು ಆರಂಭಿಸುವುದು ವಾಡಿಕೆಯಾಗಿತ್ತು. ಮನ್ಸರ ಸಾಮಾಜಿಕ ಸಾಂಸ್ಕೃತಿಕ ರಾಜಕೀಯ ಚಟುವಟಿಕೆಗಳು  ಇಟ್ಟೆಕೊಪ್ಪ ಪೆರಿಯ ಮಂಜದಲ್ಲೇ ಕೇಂದ್ರೀಕೃತವಾಗಿತ್ತು. ಕಡಲ ಕಿನಾರೆಯಿಂದ ಸಹ್ಯಾದ್ರಿ ಬೆಟ್ಟಗಳ ಆಚೆಗೂ ಹತ್ತವ್ವ ಮಕ್ಕಳಿಗೂ ಹದಿನಾರು ಬರಿಯರಿಗೂ ಕೇಂದ್ರ ಇದಾಗಿತ್ತು. ಜಾತಿಯೊಳಗಿನ ಆಚಾರ ವಿಚಾರಗಳು ಏಕಾಭಿಪ್ರಾಯವಾಗಿ ಇಲ್ಲಿಂದಲೇ ನಿಯಂತ್ರಿತವಾಗುತ್ತಿತ್ತು. ಆಂತರಿಕ ಕಲಹ ಉದ್ಭವಿಸಿದಾಗ ಸಾರ್ವಜನಿಕ ಪಂಚಾಯತಿ ಕಟ್ಟೆಗೆ ತಲುಪುವ ಮುನ್ನ ಜಾತಿ ಕೂಡುಗಟ್ಟಿನ ಪಂಚಾಯತಿ ಕಟ್ಟೆಯಲ್ಲಿ ಮೊದಲು ತೀರ್ಪು ನೀಡಲಾಗುತ್ತಿತ್ತು. ಅದೇ ಅಂತಿಮ ನ್ಯಾಯಾಲಯವು ಆಗಿತ್ತು. ‘ಗುರಿಕಾರ’ ಪದವಿಯು ಉನ್ನತ ಸ್ಥಾನವನ್ನು ಗುರುತಿದರೆ, ಊರಿಗೊಂದು/ ಗ್ರಾಮಕ್ಕೊಬ್ಬರು ‘ಬೊಟ್ಯದ’ರನ್ನು ಘೋಷಿಸಿಕೊಂಡು ಜಾತಿ ನೀತಿಯ ಅಸ್ಮಿತೆಯನ್ನು ಪೋಷಿಸುತ್ತಿದ್ದರು. ‘ಗುರಿಕಾರ’  ಹಾಗು ‘ಬೊಟ್ಯದ’ರಿಗೆ ಕುಲ ಬಾಂಧವರೊಳಗೆ ವಿಶೇಷವಾದ ಗೌರವ ಸ್ಥಾನಮಾನ ಪಡೆದಿತ್ತು. ಹುಟ್ಟು ಸಾವುಗಳ ನಡುವಿನ ಜೀವನಾವೃತವು ಈ ಹಿರಿಯರ ಉಪಸ್ಥಿತಿಯಲ್ಲಿ ನೆರವೇರುತ್ತಿತ್ತು. ಕುಟುಂಬದ ಯಜಮಾನನು ಕುಟುಂಬವನ್ನು ಸಿಸ್ತುಬಧ್ಧವಾಗಿ ನಡೆಸಿಕೊಂಡು ಹೋಗುತ್ತಿದ್ದುದನ್ನು ಕಾಣಬಹುದಾಗಿದ್ದು, ಈ ಪ್ರಕ್ರಿಯೆ ಇಂದಿಗೂ ಚಾಲ್ತಿಯಲ್ಲಿದೆ. ಸತ್ಯ ದೈವಗಳ ಕಲಗಳು ಯಜಮಾನ, ಗುರಿಕಾರ, ಬೊಟ್ಯದರ ಸುಪರ್ದಿಗೆಯಲ್ಲಿಯೇ ನಡೆಯುತ್ತಿತ್ತು. ಎಲ್ಲಿಯೂ ಬ್ರಾಹ್ಮಣರ ಮಂತ್ರೋಚ್ಚರಣೆಯ ಸೋಂಕಿನ ಗಂಧಗಾಳಿಯೂ ಬೀಸುತ್ತಿರಲಿಲ್ಲ. ಸ್ವಾತಂತ್ರ್ಯ, ಸಮಾನತೆ, ಸೋದರತೆಯೊಂದಿಗೆ ಸತ್ಯ ಧರ್ಮ ನ್ಯಾಯ ನೀತಿಗಳ ಪರಿಕಲ್ಪನೆಯು ಜೀವನ ಪದ್ಧತಿಯಾಗತ್ತು.

ಹೀಗಿರಲು, ಪುತ್ತೆಪದವು ಜೋಗೆರಿ  ಕೊಪ್ಪದ  ಬೊಲ್ಯದನ್ನಯ ಸಂತಾನದ ಕರಿಯ ಎಂಬಾತನು ಇಟ್ಟೆಕೊಪ್ಪದ ಪರ್ಕೆದನ್ನಯ ಸಂತಾನದ ಈಂಪುಲು ಎಂಬಾಕೆಯನ್ನು ವಿವಾಹವಾಗಿ ಮಡದಿ ಮನೆಯಲ್ಲಿ ಬಿಡಾರ ಹೂಡಿ ಬದುಕು ಸಾಗಿಸುತ್ತಿದ್ದನು. ಸಂಸ್ಕಾರಯುತ ಈ ಸಂಸಾರವು ಹನ್ನೆರಡು ಮಕ್ಕಳನ್ನು ಪಡೆದಿದ್ದು ಹತ್ತು ಹೆಣ್ಣುಮಕ್ಕಳೊಂದಿಗೆ ಕೊನೆಯ ಇಬ್ಬರು ಗಂಡು ಮಕ್ಕಳಿದ್ದರು. ಅವರೇ ಪಾಂಬಲಜ್ಜಿಗ ಪೂಂಬಲಕರಿಯರು.

ನಿಸರ್ಗದ ನಿಯಮದಂತೆ ನೈಸರ್ಗಿಕ ವ್ಯವಸ್ಥೆಗಳನ್ನು ಹತೋಟಿಯಲ್ಲಿಡಲು, ಪ್ರಕೃತಿ ವಿಕೋಪ ರೋಗರುಜೀನ ಸಾಂಕ್ರಾಮಿಕ ರೋಗಗಳು ಕಾಲಕ್ಕನುಗುಣವಾಗಿ ಸಹಜ ಪ್ರಕ್ರಿಯೆಯಂತೆ ” ಮಲ್ಲ ಸಂಕಡ ” ಎನ್ನುವ ಮಹಾ ಮಾರಿ ಭೀಕರ ಕಾಯಿಲೆಯೊಂದು ಇಟ್ಟೆಕೊಪ್ಪ ಪೆರಿಯ ಮಂಜಕ್ಕೆ ಆವರಿಸಿದ್ದು ತಿಳಿದು ಬರುತ್ತದೆ. ಈ ಕಾಯಿಲೆಯಿಂದಾಗಿ ದಿನ ಬೆಳಗಾದರೆ ಸಾವಿನ ಸುದ್ದಿಯು ಹೆಚ್ಚುತ್ತಿತ್ತು. ಸಾವು ನೋವು ನರಳಾಟ ಮನೆಮಾತಾದುವು. ಅಕ್ಕಿ ಕಾಳುಗಳಿಗೂ ಬರಗಾಲವಾಗಿತ್ತು. ಕಾರಿರುಳಲ್ಲಿ ಅದೆಷ್ಟೋ ಕುಟುಂಬಗಳು ವಲಸೆಹೋದುವು.  ಊರಿಗೂರೇ ಅಳಿದು ಹೋಗುವ ಕಾಲ ಇಟ್ಟೆಕೊಪ್ಪ ಪೆರಿಯ ಮಂಜಕ್ಕಾಯಿತು. ಈ ದಾರುಣ ಸ್ಥಿತಿಯನ್ನು ಹುಡುಗಾಟದ ಪಾಂಬಲಜ್ಜಿಗ ಪೂಂಬಲಕರಿಯರು ಎದುರಿಸಬೇಕಾಯಿತು. ತಂದೆ ತಾಯಿ ಅಕ್ಕಂದಿರನ್ನು ಕಳೆದುಕೊಂಡು ತಬ್ಬಲಿಗಳಾಗಿ ದಿಕ್ಕೇ ತೋಚದೆ ಕಣ್ಣಂಚಿನಲ್ಲಿ ಧಾರಾಕಾರವಾಗಿ ಕಂಬನಿ ಸುರಿಯುತ್ತಿದ್ದರೂ ತಮ್ಮ ಸಹೋದರಿಯ ಹೊಕ್ಕಳ ಬಳ್ಳಿ ಮೂರು ತಿಂಗಳ ಹೆಣ್ಣು ಕಂದಮ್ಮಳನ್ನು ಉಳಿಸಿ ಬೆಳೆಸಿಕೊಂಡು ಕುಲದ ಕುಡಿಯ ಉಸಿರು ಹಸಿರಾಗಿಸುವ ಮಹದಾಸೆಯಿಂದ ವಾಸದ ಬಿಡಾರಕ್ಕೆ ಮುಳ್ಳಕಟ್ಟ ಇಟ್ಟು ತಮ್ಮ ಮನೆತನದ ಕುಟುಂಬ ದೈವಗಳಾದ ಕಲ್ಲುಟಿ ಪಂಜುರ್ಲಿಗೆ ನಮಿಸಿ ಹರಿದ ಚಿಂದಿ ಬಟ್ಟೆಯೊಂದನ್ನು ಹಸಿಗೂಸಿಗೆ ಹೊದಿಕೆಯನ್ನಾಗಿಸಿ ಸುಡುಬಿಸಿಲ ಮಧ್ಯಾಹ್ನ ಕೊಪ್ಪದ ಋಣ ತೀರಿತೆಂದು ಬಗೆದು ದುಃಖ ತಾಳಲಾರದೆ ಬಿಕ್ಕಿ ಬಿಕ್ಕಿ ಅಳುತ್ತಾರೆ, ಕೊಪ್ಪ ಬಿಡಲು ನಿರ್ಧರಿಸುತ್ತಾರೆ.




ಹಾಗೆಯೇ….. ಹುಡುಗಾಟದ ಪಾಂಬಲಜ್ಜಿಗ ಪೂಂಬಲಕರಿಯರು ವಯಸ್ಸಿನಲ್ಲಿ ಕಿರಿಯವರಾಗಿದ್ದರೂ ಆಲೋಚನೆಯಲ್ಲಿ ಹಿರಿತನದ ಮೌಲ್ಯವನ್ನು ಮೈಗೂಡಿಸಿಕೊಂಡಿದ್ದರು. ತಾವಿದ್ದ ಕೊಪ್ಪ ಅಳಿದು ಹೋದರೇನಂತೆ, ಬದುಕಲು ವಿಶಾಲ ಪ್ರಪಂಚವಿದೆ ಎಂಬುದನ್ನು ಅರ್ಥೈಸಿಕೊಂಡು ದುಡಿವಷ್ಟು ದುಡಿಮೆ, ಉಣುವಷ್ಟು ಊಟವು ಎಲ್ಲಿ ಸಿಗಬಹುದೋ ಅಲ್ಲಿ ದಿನಚರಿಯನ್ನು ಆರಂಭಿಸುವ ಯೋಚನೆ ಮಾಡುತ್ತಾರೆ.  ಬಾಲ್ಯದ ದಿನಗಳಲ್ಲೇ ಹಂಗಿನ ಅರಮನೆಗೆ ಜೋತು ಬೀಳದೆ ಬೆವರು ಸುರಿಸಿ ದುಡಿದು ಹೊಟ್ಟೆ ತುಂಬಿಸುವ ದೃಢ ಸಂಕಲ್ಪ ಮಾಡುತ್ತಾರೆ.

ಹಂಡೇಲಸುತ್ತು, ಬೊಲ್ಕಲ್ಲಗುಡ್ಡೆ, ಬ್ಯಾರನ್ನಪಲ್ಕೆ, ಜೋಗೆರಿಕೊಪ್ಪಗಳಲ್ಲಿ ಕೆಲವಾರು ದಿನಗಳನ್ನು, ತಿಂಗಳನ್ನು ದೂಡಿ ಮೂಡುಬಿದಿರೆ ತಾಲೂಕಿನ ತೆಂಕಮಿಜಾರು ಗ್ರಾಮದ ತೋಡರ್ ಸಮೀಪದ ಬಂಗೊಟ್ಟುಗೆ ಬರುತ್ತಾರೆ.

ಸುಡುಬಿಸಿಲ ನೆತ್ತಿಯ ಮೇಲಿನ ಸೂರ್ಯನ ತಾಪ ನೆತ್ತರ ಮುದ್ದೆ ಎಳೆಹಸುಳೆ ಕಂದಮ್ಮಳ ಕೆನ್ನೆಗೊಡೆದು, ಮಗು ಬಿಸಿಲು ಸಹಿಸದೆ ಅಳುವಿನ ಚೀರಾಟವನ್ನು ದ್ವಿಗುಣ ಗೊಳಿಸುತ್ತದೆ. ಸಹೋದರರಾದ ಪಾಂಬಲಜ್ಜಿಗ ಪೂಂಬಲಕರಿಯರು ಕೈಬದಲಾಯಿಸಿಕೊಂಡು ಮಗುವನ್ನು ರಕ್ಷಿಸುವ ಸಲುವಾಗಿ ವಿಶಾಲವಾದ ಗೋಳಿಮರದಡಿಗೆ ತಲುಪುವರು.ಹಸಿವು, ಬಾಯಾರಿಕೆ, ದಣಿವುಗಳ ಪರಿಣಾಮವಾಗಿ ವಿಶ್ರಾಂತಿಯ  ನೆರಳನ್ನು ಬಹುಬೇಗನೆ ಬಯಸಿದರು. ಆದರೂ ಮಗು ಅಳು ನಿಲ್ಲಿಸಲಿಲ್ಲ. ಇದನ್ನು ಸಹಿಸದ ಪಾಂಬಲಜ್ಜಿಗ ನು ಪೂಂಬಲಕರಿಯನ ಕೈಯಲ್ಲಿ ಮಗುವನ್ನು ಕೊಟ್ಟು, ಎಲ್ಲಿಯಾದರೂ ಹೊಗೆಯಾಡುವ ಸನ್ನೆ ಕಾಣಬಹುದೇನೋ , ಗಂಜಿಯನ್ನ ಸಿಕ್ಕರೆ ಮಗುವಿನ ಹಸಿವು ತಣ್ಣಾಗಾಗಿಸುವ ಯೋಜನೆಯಿಂದ ಹುಡುಕಾಟದ ಹೆಜ್ಜೆ ಹಾಕುವನು. ಅದೇ ಹೊತ್ತಿಗೆ ಮಗು ಅಳು ನಿಲ್ಲಿಸದೆ  ಅಳುತಿರಲು ಹಲವು ದಿನಗಳಿಂದ ರಾತ್ರಿ ಹಗಲು ಸರಿಯಾದ ನಿದ್ದೆ ಮಾಡಲು ಅವಕಾಶ ಇರದಿದ್ದ ಕಾರಣದಿಂದಾಗಿ ಪೂಂಬಲಕರಿಯನಿಗೆ ದಿಕ್ಕೇ ತೋಚದಂತಾಯಿತು. ಸೂಕ್ಷ್ಮ ಜ್ಞಾನವುಳ್ಳ ಪೂಂಬಲಕರಿಯನು ಗೋಳಿಮರದ ಜಂತಿಗೆ ಬಟ್ಟೆಯ ಉಯ್ಯಾಲೆ ಕಟ್ಟಿ ಜೋಗುಳ ಹಾಡಿ ಮಗುವನ್ನು ನಿದ್ರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾನೆ.

ದಣಿವು ತಾಳಲಾರದೆ ಅದೇ ಗೋಳಿಮರದ ಬುಡದಲ್ಲಿ ಕೂತಲ್ಲಿಗೆ ಪೂಂಬಲಕರಿಯನಿಗೆ ನಿದ್ರೆಯ ತೂಕರಿಕೆ ಆರಂಭವಾಗಿ ನಿದ್ರೆಗೆ ಜಾರುತ್ತಾನೆ‌.

ಅದೇ ಹೊತ್ತಿಗೆ, ಕಿಜನೊಟ್ಟು ಬರ್ಕೆಯ ಮೂಲಚಾಕಿರಿಯ ಕೆಲಸದಾಳುಗಳಾದ ದೇಯಿ ಬೈದೆದಿ, ಕಾಂತರೊಟ್ಟು ಕಾಂತಕ್ಕ, ಬೊಟ್ಯದ ಮಡದಿ ಬೊಮ್ಮಿ, ಸುಬ್ಬನ ಮಗಳು ಸುಬ್ಬಿ, ಸೀಂತ್ರಿ ಸಿಂಗ, ಬಂಗೊಟ್ಟು ಬಿಂಗ್ರಿ…. ಮೊದಲಾದವರು ಸೊಪ್ಪು ಕಟ್ಟಿಗೆಯ ದಿನಕೆಲಸದ ಸಲುವಾಗಿ ಅಲ್ಲಿಗೆ ತಲುಪುತ್ತಾರೆ. ಪ್ರಥಮವಾಗಿ ದೇಯಿಬೈದೆದಿಯು ಮಗುವನ್ನು ಕಂಡು ಆಶ್ಚರ್ಯ ಪಟ್ಟರೂ ಜೊತೆಯಲ್ಲಿದ್ದ ಬೊಮ್ಮಿ  ಆಚೆ ಈಚೆ ನೋಡಿ ಧೈರ್ಯ ಮಾಡಿಕೊಂಡು ಮಗುವನ್ನು ಕೈಗೆತ್ತಿಕೊಂಡಳು. ಆ ಹೊತ್ತಿಗಾಗಲೇ ಗಂಜಿಯನ್ನದೊಂದಿಗೆ ಪಾಂಬಲಜ್ಜಿಗ ಹಿಂದಿರುಗಿ ಅದೇ ಮರದ ಬುಡಕ್ಕೆ ತಲುಪುವನು. ಇನ್ನೊಂದೆಡೆ ಕೆಲಸದಾಳುಗಳು ಒಬ್ಬೊಬ್ಬರಾಗಿ ಅಲ್ಲಿಗೆ ಧಾವಿಸಿ ಗುಸುಗುಸು ಪಿಸುಮಾತು ಸುರುಮಾಡುತ್ತಾರೆ. ಇದು  ಪೂಂಬಲಕರಿಯನ ನಿದ್ದೆ ಮತ್ತನ್ನು ದೂರಮಾಡಿ ಬಡಿದೆಬ್ಬಿಸಿತಲ್ಲದೆ ಒಮ್ಮೆಗೆ ಆಶ್ಚರ್ಯಚಕಿತನಾಗಿ ಮೂಕನಾಗುತಗತ್ತಾನೆ. ಅಪರಿಚಿತರು ಪರಿಚಿತರಾಗಿ ದಿಕ್ಕೆಟ್ಟು ಕಂಗಲಾದ ಬಾಲಕರ ದೊಡ್ಡ ಪ್ರಮಾಣದ ಸಜ್ಜನಿಕೆ, ನಯ ವಿನಯದ ಮಾತುಗಾರಿಕೆ, ಬದುಕಿನ ಸಂಕಷ್ಟದ ಸ್ಥಿತಿಗೆ ಎಲ್ಲರೂ ಮರುಗುತ್ತಾರೆ. ಇಟ್ಟೆಕೊಪ್ಪ ಪೆರಿಯ ಮಂಜದ ಸಾಂಕ್ರಾಮಿಕ ಕಾಯಿಲೆಯ ಭೀಕರತೆಯನ್ನು ವಿವರಿಸುತ್ತ ದುಃಖ ಉಕ್ಕಿ ಬಂದರೂ ಕಣ್ಣೊರಸುತ್ತ ಕುಲದ ಕುಡಿ ಹೆಣ್ಮಗುವನ್ನು ಉಳಿಸಿ,ಬೆಳೆಸುವ ಮಹಾದಾಸೆಯನ್ನು ವ್ಯಕ್ತಪಡಿಸುತ್ತಾರೆ. ದುಡಿವಷ್ಟು ದುಡಿಮೆ, ಉಣುವಷ್ಟು ಊಟ ಇತ್ತಲ್ಲಿ ಆಯುಷ್ಯ ಭವಿಷ್ಯವನ್ನು ಪೂರ್ಣಗೊಳಿಸುವೆವುಎಂಬ ಆತ್ಮ ಸ್ಥೈರ್ಯದ ನುಡಿಗಳನ್ನು ಹೇಳುತ್ತಾರೆ.

” ಉಪ್ಪಿನಿಲ ಬಂಗೊಟ್ಟುದ ಎರ್ಕ ಕಿಜನೊಟ್ಟು ಬರ್ಕೆ, ದರ್ಮ ಚಾವಡಿಡಾನಿ ನಡಪಾಯಿ ದಾನ ದರುಮೊದ ಪೊರ್ತು……..” ಎಂಬುದಾಗಿ ದೇಯಿಬೈದೆದಿಯ ಕಿವಿಮಾತು ಕೇಳಿಬರುತ್ತದೆ. ಮುಂದಕ್ಕೆ ಕಿಜನೊಟ್ಟು ಬರ್ಕೆ ಮನೆತನದ ಹಿರಿಮೆ ಗರಿಮೆಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು  ಕೆಲಸದಾಳುಗಳ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಾ ಕಿಜನೊಟ್ಟು ಬರ್ಕೆಯತ್ತ ಸಾಗುತ್ತಾರೆ. ಈ ಕಂದಮ್ಮಳೇ ಮುಂದಕಕೆ ಸತ್ಯದಪ್ಪೆ ಬೊಲ್ಲೆ ನಾಮಾಂಕಿತದಲ್ಲಿ ಹೆಸರುವಾಸಿಯಾಗುತ್ತಾಳೆ. ಇಂದಿಗೂ ಹಿರಿಯ ತಲೆಮಾರಿನ ವ್ಯಕ್ತಿಗಳು ಸತ್ಯದಪ್ಪೆ ಬೊಲ್ಲೆಯು ಗೋಳಿಜಂತಿಯಲ್ಲಿ ಸಿಕ್ಕಿದಳು ಎನ್ನುತ್ತಾರೆ. ಹೌದು, ಯಾವ ಕಾರಣದಿಂದಾಗಿ ಸಿಕ್ಕಿದಳು ಹೇಳುತ್ತಿಲ್ಲ ! ಇವತ್ತಿಗೂ  ಆಸುಪಾಸಿನ ಜನರು ಈ ಸ್ಥಳವನ್ನು

” ಬೊಲ್ಲೆಚಾರ್” ಎಂಬುದಾಗಿ ಉಚ್ಚಾರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.  ( ಮುಂದಿನ ಸಂಚಿಕೆಯಲ್ಲಿ ಬಾಲೆ ಬೊಲ್ಲೆಯ ನಾಮಕರಣ/ನೀರ ಮದುವೆ/ ಮದುವೆ ಸಂಭ್ರಮ )

ಇತ್ತೀಚಿನ ಸುದ್ದಿ