ದೇಶದ 2ನೇ ಅತೀ ದೊಡ್ಡ ಶ್ರೀಮಂತ ಪಕ್ಷ ಬಿಎಸ್ ಪಿಗೆ ಹೀನಾಯ ಸೋಲು | ಮಾಯಾವತಿಜಿ ಇದು ನ್ಯಾಯವೇ?
2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಭರ್ಜರಿ ಗೆಲುವು ದಾಖಲಿಸಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ದುರಾಡಳಿತವು ಎಲ್ಲ ರೀತಿಯಲ್ಲಿಯೂ ಬಿಜೆಪಿಯನ್ನು ಅಧಿಕಾರದಿಂದ ಇಳಿಸಲು ಇದ್ದ ಅವಕಾಶವನ್ನು ವಿಪಕ್ಷಗಳು ಕಳೆದುಕೊಂಡಿದ್ದು, ರಾಷ್ಟ್ರೀಯ ಪಕ್ಷ, ದೇಶದ ಎರಡನೇ ಅತೀ ದೊಡ್ಡ ಶ್ರೀಮಂತ ಪಕ್ಷ ಎಣಿಸಿಕೊಂಡಿರುವ ಬಹುಜನ ಸಮಾಜ ಪಾರ್ಟಿ(ಬಿಎಸ್ ಪಿ) ಕೇವಲ 1 ಸೀಟು ಗೆದ್ದು ಹೀನಾಯ ಸ್ಥಿತಿಯಲ್ಲಿದೆ.
ಬಿಎಸ್ ಪಿ ವರಿಷ್ಠೆ ಮಾಯಾವತಿ ಅವರು, ಚುನಾವಣೆ ಪ್ರಚಾರದಲ್ಲಿಯೂ ಮಂಕಾಗಿದ್ದರು. ಎಲ್ಲ ಪಕ್ಷಗಳು ಲವಲವಿಕೆಯಿಂದ ಪ್ರಚಾರ ಕಾರ್ಯ ನಡೆಸುತ್ತಿದ್ದರೆ. ಮಾಯಾವತಿಯವರು ಮೌನವಾಗಿರುವುದು ಹಲವಾರು ಪ್ರಶ್ನೆಗಳಿಗೆ ಕಾರಣವಾಗಿತ್ತು. ಮಾನ್ಯವರ್ ನಾನ್ಶಿರಾಮ್ ಅವರು ಹುಟ್ಟು ಹಾಕಿದ್ದ ಬಹುಜನ ಸಮಾಜ ಪಾರ್ಟಿ(ಬಿಎಸ್ ಪಿ) ಉತ್ತರ ಪ್ರದೇಶದಲ್ಲಿ ಸಿಂಹದಂತೆ ಘರ್ಜಿಸುತ್ತಿತ್ತು. ಆದರೆ ಇಂದು ಬಿಎಸ್ ಪಿ ಕೇವಲ 1 ಸೀಟು ಪಡೆದುಕೊಳ್ಳುವ ಮೂಲಕ ಮಾಯಾವತಿಯವರು ಏನು ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರೇ ಪ್ರಶ್ನಿಸುವಂತಾಗಿದೆ.
ಬಿಎಸ್ ಪಿ ಪಕ್ಷವನ್ನು ಯಾವಾಗ ಸತೀಶ್ ಚಂದ್ರ ಮಿಶ್ರಾ ಅವರು ನಿಯಂತ್ರಿಸಲು ಆರಂಭಿಸಿದರೋ ಅಂದಿನಿಂದ ಬಿಎಸ್ ಪಿಗೆ ತೀವ್ರವಾಗಿ ಹಾನಿಯಾಗಲು ಆರಂಭವಾಯಿತು. ಈ ನಡುವೆ ಮಾಯಾವತಿಯವರು ಸಣ್ಣ ಸಣ್ಣ ಕಾರಣಕ್ಕೂ ಪ್ರಬಲ ನಾಯಕರನ್ನು ಪಕ್ಷದಿಂದ ಅಮಾನತ್ತು ಮಾಡುತ್ತಲೇ ಬಂದರು. ಚಂದ್ರಶೇಖರ್ ಆಜಾದ್(ರಾವಣ), ಬಾಮ್ಸೆಫ್ ನ ವಾಮನ್ ಮೆಶ್ರಮ್ ಸೇರಿದಂತೆ ಉತ್ತರ ಪ್ರದೇಶದ ಘಟಾನುಘಟಿ ನಾಯಕರು ಬಿಎಸ್ ಪಿಯನ್ನು ಬೆಂಬಲಿಸಲು ತುದಿಗಾಲಲ್ಲಿ ನಿಂತಿದ್ದರು. ಆದರೆ, ಮಾಯಾವತಿಯವರ ಕಠಿಣ ನಿರ್ಧಾರಗಳಿಂದ ಅವರಿಗೆ ಬಿಎಸ್ ಪಿ ಮನೆ ಅಂಗಳಕ್ಕೂ ಪ್ರವೇಶ ಸಿಗಲಿಲ್ಲ.
ಇತ್ತೀಚೆಗೆ ಬಿಎಸ್ ಪಿಯಿಂದ ಕಾನ್ಶಿರಾಮ್ ಅವರ ಅನುಯಾಯಿಗಳು ನೊಂದು ಹೊರ ಹೋಗುವಂತಹ ಸ್ಥಿತಿಗಳು ನಿರ್ಮಾಣವಾಗುತ್ತಿರುವುದು ಕೂಡ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಕಾನ್ಶಿರಾಮ್ ಅವರು ಸ್ಥಾಪಿಸಿದ ಬಹುಜನ ಸಮಾಜ ಪಾರ್ಟಿಯನ್ನು ತಳ ಸಮುದಾಯದ ಜನರು ದೇಶದಲ್ಲಿ ಎರಡನೇ ಶ್ರೀಮಂತ ಪಕ್ಷವಾಗಿ ಮಾಡಿದ್ದಾರೆ. ಆದರೆ ಇಂದು ರಾಷ್ಟ್ರೀಯ ಪಕ್ಷವಾಗಿ ಬಿಎಸ್ ಪಿ ಕೇವಲ 1 ಸ್ಥಾನವನ್ನೇ ಗೆದ್ದಿರುವುದನ್ನು ಬಿಎಸ್ ಪಿ ನಾಯಕರು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ?
ಬಿಎಸ್ ಪಿಯನ್ನು ಸತೀಶ್ ಚಂದ್ರ ಮಿಶ್ರ ಎಂಬ ಕುತಂತ್ರಿಯ ಕೈಯಲ್ಲಿಟ್ಟಿರುವ ಮಾಯಾವತಿಯವರು ಇಂದು ಈ ಸೋಲಿನ ಹೊಣೆಯನ್ನು ಹೊತ್ತುಕೊಳ್ಳಲೇ ಬೇಕಿದೆ. ತಮ್ಮ ಸರ್ವಾಧಿಕಾರಿ ಧೋರಣೆಯನ್ನು ಬಿಟ್ಟು, ಕಾನ್ಶಿರಾಮ್ ಅವರು ಕಂಡಿದ್ದ ಸಮಸಮಾಜ ನಿರ್ಮಾಣದ ಕನಸನ್ನು ನನಸು ಮಾಡಲು ಮುಂದಾಗಬೇಕಿದೆ. ಕಾನ್ಶಿರಾಮರು ತಮ್ಮ ಕುಟುಂಬ, ಅತ್ಯುನ್ನತವಾದ ವಿಜ್ಞಾನಿ ಉದ್ಯೋಗ, ತಮ್ಮ ವೈಯಕ್ತಿಕ ಆಸೆ, ಆಕಾಂಕ್ಷೆಗಳನ್ನು ಬದಿಗೊತ್ತಿ, ದೇಶದ ಮೂಲೆ ಮೂಲೆಗೂ ಸೈಕಲ್ ನಲ್ಲಿ ಸುತ್ತಿ ಪಕ್ಷವನ್ನು ಬಲವಾಗಿ ಕಟ್ಟಿದ್ದರು. ಆದರೆ, ಇಂತಹ ಶ್ರೇಷ್ಠವಾದ ಪಕ್ಷವನ್ನು ಒಬ್ಬ ಕುತಂತ್ರಿಯ ಕೈಗೆ ಕೊಟ್ಟು ಮಾಯಾವತಿಯವರು ಸುಮ್ಮನೆ ಕುಳಿತಿರುವುದು ಎಷ್ಟು ಸರಿ? ಎನ್ನುವ ಪ್ರಶ್ನೆಗಳು ಇದೀಗ ಕೇಳಿ ಬಂದಿದೆ.
ಬಿಎಸ್ ಪಿ ಉಳಿಯಬೇಕಾದರೆ, ಮಾಯಾವತಿಯವರು ದೃಢವಾದ ನಿರ್ಧಾರಗಳನ್ನು ಕೈಗೊಳ್ಳಲೇ ಬೇಕಿದೆ. ಸಣ್ಣ ಸಣ್ಣ ಕಾರಣಗಳಿಗೂ ಪ್ರಬಲ ನಾಯಕರನ್ನು ಪಕ್ಷದಿಂದ ಕಿತ್ತೆಸೆಯುವ ಮಾಯಾವತಿಯವರು ಇಷ್ಟೊಂದು ದೊಡ್ಡ ಸೋಲಿನ ಬಳಿಕವೂ ಸತೀಶ್ ಚಂದ್ರ ಮಿಶ್ರಾ ಅವರ ವಿರುದ್ಧ ಕ್ರಮಕೈಗೊಳ್ಳದಿರುವುದು ಕಾರ್ಯಕರ್ತರ ಅಚ್ಚರಿಗೆ ಕಾರಣವಾಗಿದೆ. ಮಾಯಾವತಿಯವರು ತಕ್ಷಣವೇ ಸತೀಶ್ ಚಂದ್ರ ಮಿಶ್ರಾ ಪಟಾಳಂನ್ನು ಪಕ್ಷದಿಂದ ಹೊರ ಹಾಕಲಿ ಎನ್ನುವ ಒತ್ತಾಯಗಳು ಈ ಹೀನಾಯ ಸೋಲಿನ ಹಿಂದೆಯೇ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪೊಲೀಸರ ಮೇಲೆ ಹೆಜ್ಜೇನು ದಾಳಿ: ಇಬ್ಬರು ಗಂಭೀರ
ಕಚ್ಚಾ ತೈಲ ಬೆಲೆಯಲ್ಲಿ ಬಾರೀ ಇಳಿಕೆ
ಯುದ್ದ ಭೂಮಿಯಲ್ಲಿ ಉಕ್ರೇನಿಯನ್ ಸೈನಿಕನ ವಿಚಿತ್ರ ಪ್ರೇಮ ನಿವೇದನೆ
ಪಂಚರಾಜ್ಯ ಚುನಾವಣೆ: ರಾಜ್ಯದ ಮೇಲೆ ಪರಿಣಾಮ ಬೀರಲ್ಲ; ಸಚಿವ ವಿ.ಸೋಮಣ್ಣ
ಮೊದಲ ಬಾರಿಗೆ ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ಬಳಿಕ ಸಾವು