ಬಸ್ ನಿಲ್ದಾಣದಲ್ಲಿ ಕೇಳಿಸಿತ್ತು ಮಗು ಅಳುವ ಶಬ್ದ | ಆ ದೃಶ್ಯ ಕಂಡು ಬೆಚ್ಚಿಬಿದ್ದ ಸ್ಥಳೀಯರು!
ಗದಗ: ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಎರಡು, ಮೂರು ದಿನದ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಎಸೆದ ಘಟನೆ ನಡೆದಿದ್ದು, ಮಗು ಅಳುವ ಶಬ್ಧ ಕೇಳಿ, ಸ್ಥಳೀಯರು ನೋಡಿದಾಗ ಮಗುವನ್ನು ಎಸೆದಿರುವುದು ಪತ್ತೆಯಾಗಿದೆ.
ತಕ್ಷಣವೇ ಮಗುವನ್ನು ರಕ್ಷಣೆ ಮಾಡಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಟ್ಟೆಯಿಂದ ಮಗುವನ್ನು ಸುತ್ತಿದ್ದರಿಂದಾಗಿ ಮಗುವಿಗೆ ಉಸಿರುಗಟ್ಟಿದ್ದು, ಇದರಿಂದಾಗಿ ತಕ್ಷಣವೇ ಇಲ್ಲಿನ ಜೆಮ್ಸ್ ಆಸ್ಪತ್ರೆಗೆ ಮಗುವನ್ನು ಸಾಗಿಸಲಾಗಿದೆ. ಸದ್ಯ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಹೆಣ್ಣು ಮಗುವನ್ನು ಸಾಮಾನ್ಯವಾಗಿ ಎಸೆದು ಹೋಗುವ ಪ್ರಕರಣಗಳು ನಡೆಯುತ್ತಿದೆ. ಆದರೆ ಈ ಮಗು ಗಂಡಾಗಿದ್ದು, ಆದರೂ ಏಕೆ ಎಸೆದು ಹೋಗಿದ್ದಾರೆ ಎಂದು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇನ್ನೂ ಮಗುವಿಗೆ ಚಿಕಿತ್ಸೆ ನೀಡಿದ ಬಳಿಕ ಪ್ರತಿಕ್ರಿಯಿಸಿದ ವೈದ್ಯರು, ಮಗುವು ಅವಧಿಗಿಂತ ಮೊದಲು ಜನಿಸಿರಬಹುದು ಹೀಗಾಗಿ ಮಗುವಿನ ತೂಕ ಕಡಿಮೆ ಇದೆ ಎಂದು ತಿಳಿಸಿದ್ದಾರೆ.
ಈ ಕೃತ್ಯ ಎಸಗಿರುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಗೋಡಿಕಿಂಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅವಿನಾಶ್ ಹೇಳಿದ್ದಾರೆ.