ಪ್ರವೀಣ್ ಹತ್ಯೆ: ಸಿಎಂ ಬೊಮ್ಮಾಯಿಯನ್ನು ಒಬ್ಬಂಟಿ ಮಾಡಿ, ಬಿಜೆಪಿ ಸಚಿವರು ಶಾಸಕರು ಸೇಫ್ ಆದ್ರಾ?
ಬೆಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ರಾಜ್ಯ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸಾಮೂಹಿಕ ರಾಜೀನಾಮೆ ಸಲ್ಲಿಸುತ್ತಿದ್ದಾರೆ. ಇತ್ತ ಸರ್ಕಾರದ ಭಾಗವಾಗಿರುವ ಶಾಸಕರು, ಸಚಿವರು ‘ನಮ್ಮದೇ ಸರ್ಕಾರ ಇರುವಾಗ ಈ ರೀತಿಯಾಗಿ ಆಗಿದೆ” ಎಂಬ ಹೇಳಿಕೆ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಒಬ್ಬಂಟಿ ಮಾಡಿದ್ದು, ಇದರ ವಿರುದ್ಧ ಸಿಎಂ ಸಹಜವಾಗಿ ಗರಂ ಆಗಿದ್ದಾರೆ.
ಬಿಜೆಪಿಯ ಸಚಿವರು, ಶಾಸಕರು ಪ್ರವೀಣ್ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ, ನಮ್ಮ ಸರ್ಕಾರದ ಅವಧಿಯಲ್ಲೇ ಇಂತಹ ಘಟನೆ ನಡೆದಿದೆ. ನಮ್ಮ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂಬಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲವರು ಟ್ವೀಟ್ ಮೂಲಕವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಭಾಗವಾಗಿರುವ ಶಾಸಕರು, ಸಚಿವರು ಸಿಎಂ ಬಸವರಾಜ್ ಬೊಮ್ಮಾಯಿ ಕಡೆಗೆ ಕೈ ತೋರಿಸುತ್ತಿದ್ದು, ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಮಂಗಳವಾರ ರಾತ್ರಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಹಿಂದೂ ಸಂಘಟನೆಗಳ ಪರ ಕಾರ್ಯಕರ್ತರಲ್ಲದೆ ಬಿಜೆಪಿ ಸರ್ಕಾರದ ಭಾಗವಾಗಿರುವ ಕೆಲ ಶಾಸಕರುಗಳು ಸಹ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇತ್ತ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಕುಮಾರಸ್ವಾಮಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ, ‘ನಮ್ಮ ಸರ್ಕಾರ ಇದ್ದರೂ ನಿನ್ನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಸಾರಿ ಪ್ರವೀಣ್’ ಎಂದು ಟ್ವೀಟ್ ಮಾಡಿದ್ದರು. ಈ ರೀತಿಯಾಗಿ ಟ್ವೀಟ್ ಮಾಡಿದ ಅವರು ಗುರುವಾರ ಸಿಎಂನ್ನು ಭೇಟಿ ಮಾಡಿದ್ದು, ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ಒಂದು ವರ್ಷ ತುಂಬಿದ್ದು, ಈ ಸಂದರ್ಭದಲ್ಲಿ ಶಾಸಕ ಕುಮಾರಸ್ವಾಮಿ ಮುಖ್ಯಮಂತ್ರಿಗಳನ್ನು ಅಭಿನಂದಿಸಲು ಬಂದಿದ್ದರು.
ಬಿಜೆಪಿ ಶಾಸಕ ಕುಮಾರಸ್ವಾಮಿ ಅವರನ್ನು ನೋಡಿ ಗರಂ ಆದ ಬಸವರಾಜ ಬೊಮ್ಮಾಯಿ, ನಿನ್ನ ಕಂಗ್ರಾಟ್ಸ್ ಬೇಡ. ಏನು ಬೇಡ. ಏನೇನೋ ಟ್ವೀಟ್ ಮಾಡಿದ್ದೀಯಲ್ಲ. ನೀನು ಸರ್ಕಾರದ ಭಾಗ ಎಂಬುದನ್ನು ಮರೆತೆಯಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಸಾಕಷ್ಟು ಸಂಖ್ಯೆ ಬಿಜೆಪಿ ನಾಯಕರು ಬಿಜೆಪಿ ಕಾರ್ಯಕರ್ತರಿಂದ ತಲೆಮೆರೆಸಿಕೊಂಡು ಓಡಾಡುವಂತಾಗಿದೆ. ಹಲವರು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು, ಸಿಎಂ ಕಡೆಗೆ ಬೆರಳು ತೋರಿಸಿ ತಮ್ಮ ಜವಾಬ್ದಾರಿಯಿಂದ ಕಳಚಿಕೊಳ್ಳುತ್ತಿರುವುದು ಕಂಡು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka