ವಾಗ್ವಾದ ನಂತರ ಪ್ರಿಯತಮೆಯನ್ನು ಗುಂಡು ಹಾರಿಸಿ ಹತ್ಯೆಗೈದ ಪ್ರಿಯಕರ!

ನವದೆಹಲಿ: 20 ವರ್ಷದ ಯುವತಿಯನ್ನು ಸಾರ್ವಜನಿಕ ಸ್ಥಳದಲ್ಲೇ ಆಕೆಯ ಪ್ರಿಯಕರನೇ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿರುವ ಘಟನೆ ದೆಹಲಿಯ ಶಹದಾರಾದಲ್ಲಿ ನಡೆದಿದೆ.
ಸಾಯಿರಾ(20) ಹತ್ಯೆಗೀಡಾದ ಯುವತಿಯಾಗಿದ್ದು, ಈಕೆಯ ಪ್ರಿಯಕರ ರಿಜ್ವಾನ್ (20) ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ.
ಸೋಮವಾರ ರಾತ್ರಿ ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಲಾಗಿದ್ದು, ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ ಎಂದು ಪೊಲೀಸರಿಗೆ ಕರೆ ಬಂದಿದೆ. ತಕ್ಷಣವೇ ಜಿಟಿಬಿ ಎನ್ ಕ್ಲೇವ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳದಲ್ಲಿ ಯುವತಿಯ ಮೃತದೇಹ ಪತ್ತೆಯಾಗಿತ್ತು.
ಘಟನೆಯ ದೃಶ್ಯಾವಳಿ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಆರಂಭದಲ್ಲಿ ಇಬ್ಬರು ಜೊತೆಯಾಗಿ ಸಾಮಾನ್ಯವಾಗಿ ನಡೆದುಕೊಂಡು ಹೋಗುತ್ತಿದ್ದರು. ಆದರೆ ನಂತರ ಇಬ್ಬರ ನಡುವೆ ವಾಗ್ವಾದ ಆರಂಭವಾಗಿದೆ. ಅವರಿಬ್ಬರ ನಡುವೆ ಜಗಳವಾದಂತೆ ಕಂಡು ಬಂದಿತ್ತು. ಈ ವೇಳೆ ರಿಜ್ವಾನ್ ಪಿಸ್ತೂಲ್ ತೆಗೆದು ಆಕೆಯ ತಲೆಯ ಎಡಭಾಗಕ್ಕೆ ಮತ್ತು ಬೆನ್ನಿನ ಮೇಲೆ ಎರಡು ಬಾರಿ ಗುಂಡು ಹಾರಿಸಿದ್ದು, ಆಕೆ ಕುಸಿದು ಬಿದ್ದಾಗ ಸ್ಥಳದಿಂದ ಪರಾರಿಯಾಗಿದ್ದಾನೆ.
ಸಾಯಿರಾ ಮನೆಯವರ ಪ್ರಕಾರ, ಸೋಮವಾರ ರಾತ್ರಿ ಊಟದ ನಂತರ ಅವರು ಪರಿಶೀಲಿಸಿದಾಗ 10 ಗಂಟೆಯ ಸುಮಾರಿಗೆ ಸಾಯಿರಾ ಕೋಣೆಯಲ್ಲಿ ಇರಲಿಲ್ಲ. ಆಕೆ ಹಾಗೂ ರಿಜ್ವಾನ್ ಆಗಾಗ ಭೇಟಿಯಾಗುತ್ತಿದ್ದರು. ಹಾಗಾಗಿ ಅವರಿಗೆ ಅನುಮಾನ ಬಂದಿರಲಿಲ್ಲವಂತೆ. ಮಂಗಳವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ, ಪೊಲೀಸರು ಮನೆಗೆ ಬಂದಾಗಲೇ ಹತ್ಯೆ ನಡೆದಿರುವ ವಿಚಾರ ತಿಳಿದಿತ್ತಂತೆ.
ಸದ್ಯ ಆರೋಪಿಯು ಹತ್ಯೆ ನಡೆಸಲು ಎಲ್ಲಿಂದ ಪಿಸ್ತೂಲ್ ತೆಗೆದುಕೊಂಡಿದ್ದಾನೆ ಮತ್ತು ಈ ಬಗ್ಗೆ ಆತನನ್ನು ತನಿಖೆ ನಡೆಸಲು ಹಲವಾರ ತಂಡಗಳನ್ನು ರಚಿಸಲಾಗಿದೆ. ಇದು ಯೋಜಿತ ಕೊಲೆ ಎಂದು ಅನ್ನಿಸಿತು, ನಮ್ಮ ತಂಡ ಇಡೀ ಪ್ರಕರಣವನ್ನು ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: