ಬುದ್ಧರ ಶಿಷ್ಯನಿಗೆ “ಪಿಶಾಚಿ”ಯ ಮಾತು ತಾಗಿತು | ಬುದ್ಧರು ಶಿಷ್ಯನಿಗೆ ಏನು ಹೇಳುತ್ತಾರೆ ಗೊತ್ತಾ?
ಪಟಾಚಾರನು ಸ್ಮಶಾನದ ಮಾರ್ಗವಾಗಿ ವಿಹಾರಕ್ಕೆ ಹಿಂದಿರುಗುತ್ತಿದ್ದನು. ಆಗ ಒಂದು ಪಿಶಾಚಿಯು ಪಟಾಚಾರನನ್ನು ಕುರಿತು ಹೀಗೆಂದಿತು: “ಅಯ್ಯಾ ನೀನು ಗೌತಮ ಬುದ್ಧನ ಶಿಷ್ಯನಾಗಿದ್ದಿ, ಆದರೆ ಏನು ಪ್ರಯೋಜನ? ಸುಂದರವಾದ ನಿನ್ನ ಜೀವನವನ್ನು ಭಿಕ್ಷೆ ಬೇಡಿ, ಇಲ್ಲ ಸಲ್ಲದ ಮಾತುಗಳನ್ನಾಡುತ್ತಾ, ಕಳೆಯುತ್ತಿರುವೆ” ಎಂದು ಹೇಳಿತು.
ಮುಂದುವರಿದ ವಿಶಾಚಿ, “ನಿನ್ನ ಮನೆಗೆ ಹಿಂದಿರುಗಿ ತಂದೆ-ತಾಯಿಯ ಸೇವೆ ಮಾಡು. ದುಡಿ ಶ್ರೀಮಂತನಾಗು” ಎಂದು ಹೇಳಿತು. ಈ ಪಿಶಾಚಿಯ ಮಾತುಗಳು ಪಟಾಚಾರನ ಕಿವಿಯಲ್ಲಿ ಹಾಗೆಯೇ ರಿಂಗುಣಿಸುತ್ತಿತ್ತು. ಆತ ವಿಹಾರಕ್ಕೆ ಮರಳಿ ಬುದ್ಧರನ್ನು ಭೇಟಿ ಮಾಡಿ ನಡೆದ ವಿಚಾರಗಳನ್ನು ತಿಳಿಸುತ್ತಾನೆ.
ಪಟಾಚಾರನ ಮಾತುಗಳನ್ನು ಕೇಳಿದ ಬುದ್ಧರು ಬಹಳ ಆಶ್ಚರ್ಯಕರವಾದ ಮಾತುಗಳನ್ನಾಡುತ್ತಾರೆ, ಪಿಶಾಚಿಯ ಮಾತು “ಸದ್ಗುಣವಂತನ ಮಾತಾಗಿದೆ ಹಾಗೆಯೇ ಮಾಡು” ಎಂದು ಬುದ್ಧರು ಹೇಳುತ್ತಾರೆ.
ಮೇಲೆ ಹೇಳಲಾಗಿರುವ “ಪಿಶಾಚಿ” ಅದು ನಮ್ಮ ಅಂತರಾತ್ಮ ಅಥವಾ ಹೊರಗಡೆ ನಮ್ಮ ಗುರಿಯನ್ನು ತಪ್ಪಿಸುವ ವ್ಯಕ್ತಿಗಳು ಆಗಿರುತ್ತದೆ. ನಮ್ಮ ಅಂತರಾತ್ಮವು ನಮಗೆ ಏನಾದರೂ ಸಲಹೆಗಳನ್ನು ನೀಡುತ್ತಲೇ ಇರುತ್ತದೆ. ಅದರ ಸಲಹೆಗಳನ್ನು ನಾವು ಜೀವನದಲ್ಲಿ ಹೇಗೆ ತೆಗೆದುಕೊಳ್ಳಬೇಕು ಎನ್ನುವುದನ್ನು ನಾವೇ ನಿರ್ಧರಿಸಬೇಕಾಗುತ್ತದೆ. ಹೊರಗಿನ ವ್ಯಕ್ತಿಗಳೂ ಹಾಗೆ ನಾವು ಯಾವುದೋ ದಾರಿಯಲ್ಲಿ ಪ್ರಯಾಣಿಸುತ್ತಿರುವಾಗ ಬಿಟ್ಟಿ ಸಲಹೆಗಳನ್ನು ಬೇಕಾದಷ್ಟು ಕೊಡುತ್ತಾರೆ. ಪಟಾಚಾರನ ಮನಸ್ಸು ಚಂಚಲವಾಗಿತ್ತು. ಆತನ ಮನಸ್ಸು ಅಥವಾ ಹೊರಗಿನ ಶಕ್ತಿ ಆತ ಹೋಗುತ್ತಿದ್ದ ದಾರಿಯನ್ನು ಗೊಂದಲಕ್ಕೀಡು ಮಾಡಿತ್ತು. ಹಾಗಾಗಿಯೇ ಆತ ಸಾಗುತ್ತಿರುವ ದಾರಿಯ ಗುರಿಯಲ್ಲಿ ಆತ ಗೊಂದಲಕ್ಕೀಡಾಗುತ್ತಾನೆ. ಬಹುಶಃ ಬುದ್ಧರು ಈ ಕಾರಣಕ್ಕಾಗಿಯೇ “ಸರಿ ಹಾಗೆಯೇ ಮಾಡು” ಎಂದಿದ್ದಾರೆ.