“ಊಟ ಮಾಡಿ ಬನ್ನಿ” ಎಂದು ಬಸ್ಸಿನಿಂದ ಇಳಿಸಿ ಪ್ರಯಾಣಿಕರಿಗೆ ಶಾಕ್ ನೀಡಿದ ಡ್ರೈವರ್, ಕ್ಲೀನರ್!

ಕೇರಳದಿಂದ ಅಸ್ಸಾಂಗೆ ತೆರಳಿದ್ದ ಬಸ್ ನ ಚಾಲಕ ಹಾಗೂ ಕ್ಲೀನರ್ ಪ್ರಯಾಣಿಕರಿಗೆ ಮರೆಯಲಾರದ ಶಾಕ್ ನೀಡಿರುವ ಘಟನೆ ನಡೆದಿದ್ದು, ಪ್ರಯಾಣಿಕರನ್ನು ಊಟ ಮಾಡಿ ಬನ್ನಿ ಎಂದು ಕಳುಹಿಸಿದ ಡ್ರೈವರ್ ಕ್ಲೀನರ್, ಯಾರು ಕೂಡ ನಿರೀಕ್ಷೆ ಮಾಡದಿರುವ ಕುಕೃತ್ಯವನ್ನು ನಡೆಸಿದ್ದಾರೆ.
64 ಜನರಿದ್ದ ಬಸ್ ಕೇರಳದಿಂದ ಅಸ್ಸಾಂಗೆ ಹೊರಟಿತ್ತು. ನಲ್ಗೊಂಡದ ನರ್ಕತ್ ಪಲ್ಲಿ ಬಳಿ ಬರುತ್ತಿದ್ದಂತೆಯೇ ಚಾಲಕ ಬಸ್ ನಿಲ್ಲಿಸಿದ್ದಾನೆ. ನೀವೆಲ್ಲರೂ ಊಟ ಮಾಡಿ ಬನ್ನಿ, ಬಸ್ಸಿನಲ್ಲಿ ಸ್ವಲ್ಪ ಸಮಸ್ಯೆ ಇದೆ. ಇಲ್ಲೇ ಗ್ಯಾರೇಜ್ ಗೆ ಹೋಗಿ ಸರಿ ಮಾಡಿಕೊಂಡು ಬರುತ್ತೇವೆ ಎಂದು ಚಾಲಕ ಹಾಗೂ ಕ್ಲೀನರ್ ಹೇಳಿದ್ದಾರೆ. ಹೀಗಾಗಿ ಪ್ರಯಾಣಿಕರೆಲ್ಲರೂ ತಮ್ಮ ಲಗೇಜ್ ಎಲ್ಲವನ್ನೂ ಬಸ್ ನಲ್ಲಿಯೇ ಬಿಟ್ಟು ಬಸ್ಸಿನಿಂದ ಇಳಿದು ಸಮೀಪದ ಹೊಟೇಲ್ ಗೆ ಹೋಗಿ ಊಟ ಮಾಡಿ ಬಂದು ಬಸ್ಸಿಗಾಗಿ ಕಾದಿದ್ದಾರೆ.
ಬಸ್ಸಿನಿಂದ ಇಳಿದು ಗಂಟೆಗಟ್ಟಲೆ ಕಾದರೂ ಬಸ್ಸೂ ಬರಲಿಲ್ಲ, ಡ್ರೈವರ್ ಕ್ಲೀನರ್ ಸಂಪರ್ಕಕ್ಕೂ ಸಿಗಲಿಲ್ಲ. ಕೊನೆಗೆ ಆತಂಕಗೊಂಡ ಪ್ರಯಾಣಿಕರು ತಕ್ಷಣವೇ ಪೊಲೀಸ್ ತುರ್ತುಕರೆ ನಂಬರ್ 100ಕ್ಕೆ ಕರೆ ಮಾಡಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಕ್ಷಣವೇ ಪ್ರಯಾಣಿಕರಿಗೆ ರಾತ್ರಿ ಕಳೆಯಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಸದ್ಯ ಚಾಲಕ ಹಾಗೂ ಕ್ಲೀನರ್ ನ ಫೋನ್ ನಂಬರ್ ಆಧರಿಸಿ ತನಿಖೆ ಮಾಡುತ್ತಿದ್ದಾರೆ. ಪ್ರಯಾಣಿಕರ ಲಗೇಜ್ ನಲ್ಲಿ ಬೆಲೆಬಾಳುವ ವಸ್ತುಗಳು, ನಗದುಗಳು ಇದ್ದವು ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka