ಉತ್ತರ ಪ್ರದೇಶದಲ್ಲಿ ಬಿಜೆಪಿ ಆಪರೇಷನ್: ಅಖಿಲೇಶ್ ಯಾದವ್ ಕೈ ಬಿಟ್ಟು ಎನ್ ಡಿಎ ತೆಕ್ಕೆಗೆ ಹಾರಿದ ಮಾಜಿ ಸಚಿವ ರಾಜ್‌ಭರ್..! - Mahanayaka
3:17 AM Friday 20 - September 2024

ಉತ್ತರ ಪ್ರದೇಶದಲ್ಲಿ ಬಿಜೆಪಿ ಆಪರೇಷನ್: ಅಖಿಲೇಶ್ ಯಾದವ್ ಕೈ ಬಿಟ್ಟು ಎನ್ ಡಿಎ ತೆಕ್ಕೆಗೆ ಹಾರಿದ ಮಾಜಿ ಸಚಿವ ರಾಜ್‌ಭರ್..!

16/07/2023

ಉತ್ತರ ಪ್ರದೇಶದ ಮಾಜಿ ಸಚಿವ ಮತ್ತು ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್ ಭರ್ ಇಂದು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್ ಡಿಎ) ಮತ್ತೆ ಸೇರಿದರು. ಜುಲೈ 18 ರಂದು ನಡೆಯಲಿರುವ ಎನ್ ಡಿಎ ಸಭೆಯಲ್ಲಿ ಭಾಗವಹಿಸುವುದಾಗಿ ರಾಜ್‌ಭರ್ ಇಂದು ಹೇಳಿದ್ದಾರೆ.

ಬಿಜೆಪಿ ಮತ್ತು ಎಸ್ಬಿಎಸ್ಪಿ ಒಗ್ಗೂಡುವುದು ರಾಜ್ಯದಲ್ಲಿ ದೊಡ್ಡ ಶಕ್ತಿಯನ್ನು ಸೃಷ್ಟಿಸುತ್ತದೆ. ಇದು ದುರ್ಬಲ ವರ್ಗಗಳ ಉನ್ನತಿಗಾಗಿ ಕೆಲಸ ಮಾಡುತ್ತದೆ ಎಂದರು. ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್‌ಭರ್, “ಎಸ್ಬಿಎಸ್ಪಿ ಮತ್ತು ಬಿಜೆಪಿ ಸೇರಿ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಲು ನಿರ್ಧರಿಸಿವೆ. ನಾವು ಜುಲೈ 14 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಭೆ ನಡೆಸಿದ್ದೇವೆ. ಇದೇ ವೇಳೆ ಸಮಾಜದ ಬಡ ಮತ್ತು ದೀನದಲಿತ ಜನರ ಕಲ್ಯಾಣ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದೇವೆ. ಅವರು ನಮ್ಮ ವಿಚಾರಗಳನ್ನು ಒಪ್ಪಿಕೊಂಡಿದ್ದಾರೆ ಎಂದರು.

ಎರಡೂ ಪಕ್ಷಗಳ ಒಗ್ಗೂಡುವಿಕೆಯು ರಾಜ್ಯದಲ್ಲಿ ದೊಡ್ಡ ಶಕ್ತಿಯನ್ನು ಸೃಷ್ಟಿಸುತ್ತದೆ. ಬಡವರು ಮತ್ತು ದುರ್ಬಲ ವರ್ಗಗಳ ಜೀವನವನ್ನು ಸುಧಾರಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಮುಂದುವರಿಸಲು ಸಹಾಯ ಮಾಡುತ್ತದೆ ಎಂದರು.


Provided by

ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಬೆಂಬಲಿಸುವುದಾಗಿ ಈ ಹಿಂದೆ ನೀಡಿದ್ದ ಅವರ ಹೇಳಿಕೆಯ ಬಗ್ಗೆ ಕೇಳಿದಾಗ ವಿರೋಧ ಪಕ್ಷಗಳಿಂದ ದೃಢೀಕರಣಕ್ಕಾಗಿ ಎಷ್ಟು ಸಮಯ ಕಾಯುವ ನಿರೀಕ್ಷೆ ಇದೆ ಎಂದು ರಾಜ್ ಭರ್ ಪ್ರಶ್ನಿಸಿದರು.

ನಾನು ಎಷ್ಟು ದಿನ ಕಾಯಬೇಕು..? ನಾನು ಅವರೊಂದಿಗೆ ಅನೇಕ ಬಾರಿ ಮಾತನಾಡಿದ್ದೇನೆ. ಆದರೆ ಅವರ ಕಡೆಯಿಂದ ನನಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದರು. “ಜುಲೈ 18 ರಂದು ದೆಹಲಿಯಲ್ಲಿ ನಡೆಯಲಿರುವ ಎನ್ ಡಿಎ ಸಭೆಯಲ್ಲಿ ನಾವು ಭಾಗವಹಿಸುತ್ತೇವೆ. ನನಗೆ ಸಚಿವ ಸ್ಥಾನ ಮುಖ್ಯವಲ್ಲ. ಈಗ ಉತ್ತರ ಪ್ರದೇಶದಲ್ಲಿ ಯಾವುದೇ ಸ್ಪರ್ಧೆ ಇಲ್ಲ ಎಂದು ರಾಜ್ ಭರ್ ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ ಭರ್ ರನ್ನು ಎನ್ ಡಿಎ ತೆಕ್ಕೆಗೆ ಸ್ವಾಗತಿಸಿದರು. ದೆಹಲಿಯಲ್ಲಿ ಓಂ ಪ್ರಕಾಶ್ ರಾಜ್ ಭರ್ ಜಿ ಅವರನ್ನು ಭೇಟಿಯಾದೆ. ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಲು ನಿರ್ಧರಿಸಿದರು. ನಾನು ಅವರನ್ನು ಎನ್ ಡಿಎ ಕುಟುಂಬಕ್ಕೆ ಸ್ವಾಗತಿಸುತ್ತೇನೆ. ರಾಜ್ ಭರ್ ಅವರ ಆಗಮನವು ಉತ್ತರಪ್ರದೇಶದಲ್ಲಿ ಎನ್ ಡಿಎಯನ್ನು ಬಲಪಡಿಸುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ. ಬಡವರು ಮತ್ತು ದೀನದಲಿತರ ಕಲ್ಯಾಣಕ್ಕಾಗಿ ಮೋದಿ ಅವರ ನಾಯಕತ್ವದಲ್ಲಿ ಎನ್ ಡಿಎ ಮಾಡುತ್ತಿರುವ ಪ್ರಯತ್ನಗಳು ಮತ್ತಷ್ಟು ಬಲವನ್ನು ಪಡೆಯುತ್ತವೆ ಎಂದು ಶಾ ಹೇಳಿದರು.

ಉತ್ತರ ಪ್ರದೇಶ ಬಿಜೆಪಿ ಸರ್ಕಾರದಲ್ಲಿ ಮಾಜಿ ಸಚಿವರಾಗಿದ್ದ (2017-2019) ರಾಜ್ ಭರ್ ಅವರನ್ನು ಮೈತ್ರಿ ವಿರೋಧಿ ಚಟುವಟಿಕೆಗಳಿಗಾಗಿ ವಜಾ ಮಾಡಲಾಗಿತ್ತು. ನಂತರ ಅವರು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು 2022ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಆ ಮೈತ್ರಿ ಕಳೆದ ವರ್ಷ ಜುಲೈನಲ್ಲಿ ಕೊನೆಗೊಂಡಿತು. ಎಸ್ಪಿ ಮೈತ್ರಿಕೂಟಕ್ಕೆ ಸೇರುವ ಮೊದಲು ರಾಜ್ಭರ್ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂನೊಂದಿಗೆ ಕೈಜೋಡಿಸಿದ್ದರು.

2024 ರ ಲೋಕಸಭಾ ಚುನಾವಣೆಯನ್ನು ಗಮನಿಸಿದರೆ, ಪೂರ್ವಾಂಚಲ್ ಪ್ರದೇಶದಲ್ಲಿ ಎಸ್ಬಿಎಸ್ಪಿ ಉಪಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಗೆ ಈ ಮೈತ್ರಿ ಮುಖ್ಯವಾಗಿದೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ