ಬಿಪಿಎಲ್ ಕುಟುಂಬಗಳಿಗೆ 5 ಸಾವಿರ ರೂಪಾಯಿ ಘೋಷಿಸಿದ ಹರ್ಯಾಣ
ಗುರುಗ್ರಾಮ್: ಬಿಪಿಎಲ್ ಕುಟುಂಬಗಳಿಗೆ ಹರ್ಯಾಣ ಸರ್ಕಾರವು 5 ಸಾವಿರ ರೂಪಾಯಿಗಳ ಆರ್ಥಿಕ ನೆರವು ನೆರವು ಪ್ರಕಟಿಸಿದ್ದು, ಕೊವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಂದರ್ಭ ಲಾಕ್ ಡೌನ್ ಘೋಷಿಸಿದ ಸಂದರ್ಭದಲ್ಲಿ ಜನತೆ ಸಂಕಷ್ಟಕ್ಕೀಡಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಈ ಕ್ರಮ ಕೈಗೊಂಡಿದೆ.
ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಸೋಮವಾರ ಆರ್ಥಿಕ ನೆರವು ನೀಡುವ ಬಗ್ಗೆ ಮಾಹಿತಿ ನೀಡಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳ ಜೀವನೋಪಾಯಗಳು ಸ್ಥಗಿತಗೊಂಡಿದ್ದು, ಹೀಗಾಗಿ ಸರ್ಕಾರ 5 ಸಾವಿರ ರೂಪಾಯಿಗಳ ನೆರವು ನೀಡಲು ಮುಂದಾಗಿದೆ ಎಂದು ಹೇಳಿದ್ದಾರೆ.
ಮೇ 10 ರಿಂದ 17ರವರೆಗೆ ಒಂದು ವಾರ ‘ಸುರಕ್ಷಿತ ಹರಿಯಾಣ್’ ಘೋಷಿಸಲಾಗಿದ್ದು, ಜನರಿಗೆ ಆರ್ಥಿಕ ಭದ್ರತೆಯನ್ನು ನೀಡುವ ಮೂಲಕ ಸರ್ಕಾರ ಲಾಕ್ ಡೌನ್ ನಿಂದ ಜನರ ಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಂಡಿದೆ.
ಇನ್ನೂ ಕರ್ನಾಟಕದಲ್ಲಿ ಈ ಯೋಜನೆ ಬರುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ. ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಸಚಿವ ಕೆ.ಎಸ್.ಈಶ್ವರಪ್ಪ, “10 ಸಾವಿರ ನೀಡಲು ಸರ್ಕಾರ ನೋಟ್ ಪ್ರಿಂಟ್ ಮಾಡುತ್ತಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.