ಬೊಲ್ಲೆಯ ನಾಮಕರಣ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 04
- ಸತೀಶ್ ಕಕ್ಕೆಪದವು
ಕಿಜನೊಟ್ಟು ಬರ್ಕೆಯ ಮೂಲ ಚಾಕರಿಯ ಕೆಲಸದಾಳುಗಳಾದ ದೇಯಿಬೈದೆದಿ, ಕಾಂತರೊಟ್ಟು ಕಾಂತಕ್ಕ, ಬೊಟ್ಯದ ಮಡದಿ ಬೊಮ್ಮಿ, ಸುಬ್ಬನ ಮಗಳು ಸುಬ್ಬಿ, ಸೀಂತ್ರಿ ಸಿಂಗ, ಬಂಗೊಟ್ಟು ಬಿಂಗ್ರಿ ಮೊದಲಾದವರೊಂದಿಗೆ ಪಾಂಬಲಜ್ಜಿಗ ಪೂಂಬಲಕರಿಯರು ಮಗುವಿನೊಡನೆ ಕಿಜನೊಟ್ಟು ಬರ್ಕೆಯತ್ತ ಹೆಜ್ಜೆ ಹಾಕುತ್ತಾರೆ. ಮಕ್ಕಳಿಲ್ಲದ ಅಮುಣಿ ಪೆರ್ಗಡ್ತಿಗೆ ನಡೆದ ಘಟನೆಗಳ ವಿವರವನ್ನು ದೇಯಿಬೈದೆದಿಯು ಸಾವದಾನವಾಗಿ ಬಿಚ್ಚಿಟ್ಟಾಗ ಮಿಜಾರ ಇರ್ಂದಲ ಪಟ್ಟದ ಬಲ್ಲಾಳ ಉಲ್ಲಾಯರಿಗೆ ಒಂದು ಮಾತು ತಿಳಿಯಪಡಿಸುವ ಯೋಚನೆ ಮಾಡುತ್ತಾಳೆ.
ಮಧ್ಯಾಹ್ನದ ವಿಶ್ರಾಂತ ಸಮಯದಲ್ಲಿ ಬಲ್ಲಾಳರಿಗೆ ತಿಳಿಯಪಡಿಸಿ ಚುರುಕುತನದ ಬಾಲಕರಿಗೆ ಆಶ್ರಯ ನೀಡಲು ನಿರ್ಧರಿಸುತ್ತಾರೆ. ಮಿಂದು ಶುಚಿಯಾಗಿ ಬಂದ ಪಾಂಬಲಜ್ಜಿಗ ಪೂಂಬಲಕರಿಯರನ್ನು ಕಿಜನೊಟ್ಟು ಬರ್ಕೆಯ ಮೂಲ ಚಾವಡಿಯ ಅಲೇರಿ ಪಂಜುರ್ಲಿಯ ಮೂಲಸ್ಥಾನದ ಬಾಗಿಲು ತೆರೆದು ಮುಂದುಗಡೆ ಕುಳ್ಳಿರಿಸಿ ಬಡಗು ದಿಕ್ಕಿಗೆ ಬಾಗಿದ ಬಂಗಬಾಳೆಯ ತುದಿಯೆಲೆಯ ತುಂಡೊಂದನ್ನು ತಲೆಯ ಮೇಲಿಟ್ಟು ಗಿಂಡ್ಯೆ ಹಾಲು, ಬಿಂದಿಗೆ ನೀರು ಹೊಯ್ದು ಅಲೇರಿ ಪಂಜುರ್ಲಿಯ ‘ಖಡ್ಸಲೆ’ಯ ತುದಿಯಲ್ಲಿ ಪುಣ್ಯ ನೀರನ್ನು ಕುಡಿಯಲು ಸೂಚಿಸಿ ಮೂಲ ಚಾಕರಿಯೆಂಬ ಅಲಿಖಿತ ಕಾನೂನಿಗೆ ಮಾನಸಿಕವಾಗಿ ಭಾವನಾತ್ಮಕವಾಗಿ ಒಪ್ಪಿಕೊಳ್ಳುವಂತೆ ವಿಧಿ ವಿಧಾನಗಳನ್ನು ಮಾಡುತ್ತಾರೆ. ತುಳುನಾಡಿನಲ್ಲಿ ಮೂಲದವರು ಎಂಬ ಅಲಿಖಿತ ಮಾನಸಿಕ ಗುಲಾಮಗಿರಿಯ/ ಊಳಿಗಮಾನ್ಯ ವ್ಯವಸ್ಥೆಯ ಆಡಳಿತಾತ್ಮಕ ಕಟ್ಟುಪಾಡುಗಳು ಅನಾದಿಕಾಲದಿಂದಲೂ ಚಾಲ್ತಿಯಲ್ಲಿದೆ.
ತುಳುನಾಡಿನ ಮೇಲ್ಜಾತಿ ಜನಗಳೆಸಿದವರು ಅಸ್ಪೃಶ್ಯರನ್ನು “ಮೂಲ” ವೆಂಬ ಭಾವನಾತ್ಮಕ ಬಂಧನ ದಲ್ಲಿರಿಸಿ ತಲೆಮಾರುಗಳ ಉದ್ದಕ್ಕೂ ಉಳ್ಳವರ ನೆರಳಲ್ಲಿ ಚಾಕರಿ ಮಾಡುವ, ಜೀತ ಮಾಡುವ, ಊಳಿಗಮಾಡುವ ಸೂಕ್ಷ್ಮ ವಿಚಾರವೇ “ಮೂಲ” ಪದ್ದತಿ ಯಾಗಿದೆ. ಮೂಲ ಹಿಡಿಸುವುದರ ಮೂಲಕ ಅಸ್ಪೃಶ್ಯರ ಭಾವನೆಗೆ ಬಲೆ ಬೀಸಿ ಹುಟ್ಟು ಸಾವಿನ ನಡುವಣ ಸೂತಕಾದಿ ಆಚರಣೆಗಳು ಸಮಾನವೆಂಬ ಪರಿಕಲ್ಪನೆಯನ್ನು ಬಿತ್ತಿ ಪಾಲಿಸಿ ಪೋಷಿಸಿಸುವ ಪ್ರಕ್ರಿಯೆಗಳು ಎದ್ದು ಕಾಣುತ್ತವೆ. ದೈವಗಳ ಭಂಡಾರದಿಂದ ಪುಣ್ಯ ನೀರನ್ನು ಸಿಂಪಡಿಸಿ, ಆ ನೀರನ್ನು ಕುಡಿಸುವುದರ ಮೂಲಕ ಕೊಟ್ಟ ಮಾತಿಗೆ ತಪ್ಪಲಾರದ ಭಾವ ಬಂಧನದ ಸಂಕೋಲೆಯಿಂದ ಕಟ್ಟಿಹಾಕುವ ಪ್ರಕ್ರಿಯೆಯೆ ಇದಾಗಿದೆ. ಇಂತಹ ವ್ಯವಸ್ಥೆಗೆ ಪಾಂಬಲಜ್ಜಿಗ ಪೂಂಬಲಕರಿಯರು ಗೊತ್ತಿದ್ದೋ, ಗೊತ್ತಿಲ್ಲದೆಯೋ ಕಿಜನೊಟ್ಟುವಿನಲ್ಲಿ ಮೂಲ ಹಿಡಿಯಬೇಕಾಯಿತು. ಮೂಲ ಹಿಡಿದ ಬಾಲಕರಿಗೆ ಹಾಳೆಚಿಲ್ಲಿಯಲ್ಲಿ ಗಂಜಿಯನ್ನ ಉಣಬಡಿಸುವರು. ಮೊದಲೇ ಹಸಿವಿನಿಂದ ಹಸಿದಿದ್ದ ಪಾಂಬಲಜ್ಜಿಗ ಪೂಂಬಲಕರಿಯರು ಗಬಗಬನೆ ಉಂಡು ಮುಗಿಸುವರು. ಅದೇ ಹೊತ್ತಿಗೆ ಎಳೆಗೂಸಿಗೆ ಹಿರಿಯವ್ವ ಬೊಮ್ಮಿಯು ಬೆರಳ ತುದಿಗೆ ಬಟ್ಟೆ ಸುತ್ತಿ ಹಾಲು ಕುಡಿಸುವುದರ ಮೂಲಕ ಮಗುವಿನ ಹಸಿವನ್ನು ತಗ್ಗಿಸುವಲ್ಲಿ ಯಶಸ್ಸು ಕಾಣುವಳು.
ಹೀಗೆ ದಿನ ಉರುಳುತಿರಲು
ಕಾಂತರೊಟ್ಟುವಿನಲ್ಲಿ ಬೊಟ್ಯದ ಮಡದಿ ಬೊಮ್ಮಿಯ ಸಲಹೆ ಸೂಚನೆಗಳಂತೆ ಕಂದಮ್ಮಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಲು ಜೀವಮಾನವನ್ನೇ ಮುಡಿಪಾಗಿಡುತ್ತಾರೆ. ತಾಳೆ ಗರಿಯ “ತಟ್ಟಿ-ಮಡಲು” ಉಪಯೋಗಿಸಿ ಡೇರೆ ಬಿಡಾರ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಾರೆ.
ಬೊಟ್ಯದ ಮಡದಿ ಬೊಮ್ಮಿಯು ತಮ್ಮ ಮಕ್ಕಳಂತೆ ಭಾವಿಸಿ ಪಾಂಬಲಜ್ಜಿಗ ಪೂಂಬಲಕರಿಯರು ಹಾಗು ಹೆಣ್ಣು ಕಂದಮ್ಮಳನ್ನು ಸಾಕಿ ಸಲಹುವಳು. ಮನ್ಸರ ಸಾಂಸ್ಕೃತಿಕ ಜೀವನದ ಮೊದಲ ಘಟ್ಟ ಮಗುವಿಗೆ ನಾಮಕರಣ ಆಗಿರುವುದರಿಂದ ಹೆಣ್ಣು ಕಂದಮ್ಮಳಿಗೆ ನಾಮಕರಣದ ದಿನವನ್ನು ಬೊಟ್ಯದರ ಪ್ರಾಕೃತಿಕ ಲೆಕ್ಕಾಚಾರದಂತೆ ಗೊತ್ತು ಪಡಿಸುತ್ತಾರೆ. “ಚೆನ್ನರಬೂರು”ವಿನಿಂದ ಹೆಣೆದು ಮಾಡಿದ ತೊಟ್ಟಿಲು ನಿರ್ಮಿಸಿ “ಮುಂಡೆವು ತಕ್ಕನ” ( ಕಿರುಚಾಪೆ ) ಹೆಣೆದು ತೊಟ್ಟಿಲಿನೊಳಗೆ ಹಾಸಿ ತುಂಡು ಬಟ್ಟೆಯ “ತೆರಿಯ” ಮೆದುದಿಂಬು ನಿರ್ಮಿಸಿ ಅಟ್ಟದ ಅಡ್ಡಕ್ಕೆ ತೊಟ್ಟಿಲು ಕಟ್ಟಿ “ಬಾಲೆ ತೊಟ್ಟಿಲು ” ಕಟ್ಟು ಕ್ರಮಕ್ಕೆ ಸಜ್ಜಾಗುತ್ತಾರೆ. ಕಿಜನೊಟ್ಟು ಬರ್ಕೆ ಕಾಂತರೊಟ್ಟುವಿನ ಹಿರಿಯರು ಕಿರಿಯರು ಸಂಭ್ರಮದ ಕ್ಷಣದಲ್ಲಿ “ಈ ಮಗು ನನ್ನದಲ್ಲ, ನಿನ್ನದು !” ಎಂಬ ಮಾತನ್ನು ಮೂರು ಬಾರಿ ಉಚ್ಚರಿಸಿ ಮಗುವನ್ನು ಮೂರು ಬಾರಿ ಕೈ ಬದಲಾಯಿಸಿಕೊಂಡು ಮಗುವನ್ನು ತೊಟ್ಟಿಯಲ್ಲಿ ಮಲಗಿಸಿ ಮಗುವಿಗೆ “ಒಕ್ಕನೂಲು” ( ಉಡುದಾರ) ಹಾಕಿ, ಗಂಜಿಯನ್ನ ಸಾಂಕೇತಿಕವಾಗಿ ಉಣಿಸಿ, ಕಪ್ಪು ರೂಪದಲ್ಲೂ ಬೆಳಕಿನ ತೇಜಸ್ಸು ಮಗುವಿನ ಮೊಗದಲ್ಲಿ ಇದ್ದುದರಿಂದ “ಬೊಲ್ಲೆ” ಎಂಬುದಾಗಿ ನಾಮಕರಣ ಮಾಡಲಾಯಿತು. ಸತ್ಯವನ್ನು ಸತ್ಯವೆಂದು ಹೇಳಿ, ಸತ್ಯವಂತಳು ಎನಿಸಿಕೊಳ್ಳುವಳು. ಸತ್ಯ ಧರ್ಮ ನ್ಯಾಯ ನೀತಿಗಳನ್ನು ಪಾಲನೆ ಮಾಡಿ ಸತ್ಯದಪ್ಪೆ ಬೊಲ್ಲೆ ನಾಮಾಂಕಿತದಲ್ಲಿ ಮುಂದಕ್ಕೆ ಖ್ಯಾತಿಯಾಗುವ ಇತಿಹಾಸ ಜನಪದಗಳಲ್ಲಿ ಲಭ್ಯವಿದೆ.
( ಮುಂದಿನ ಸಂಚಿಕೆಯಲ್ಲಿ ಬೊಲ್ಲೆಯು ಮೈನರೆದು ಪ್ರಾಯ ಪ್ರಬುದ್ಧೆಯಾಗುವುದು/ ಮದಿಮಲಾಯಿ ಮದಿಮೆ )
ಹಿಂದಿನ ಸಂಚಿಕೆ ಓದಿ
ತುಳುನಾಡಿನ ಅಪ್ರತಿಮ ಅವಳಿ ವೀರರು ಕಾನದ-ಕಟದರು | ಸಂಚಿಕೆ-01
ಸಮಾಜ ಪರಿವರ್ತನಾ ಚಳುವಳಿಯಲ್ಲಿ ಕಾನದ– ಕಟದರ ಹೆಜ್ಜೆ ಗುರುತು:
ಬೊಲ್ಲೆಯ ಜನ್ಮ ವೃತ್ತಾಂತ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 03