ಬೌದ್ಧ ಮೂಲದ ರಥೋತ್ಸವಗಳು | ರಘು ಧರ್ಮಸೇನ - Mahanayaka
9:52 AM Thursday 14 - November 2024

ಬೌದ್ಧ ಮೂಲದ ರಥೋತ್ಸವಗಳು | ರಘು ಧರ್ಮಸೇನ

budhist chariot
08/10/2021

ಲೇಖಕರು : ರಘು ಧರ್ಮಸೇನ

ಭಾರತ ಸಾಂಸ್ಕೃತಿಕ ಮತ್ತು ಧಾರ್ಮಿಕವಾಗಿ ವೈವಿಧ್ಯತೆಯನ್ನು ಹೊಂದಿರುವ ದೇಶ. ಬಹುಸಂಸ್ಕ್ರತಿಯ ಸಾಮಾಜಿಕ -ಸಾಂಸ್ಕೃತಿಕ ವ್ಯವಸ್ಥೆ ಭಾರತೀಯ ನಾಗರಿಕತೆಯ ಅಸ್ಮಿತೆಯಾಗಿದೆ. ಇಂತಹ ಹಿನ್ನೆಲೆಯಲ್ಲಿ ಬೌದ್ಧ ಮೂಲದ ರಥೋತ್ಸವಗಳು- ರಥಯಾತ್ರೆಗಳ ಬಗ್ಗೆ ಇತಿಹಾಸದ ವಿದ್ಯಾರ್ಥಿಗಳಾಗಿ ವಸ್ತುನಿಷ್ಠವಾಗಿ ಇತಿಹಾಸದ ವಿದ್ಯಮಾನವನ್ನು ತಿಳಿದುಕೊಳ್ಳುವುದು ತುಂಬಾ ಪ್ರಮುಖವಾಗುತ್ತದೆ.

ಬೌದ್ಧ ಧರ್ಮೀಯರು ಭಾರತದಲ್ಲಿ ರಥೋತ್ಸವಗಳನ್ನು ನಡೆಸುತ್ತಿದರು ಎಂಬುದರ ಬಗ್ಗೆ ಎ. ಎಚ್. ಲಾಂಗ್ ಹರ್ಸ್ಟ್ ಎಂಬ ವಿದ್ವಾಂಸ ನಮ್ಮ ಗಮನಕ್ಕೆ ತರುತ್ತಾನೆ. ಆತನ ಪ್ರಕಾರ “ಸಾಮಾನ್ಯವಾಗಿ ಯಾವನೇ ಒಬ್ಬ ವ್ಯಕ್ತಿ ರಥೋತ್ಸವಗಳನ್ನು ಹಿಂದೂ, ಪುರಿಯ ಜಗನ್ನಾಥ ಅಥವಾ ವಿಷ್ಣು ದೇವಸ್ಥಾನಗಳ ಜೊತೆ ಜೋಡಿಸುತ್ತಾನೆ. ಆದರೆ ಪ್ರಾಚೀನ ಕಾಲದಲ್ಲಿ ಪ್ರತಿ ವಸಂತ ಋತುವಿನಲ್ಲಿ ಬೌದ್ಧ ಧರ್ಮೀಯರು ಕೂಡಾ ರಥೋತ್ಸವಗಳನ್ನು ನಡೆಸುತ್ತಿದ್ದರು.” (The Story of Stupa; ಪುಟ, 7). ಈ ಹಿನ್ನೆಲೆಯಲ್ಲಿ ಬೌದ್ಧ ಮೂಲದ ರಥೋತ್ಸವಗಳ ಸಾಂಸ್ಕೃತಿಕ-ಧಾರ್ಮಿಕ ವಿಧಿ ವಿಧಾನಗಳನ್ನು – ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳುವುದು ಸಾಂಸ್ಕೃತಿಕ ಇತಿಹಾಸದ ಬೆಳಕಿನಲ್ಲಿ ಮುಖ್ಯವಾಗುತ್ತದೆ.

ಚೈನಾದ ಯಾತ್ರಿಕ ಫಾಹಿಯಾನ್ ( 400 AD) ಭಾರತದ ಖೋಟಾನ್ ಪ್ರದೇಶಗಳಲ್ಲಿ ಸಂಚರಿಸುವಾಗ ಕಂಡ ಬೌದ್ಧ ರಥ ಯಾತ್ರೆಗಳ ಬಗ್ಗೆ ಸಾಕ್ಷ್ಯ ನುಡಿಯುತ್ತಾನೆ. ಖೋಟಾನ್ ನ ರಾಜ ಬೌದ್ಧ ಧರ್ಮದ ಕಡು ಬೆಂಬಲಿಗನಾಗಿದ್ದು, ಫಾಹಿಯಾನ್ ಗೆ “ಗೋಮತಿ” ಎಂದು ಕರೆಯಲ್ಪಡುತ್ತಿದ್ದ ಬೌದ್ಧ ವಿಹಾರದಲ್ಲಿ ವಸತಿಯನ್ನು ಕಲ್ಪಿಸುತ್ತಾನೆ. ವಸಂತ ಋತುವಿನಲ್ಲಿ ನಡೆಯುತ್ತಿದ್ದ ಬೌದ್ಧ ರಥೋತ್ಸವವನ್ನು ಸ್ವತಃ ವೀಕ್ಷಿಸಲೆಂದೆ ಫಾಹಿಯಾನ್ ಮೂರು ತಿಂಗಳುಗಳ ಕಾಲ ಗೋಮತಿ ವಿಹಾರದಲ್ಲಿ ಉಳಿದುಕೊಳ್ಳುತ್ತಾನೆ. ರಥೋತ್ಸವದ ದಿನದಂದು ನಗರದ ಎಲ್ಲಾ ರಸ್ತೆಗಳನ್ನು ಗುಡಿಸಿ, ನೀರು ಸಿಂಪಡಿಸಿ, ತದನಂತರ ಬೀದಿಗಳನ್ನು ಅಲಂಕರಿಸುತ್ತಿದ್ದರು. ನಗರದ ಪ್ರವೇಶ ದ್ವಾರದಲ್ಲಿ ದೊಡ್ಡದಾದ ವೇದಿಕೆಯನ್ನು ನಿರ್ಮಿಸಿ ಎಲ್ಲಾ ರೀತಿಯ ಅಲಂಕಾರದ ವಸ್ತುಗಳಿಂದ ಅಲಂಕಾರ ಮಾಡುತ್ತಿದ್ದರು. ಈ ವೇದಿಕೆಯಲ್ಲಿ ರಾಜ, ರಾಣಿ ಮತ್ತು ಆಸ್ಥಾನದ ಹೆಂಗಸರು ಬಂದು ಆಸೀನರಾಗುತ್ತಿದ್ಫರು. ಗೋಮತಿ ವಿಹಾರದ ಮಹಾಯಾನ ಪಂಥದ ಭಿಕ್ಕುಗಳು ರಾಜನಿಂದ ಗೌರವಿಸಲ್ಪಟ್ಟು ನಂತರ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ನಗರದಿಂದ ಮೂರು ಅಥವಾ ನಾಲ್ಕು “ಲೀ” ಗಳಷ್ಟು (ಮೈಲಿ) ದೂರದಲ್ಲಿ ನಾಲ್ಕು ಚಕ್ರಗಳ 30 ಅಡಿ ಎತ್ತರದ , ಪೂಜೆ ಮತ್ತು ಅಲಂಕಾರಿಕ ವಸ್ತುಗಳಿಂದ ಅಲಂಕರಿಸಲ್ಪಟ್ಟ ಏಳು “ಚಳಿಸುತ್ತಿರುವ ಅರಮನೆ”ಯಂತೆ ಕಂಡು ಬರುವ ರಥವನ್ನು ರಚಿಸಿರುತ್ತಿದ್ದರು. ರಥಕ್ಕೆ ರೇಷ್ಮೆಯ ತೆರೆಗಳನ್ನು ಇಳಿಬಿಟ್ಟು ರೇಶ್ಮೆಯ ಛತ್ರಗಳನ್ನು ರಥದ ತುದಿಗೆ ಜೋಡಿಸುತ್ತಿದ್ದರು. ರಥದಲ್ಲಿ ಗೌತಮ ಬುದ್ಧನ ಮೂರ್ತಿಯನ್ನು ಇಬ್ಬರು ಬೋಧಿಸತ್ವರ ಮೂರ್ತಿಗಳ ಜೊತೆ ಇಡುತ್ತಿದ್ದರು. ಬೆಳ್ಳಿ ಮತ್ತು ಚಿನ್ನದಿಂದ ಮಾಡಲ್ಪಟ್ಟ ಎಲ್ಲಾ ರೀತಿಯ ಆಭರಣಗಳನ್ನು ರಥದಲ್ಲಿ ತೂಗಾಡುವಂತೆ ಜೋಡಿಸುತ್ತಿದ್ದರು. ನಗರದ ಪ್ರವೇಶ ದ್ವಾರಕ್ಕೆ ಮೆರವಣಿಗೆಯ ರಥ ತಲುಪಲು ಇನ್ನೇನು ನೂರು ಹೆಜ್ಜೆ ಇರಬೇಕೆನುವಷ್ಟರಲ್ಲಿ ರಾಜನು ತನ್ನ ಕಿರೀಟವನ್ನು ತೆಗೆದು, ಕೈಯಲ್ಲಿ ಊದುಬತ್ತಿ ಮತ್ತು ಹೂಗಳನ್ನು ಕೈಯಲ್ಲಿ ಹಿಡಿದುಕೊಂಡು ಬರಿಗಾಲಲ್ಲಿ ಮೆರವಣಿಗೆಯಲ್ಲಿ ಮುಂದೆ ಸಾಗುತ್ತಿದ್ದ. ರಾಜನ ಸಹಾಯಕರು ಅವನನ್ನು ಅನುಸರಿಸುತ್ತಿದ್ದರು. ಯಾತ್ರೆಯಲ್ಲಿ ಸಾಗುತ್ತಿದ್ದ ಬುದ್ಧನ ಮೂರ್ತಿಯನ್ನಿರಿಸಿದ ರಥದ ಬಳಿಗೆ ತಲುಪಿದ ನಂತರ ರಾಜನು ಬುದ್ಧನ ಮೂರ್ತಿಯ ಪಾದದ ಬಳಿ ಕುಳಿತು ಪ್ರಾರ್ಥನೆ ಸಲ್ಲಿಸುತ್ತಾನೆ. ರಥವು ನಗರವನ್ನು ಪ್ರವೇಶಿಸುವಾಗ ಪ್ರವೇಶ ದ್ವಾರದ ಗೋಪುರದಲ್ಲಿರುವ ರಾಣಿ ಮತ್ತು ಆಸ್ಥಾನದ ಹೆಂಗಸರು ಎಲ್ಲಾ ತರಹದ ಹೂಗಳನ್ನು ರಥದ ಮೇಲೆ ಚೆಲ್ಲುತ್ತಾರೆ.




ರಥೋತ್ಸವದ ವ್ಯವಸ್ಥಿತವಾಗಿದ್ದು ಹಾಗೂ ಕ್ರಮಗಳು ತುಂಬಾ ಧೀರ್ಘವಾಗಿರುತ್ತವೆ. ಭಿನ್ನ ಭಿನ್ನ ವಿಹಾರಗಳು ತಮ್ಮದೇ ಆದ ಬುದ್ದನ ಮೂರ್ತಿಗಳನ್ನು ಬೇರೆ ಬೇರೆ ದಿನಗಳಲ್ಲಿ ರಥೋತ್ಸವದಲ್ಲಿ ಮೆರವಣಿಗೆ ಮಾಡಲು ಅವಕಾಶ ಇದೆ. ಮತ್ತು ಈ ಎಲ್ಲಾ ವಿಹಾರಗಳ ಬುದ್ಧ ಮೂರ್ತಿಗಳು ಭಿನ್ನ ಭಿನ್ನವಾಗಿರುತ್ತವೆ. ರಥೋತ್ಸವ ಸುಮಾರು ಹದಿನಾಲ್ಕು ದಿನಗಳವರೆಗೆ ನಡೆಯುತ್ತದೆ. ಹದಿನಾಲ್ಕನೆಯ ದಿನ ರಾಜ ಮತ್ತು ರಾಣಿ ತಮ್ಮ ಅರಮನೆಗೆ ಹಿಂತಿರುಗುತ್ತಾರೆ. ಇದು ಫಾಹಿಯಾನ್ ಖೋಟಾನ್ ನಲ್ಲಿ ಕಂಡ ಬೌದ್ಧ ರಥಯಾತ್ರೆಯ ಚಿತ್ರಣ.

ಫಾಹಿಯಾನ್ ಭಾರತಕ್ಕೆ ಭೇಟಿ ನೀಡಿದ ಕಾಲದಲ್ಲಿ ಬೌದ್ಧ ರಥಯಾತ್ರೆಗಳು ದೇಶದ ಉದ್ದಕ್ಕೂ ಸಾಮಾನ್ಯವಾಗಿದ್ದವು ಎಂಬುದಾಗಿ ನಿಶ್ಚಿತವಾಗಿ ತೋರುತ್ತದೆ ಎಂದು ಲಾಂಗ್ ಹರ್ಸ್ಟ್ ಹೇಳುತ್ತಾನೆ. ಫಾಹಿಯಾನ್ ಪ್ರಾಚೀನ ಪಾಟಲಿಪುತ್ರದಲ್ಲಿ ನಡೆಯುತ್ತಿದ್ದ ಬೌದ್ಧ ರಥೋತ್ಸವದ ವಿವರಗಳನ್ನು ದಾಖಲಿಸುತ್ತಾನೆ. ನಾಲ್ಕು ಚಕ್ರಗಳ ರಥದ ಮೇಲೆ ಐದು ಹಂತಗಳ ಗೋಪುರವನ್ನು ಬಿದಿರುಗಳಿಂದ ಕೇಂದ್ರ ಭಾಗವು ಒಂದು ದೊಡ್ಡ “ತ್ರಿಶೂಲ” ದಿಂದ ಬಂಧಿಸುವಂತೆ ರಚಿಸುತ್ತಿದ್ದರು. ಈ ರಥವು 22 ಅಡಿ ಅಥವಾ ಅದಕ್ಕಿಂತಲೂ ಎತ್ತರವಾಗಿರುತಿತ್ತು. ರಥವು ಒಂದು ಪಗೋಡದಂತೆ ಕಂಡು ಬರುತ್ತಿತ್ತು. ರಥವನ್ನು ಉತ್ತಮವಾದ ಬಿಳಿನಾರು ಬಟ್ಟೆಯಿಂದ ಮುಚ್ಚಲಾಗುತ್ತಿತ್ತು. ನಂತರ ಆ ಬಟ್ಟೆಯ ಮೇಲೆ ಗಾಢವಾದ ಬಣ್ಣಗಳನ್ನು ಹಚ್ಚುತ್ತಿದ್ದರು.ಚಿನ್ನ ಬೆಳ್ಳಿಗಳಿಂದ ಹಾಗೂ ಕನ್ನಡಿಗಳಿಂದ ಅಲಂಕರಿಸಿ ಅವುಗಳನ್ನು ಕಸೂತಿ ಮಾಡಲ್ಪಟ್ಟ ರೇಶ್ಮೆ ಛತ್ರಗಳ (umbrella) ಅಡಿಯಲ್ಲಿ ನೇತಾಡಿಸುತ್ತಿದ್ದರು. ನಂತರ ರಥದ ನಾಲ್ಕು ಸುತ್ತಲೂ ನಾಲ್ಕು ಗುಡಿಗಳನ್ನು ರಚನೆ ಮಾಡಿ ಅವುಗಳಲ್ಲಿ ಗೌತಮ ಬುದ್ಧನ ಮೂರ್ತಿಗಳನ್ನು ಇರಿಸುತ್ತಿದ್ದರು.; ಜೊತೆಗೆ ಸಹಾಯಕ್ಕೆ ನಿಂತಿರುವ ಬೋಧಿಸತ್ವರ ಮೂರ್ತಿಗಳನ್ನು ಇಡಲಾಗುತ್ತಿತ್ತು. ಹೀಗೆ ಇಪ್ಪತ್ತು ರಥಗಳನ್ನು ಭಿನ್ನ ಭಿನ್ನವಾಗಿ ರಚನೆ ಮಾಡಿ ಅಲಂಕರಿಸುತ್ತಿದ್ದರು. ರಥಯಾತ್ರೆಯ ದಿನ ಭಿಕ್ಕುಗಳು ಮತ್ತು ಸಾಮಾನ್ಯ ಜನರು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದರು. ರಥಯಾತ್ರೆಯಲ್ಲಿ ವಿವಿಧ ಆಟೋಟಗಳು, ಸಂಗೀತ ಮನೋರಂಜನೆಗಳು ಇದ್ದು, ಜನರು ರಥಕ್ಕೆ ಊದಬತ್ತಿ ಮತ್ತು ಹೂಗಳನ್ನು ಅರ್ಪಿಸುತ್ತಿದ್ದರು. ಹಾಗೆಯೇ ಜನರು ಇಡೀ ರಾತ್ರಿ ನಗರದ ಬೀದಿಗಳಲ್ಲಿ ದೀಪಗಳನ್ನು ಉರಿಸಿ ಇಡುತ್ತಿದ್ದರು. ಹೀಗೆ ಸಂಗೀತ ಧಾರ್ಮಿಕ ಪೂಜಾರ್ಪಣೆಗಳನ್ನು ಒಳಗೊಂಡ ಬೌದ್ಧ ರಥಯಾತ್ರೆ ಅಥವಾ ರಥೋತ್ಸವ ನಡೆಯುತ್ತಿತ್ತು. ಈ ಚಿತ್ರಣದಿಂದ ಪ್ರಾಚೀನ ಭಾರತದ ರಥೋತ್ಸವಗಳ ಶೈಲಿಗಳು ಇಂದಿನ ಆಧುನಿಕ ಕಾಲದ ರಥೋತ್ಸವಗಳಂತೆಯೇ ಇತ್ತು ಎಂಬುದಾಗಿ ನಾವು ಕಲ್ಪಿಸಿಕೊಳ್ಳಬಹುದಾಗಿದೆ ಎಂದು ಲಾಂಗ್ ಹರ್ಸ್ಟ್ ಹೇಳುತ್ತಾನೆ. ಇಲ್ಲಿ ಗಮನಿಸಬೇಕಾದ ಬೌದ್ಧ ರಥಯಾತ್ರೆಯ ವಿಶೇಷತೆ ಮತ್ತು ಭಿನ್ನತೆ ಏನೆಂದರೆ; ಬೌದ್ಧ ರಥಯಾತ್ರೆಗಳು ನಗರದ ಹೊರಗಿನಿಂದ ನಗರದ ಒಳಗೆ ಬಂದು ನೆಲೆ ನಿಂತು ಅಲ್ಲಿ ಧಾರ್ಮಿಕ ವಿಧಿವಿಧಾನಗಳು ನೇರವೇರಲ್ಪಡುತ್ತದೆ. ಹಾಗೆಯೇ ರಾಜನು ತನ್ನ ಕಿರೀಟವನ್ನು ತೆಗೆದಿರಿಸಿ ಬರಿಗಾಲಲ್ಲಿ ಬುದ್ಧನ ಮೂರ್ತಿಯನ್ನು ಇರಿಸಿದ ರಥದ ಜೊತೆಗೆ ಮೆರವಣಿಗೆಯಲ್ಲಿ ಸಾಗಬೇಕಾಗುತ್ತದೆ.

ಹೀಗೆ ವಿಶಿಷ್ಟವಾದ ಹಾಗೂ ಧಾರ್ಮಿಕ ವಿಧಿ ವಿಧಾನಗಳಲ್ಲಿ ತುಂಬಾ ಭಿನ್ನವಾದ ಬೌದ್ಧ ರಥೋತ್ಸವಗಳು ಭಾರತದ ಸಾಂಸ್ಕೃತಿಕ ಬದುಕಿಗೆ ಮತ್ತು ಇತಿಹಾಸಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಕೊಡುವ ಮೂಲಕ ಶ್ರಿಮಂತಗೊಳಿಸಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಬುದ್ಧರ ದೃಷ್ಟಿಯಲ್ಲಿ ದೇವರು

ಪ್ರೊ.ಲಕ್ಷ್ಮಿ ನರಸು: ನಿಧನರಾಗಿ 65 ವರ್ಷಗಳ ನಂತರ ಕೃತಿ ಪ್ರಕಟಗೊಂಡ ಶ್ರೇಷ್ಠ ಬೌದ್ಧ ವಿದ್ವಾಂಸರೊಬ್ಬರ ಕತೆ

ಡಾ.ಅಂಬೇಡ್ಕರರ ಬುದ್ಧ ಪಯಣ | ರಘೋತ್ತಮ ಹೊ.ಬ

ಇತ್ತೀಚಿನ ಸುದ್ದಿ