ಬೊಂಬೆಯ ಆಟ ನಿಂತಿದೆ, ಕಣ್ಣೀರ ಧಾರೆ ಹರಿದಿದೆ, ಪ್ರೀತಿಯಿಂದ ಕರೆಯಲು ‘ಅಪ್ಪು’ ಇನ್ನಿಲ್ಲ! - Mahanayaka
5:24 PM Thursday 12 - December 2024

ಬೊಂಬೆಯ ಆಟ ನಿಂತಿದೆ, ಕಣ್ಣೀರ ಧಾರೆ ಹರಿದಿದೆ, ಪ್ರೀತಿಯಿಂದ ಕರೆಯಲು ‘ಅಪ್ಪು’ ಇನ್ನಿಲ್ಲ!

puneeth
29/10/2021

ಬೆಂಗಳೂರು: ಇಡೀ ಕುಟುಂಬವೇ ಕುಳಿತು ನೋಡಬಹುದಾದಂತಹ ಚಿತ್ರಗಳನ್ನು ಮಾತ್ರವೇ ಮಾಡುತ್ತಿದ್ದ ನಟ ಪುನೀತ್ ರಾಜ್ ಕುಮಾರ್ ಅಂದರೆ, ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಇಡೀ ಕರ್ನಾಟಕದ ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದ ನಟ ಪುನೀತ್ ರಾಜ್ ಕುಮಾರ್ ಅವರು ಮರಳಿ ಬಾರದ ಲೋಕಕ್ಕೆ  ತೆರಳಿದ್ದಾರೆ.

ಬೊಂಬೆಯ ಆಟ ನಿಂತಿದೆ. ಕಣ್ಣೀರ ಧಾರೆ ಹರಿದಿದೆ. ಅಪ್ಪು ಎಂಬ ಪ್ರೀತಿಯ ಕರೆ ಕೇಳಲು ಅಪ್ಪು ಇಲ್ಲಿಲ್ಲ ಎನ್ನುವ ನೋವಿನೊಂದಿಗೆ ಆಸ್ಪತ್ರೆಯ ಮುಂಭಾಗದಲ್ಲಿ ಅಭಿಮಾನಿಗಳು, ಅಪ್ಪು, ಅಪ್ಪು ಎಂದು ನೋವಿನ ಧ್ವನಿಯೊಂದಿಗೆ ಕೂಗಿ ಎಚ್ಚರಿಸಲು ಪ್ರಯತ್ನಿಸಿದರೂ ಅಪ್ಪು ಏಳಲಿಲ್ಲ.  ಈ ಜೀವನ ಇಷ್ಟೇನಾ? ಎಂದು ಪ್ರಶ್ನೆ ಮಾಡುವಷ್ಟರ ಮಟ್ಟಿಗೆ ಜನರು  ಹೋಗಿದ್ದಾರೆಂದರೆ, ಅಪ್ಪು ಕಟ್ಟಿದ ಪ್ರೀತಿಯ ಸಾಮ್ರಾಜ್ಯ ಎಂತಹದ್ದಿರಬೇಕು ಎನ್ನುವುದನ್ನು ಊಹಿಸಲು ಕೂಡ ಸಾಧ್ಯವಿಲ್ಲ.

ತಮ್ಮ ದಿನಚರಿಗಳಲ್ಲಿ ಸ್ವಲ್ಪವೂ ಬದಲಾವಣೆ ಮಾಡಿಕೊಳ್ಳದ ನಟ ಪುನೀತ್ ರಾಜ್ ಕುಮಾರ್, ತಮ್ಮ ಫಿಟ್ನೆಸ್ ಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ನಿನ್ನೆ ರಾತ್ರಿ ವೇಳೆ ಸ್ವಲ್ಪ ಸುಸ್ತಾದಂತಿದ್ದರು. ಆದರೆ, ಮನುಷ್ಯ ಕೆಲಸ ಮಾಡಿದಾಗ ಸುಸ್ತಾಗುವುದು ಸಹಜ ಅಂದುಕೊಂಡಿದ್ದರೋ ಗೊತ್ತಿಲ್ಲ. ಯಾರೇ ಆದರೂ ಸಣ್ಣ ಪುಟ್ಟ ಸುಸ್ತನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅಪ್ಪು ವಿಷಯದಲ್ಲಿ ಕೂಡ ಇದೇ ರೀತಿಯಾಗಿದೆ ಎನ್ನುವ ಮಾತುಗಳು ಇದೀಗ ಕೇಳಿ ಬಂದಿದೆ.

ಬೆಳಿಗ್ಗೆ ವರ್ಕೌಟ್ ಮುಗಿಸಿದ ಬಳಿಕ ತಮ್ಮ ತಂದೆ ಡಾ.ರಾಜ್ ಕುಮಾರ್ ಅವರ ಊರಾದ ಗಾಜನೂರಿಗೆ ಹೋಗಬೇಕು ಎಂದು ಅವರ ಆಪ್ತರ ಬಳಿಯಲ್ಲಿ ಪುನೀತ್ ರಾಜ್ ಕುಮಾರ್ ಅವರು ಹೇಳಿದ್ದರಂತೆ. ಆದರೆ, ಇದೀಗ ಅವರು ಹೇಳಿದ್ದ ಅರ್ಥ ಬೇರೆಯೇ ಇತ್ತೆ ಎನ್ನುವಂತೆ ಮಾಡಿ ಪುನೀತ್ ಬಾರದ ಲೋಕಕ್ಕೆ ಮರಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ