ಬಸ್ ಗಾಗಿ ಕಾಯುತ್ತಿದ್ದವರ ಮೇಲೆ ಹರಿದ ಲಾರಿ | ಬಾಲಕಿ ದಾರುಣ ಸಾವು
12/04/2021
ಯಾದಗಿರಿ: ಬಸ್ ನಿಲ್ದಾಣದ ಮುಂದೆ ನಿಂತಿದ್ದ ಪ್ರಯಾಣಿಕರ ಮೇಲೆ ಸಿಮೆಂಟ್ ಲಾರಿ ಹರಿದ ಪರಿಣಾಮ ಬಾಲಕಿ ಮೃತಪಟ್ಟು, ನಾಲ್ವರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಸಮೀಪದ ಬೋರಬಂಡದಲ್ಲಿ ನಡೆದಿದೆ.
ಗುರುಮಿಠಕಲ್ ಗೆ ಬರಲು ಬಸ್ ನಿಲ್ದಾಣದ ಮುಂದೆ ಪ್ರಯಾಣಿಕರು ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಪ್ರಯಾಣಿಕರ ಮೇಲೆ ಹರಿದಿದ್ದು, ಮೂರು ವರ್ಷದ ಬಾಲಕಿ ಮೋನಿಕಾ ಲಾರಿಯಡಿಗೆ ಸಿಲುಕಿದ್ದು, ದೇಹ ಛಿದ್ರಛಿದ್ರವಾಗಿದೆ.
ಉಳಿದ ಪ್ರಯಾಣಿಕರಿಗೆ ಗಂಭೀರವಾಗಿ ಗಾಯವಾಗಿದ್ದು, ಗುರುಮಿಠಕಲ್ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕನನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಅಪಘಾತ ಸಂಭವಿಸಿದ ತಕ್ಷಣ ಆಂಬುಲೆನ್ಸ್ ಲಭ್ಯವಾಗಲಿಲ್ಲ. ಈ ವೇಳೆ ಪೊಲೀಸರು 112 ಮತ್ತು ಹೈವೆ ಪ್ಯಾಟ್ರೋಲಿಂಗ್ ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.