ತಮಿಳುನಾಡಿನಲ್ಲಿ ಬುರೆವಿ ಚಂಡಮಾರುತ ಅಟ್ಟಹಾಸ | 11 ಜನರ ದಾರುಣ ಸಾವು
ಚೆನ್ನೈ: ಬುರೆವಿ ಚಂಡಮಾರುತಕ್ಕೆ ತಮಿಳುನಾಡಿನ ವಿವಿಧೆಡೆಗಳಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 11 ಜನರು ಸಾವನ್ನಪ್ಪಿದ್ದಾರೆ. ಭಾರೀ ಗಾಳಿ ಮಳೆಯ ಹಿನ್ನೆಲೆಯಲ್ಲಿ ತಮಿಳುನಾಡಿನ ವಿವಿಧೆಡೆಗಳಲ್ಲಿ ಅನಾಹುತಗಳು ನಡೆದಿವೆ.
ತಮಿಳುನಾಡಿನ ಕಡಲೂರಿನಲ್ಲಿ ಮನೆ ಕುಸಿದು ಬಿದ್ದ ಪರಿಣಾಮ ತಾಯಿ ಮತ್ತು ಮಗಳು ದಾರುಣವಾಗಿ ಮೃತಪಟ್ಟಿದ್ದಾರೆ. ಕಂಚಿಪುರಂನಲ್ಲಿ ಮೂವರು ಮಹಿಳೆಯರು ಪ್ರವಾಹಕ್ಕೆ ಸಿಲುಕಿ ನೀರುಪಾಲಾಗಿದ್ದು, ಅವರು ಮೃತಪಟ್ಟಿದ್ದಾರೆ. ಇಬ್ಬರು ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ್ದಾರೆ. ಉಳಿದಂತೆ ಚೆನ್ನೈ, ಪುದುಕೊಟ್ಟೈ ಮತ್ತು ತಂಜಾವೂರಿನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ದಕ್ಷಿಣ ಜಿಲ್ಲೆಗಳಾದ ರಾಮನಾಥಪುರಂ, ತೂತುಕುಡಿ ಮತ್ತು ಕಡಲೂರಿನಲ್ಲಿ ಭಾರೀ ಗಾಳಿ ಮಳೆಯಾಗಿದೆ. ಇಲ್ಲಿನ ಚಿದಂಬರಂ ನಟರಾಜ ದೇವಸ್ಥಾನ ಪ್ರವಾಹಕ್ಕೆ ಸಿಲುಕಿದೆ. ತಂಜಾವೂರು ಜಿಲ್ಲೆಗಳಲ್ಲಿ 500 ಮನೆಗಳು ನಾಶವಾಗಿದೆ. ವ್ಯಾಪಕ ಬೆಳೆ ನಾಶವಾಗಿದೆ.
ಈ ನಡುವೆ ಕೇರಳದಲ್ಲಿ ಇದೇ ಭಾರೀ ಮಳೆ ಪಥನಮತ್ತತ್ತ ಮತ್ತು ಕೊಲ್ಲಂಗೆ ಅಪ್ಪಳಿಸಿದೆ. ಇಂದು ತೀವ್ರ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇಡುಕ್ಕಿ ಮತ್ತು ಮಲಪ್ಪರಂನಲ್ಲಿ ಆರೆಂಜ್ ಅಲಾರ್ಟ್ ನೀಡಲಾಗಿದೆ. ತಿರುವನಂತಪುರಂ, ಕೊಲ್ಲಂ ಮತ್ತು ಆಲಪ್ಪುಳ ಜಿಲ್ಲೆಗಳಲ್ಲೆ ಹಳದಿ ಅಲಾರ್ಟ್ ನೀಡಲಾಗಿದೆ.