ಜಿಲ್ಲಾಧಿಕಾರಿಗಳ ಸಾಹಸ ಕಾರ್ಯದಿಂದ ಬಸ್ ಸಿಗದೇ ಪರದಾಡಿದ ವಿದ್ಯಾರ್ಥಿನಿಯರು - Mahanayaka
4:24 PM Wednesday 5 - February 2025

ಜಿಲ್ಲಾಧಿಕಾರಿಗಳ ಸಾಹಸ ಕಾರ್ಯದಿಂದ ಬಸ್ ಸಿಗದೇ ಪರದಾಡಿದ ವಿದ್ಯಾರ್ಥಿನಿಯರು

udupi dc jagadeesh
20/04/2021

ಉಡುಪಿ: ಸರ್ಕಾರ ಅಥವಾ ಸರ್ಕಾರಿ ಅಧಿಕಾರಿಗಳಿಗೆ ತಾವು ಹಾಕಿರುವ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು ಎನ್ನುವುದಷ್ಟೇ ಮುಖ್ಯ. ಆದರೆ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಅವರು ಮುಂದಾಗುವುದಿಲ್ಲ ಎನ್ನುವುದು ಬಹಳಷ್ಟು ಬಾರಿ ನಡೆದಿದೆ. ಇದೀಗ ಉಡುಪಿ ಜಿಲ್ಲಾಧಿಕಾರಿ ಮಾಡಿದ ಸಾಹಸದಿಂದ ವಿದ್ಯಾರ್ಥಿನಿಯರು ರಸ್ತೆ ಮಧ್ಯೆ ಬಸ್ ಸಿಗದೇ ಪರದಾಡಿರುವ ಘಟನೆ ವರದಿಯಾಗಿದೆ.

ಬಸ್ ನಲ್ಲಿ ಸಾಮಾಜಿಕ ಅಂತರ ಕಾಪಾಡದೇ, ಮಾಸ್ಕ್ ಧರಿಸದೇ, ಕೊವಿಡ್ ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ ಬಸ್ಸೊಂದು  ಪ್ರಯಾಣಿಕರನ್ನು ಹೇರಿಕೊಂಡು ಪ್ರಯಾಣಿಸುತ್ತಿತ್ತು. ಈ ಬಸ್ ನ್ನು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಡೆದಿದ್ದಾರೆ. ಬಸ್ ತಡೆದು ಚಾಲಕ ಹಾಗೂ ಕಂಡೆಕ್ಟರ್ ನ್ನು ತರಾಟೆಗೆತ್ತಿಕೊಂಡಿದ್ದಾರೆ.

ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶವನ್ನು ಪಾಲಿಸಬೇಕು ಎನ್ನುವುದು ಜಿಲ್ಲಾಧಿಕಾರಿಗಳ ಕ್ರಮವಾಗಿತ್ತು. ಇದನ್ನು ಸಾರ್ವಜನಿಕರು ಕೂಡ ಒಪ್ಪುತ್ತಾರೆ. ಆದರೆ ಸಾರ್ವಜನಿಕರ ಸಮಸ್ಯೆಯೇನು ಎನ್ನುವುದು ಜಿಲ್ಲಾಧಿಕಾರಿಗಳು ಗಮನಿಸಬೇಕು ಎನ್ನುವುದು ಸಾರ್ವಜನಿಕರ ಅಳಲಾಗಿದೆ.

ಬಸ್ ನಿಂದ ಪ್ರಯಾಣಿಕರನ್ನು ಇಳಿಸಿದ ಡಿಸಿ ಕಂಡೆಕ್ಟರ್ ಬಳಿಯಿಂದ ಪ್ರಯಾಣಿಕರಿಗೆ ಹಣ ವಾಪಸ್ ಕೊಡಿಸಿದ್ದಾರೆ. ಬಸ್ ನಿಂದ ಇಳಿದು ಮತ್ತೊಂದು ಬಸ್ ಗೆ ಪ್ರಯಾಣಿಕರು ಕಾದಿದ್ದಾರೆ. ಆ ಬಸ್ ನಲ್ಲಿ ಕೂಡ ಜನರು ಅಷ್ಟೇ ಇದ್ದರು. ಈ ಬಸ್ ನಲ್ಲಿದ್ದ ವಿದ್ಯಾರ್ಥಿನಿಯರು ಬಸ್ ಸಿಗದೇ ಕಂಗಾಲಾಗಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯೋರ್ವಳು ತೀವ್ರ ಆಕ್ರೋಶ ಹೊರ ಹಾಕಿದ್ದು, ಜಿಲ್ಲಾಧಿಕಾರಿಗಳು ನಮ್ಮನ್ನು ಇಲ್ಲಿ ಇಳಿಸಿ ಹೋಗಿದ್ದಾರೆ. ನಮ್ಮ ಮನೆ ತುಂಬಾ ದೂರ ಇದೆ,   ಕತ್ತಲಾಗುತ್ತಿದೆ. ನಾವು ಹೇಗೆ ಇಲ್ಲಿಂದ ಮನೆಗೆ ಹೋಗುವುದು ಎಂದು ಪ್ರಶ್ನಿಸಿದ್ದಾಳೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸರ್ಕಾರದ ರೂಲ್ಸುಗಳು ಅರ್ಧಂಬರ್ಧವಾಗಿದ್ದು, ತಮ್ಮ ತಲೆಯ ಮೇಲಿನ ಹೊರೆಯನ್ನಷ್ಟೇ ಸರ್ಕಾರ ತಪ್ಪಿಸುತ್ತಿದೆ. ಇದರಿಂದ ಸಾರ್ವಜನಿಕರು ಪ್ರತಿನಿತ್ಯ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಒಂದು ರೂಲ್ ಮಾಡುವಾಗ ಅದರ ಹಿನ್ನೆಲೆಯನ್ನು ಅರಿತು ಮಾಡಬೇಕು. ಜಿಲ್ಲಾಧಿಕಾರಿಗಳು ಹೆಣ್ಣು ಮಕ್ಕಳನ್ನು ನಡು ರಸ್ತೆಯಲ್ಲಿ ಬಸ್ ನಿಂದ ಇಳಿಸಿ ಹೋದರೆ, ಬಸ್ ಸಿಗದೇ, ಹೆಣ್ಣು ಮಕ್ಕಳಿಗೆ ಏನಾದರೂ ತೊಂದರೆಯಾದರೆ ಯಾರು ಜವಾಬ್ದಾರಿ? ಬಸ್ ನಿಂದ ಇಳಿಸಿದ ಬಳಿಕ ಪ್ರಯಾಣಿಕರಿಗೆ ಏನೂ ವ್ಯವಸ್ಥೆ ಮಾಡಿಕೊಡಲು ಸಾಧ್ಯವಿಲ್ಲದಿದ್ದರೆ, ಜಿಲ್ಲಾಧಿಕಾರಿಗಳು ಯಾವ ಅರ್ಹತೆ ಹೊತ್ತು ಸಾರ್ವಜನಿಕರನ್ನು ಬಸ್ ನಿಂದ ಇಳಿಸಬೇಕಿತ್ತು ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ