ಮಕ್ಕಳೇ ಕರೆ ಮಾಡಿ ಸರ್ ಇವತ್ತು ರಜೆ ಉಂಟಾ..? ಅಂತ ಕೇಳ್ತಿದ್ದರು: ಮಳೆ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿವರಿಸಿದ್ದು ಹೀಗೆ…
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ತೀವ್ರವಾಗಿದ್ದ ವೇಳೆ ರಾತ್ರಿ ಹೊತ್ತು, ಮುಂಜಾನೆ ಮಕ್ಕಳೇ ಕರೆ ಮಾಡಿ ಸರ್ ಇವತ್ತು ರಜೆ ಉಂಟಾ..? ನಮ್ಮ ಮನೆಯ ಎದುರು ಪ್ರವಾಹ ಬಂದಿದೆ. ಶಾಲೆಗೆ ಹೋಗಲು ಕಷ್ಟ. ರಜೆ ಇದ್ಯಾ ಎಂದು ನನ್ನ ಮೊಬೈಲ್ ಗೆ ಮಕ್ಕಳೇ ಕರೆ ಮಾಡುತ್ತಿದ್ದರು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.
ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಭಾರೀ ಮಳೆಯ ಸಂದರ್ಭದಲ್ಲಿ ಮಕ್ಕಳು ಶಾಲೆಗೆ ಹೋಗುವುದು ಕಷ್ಟ. ಹೀಗಾಗಿ ಜಿಲ್ಲೆಯ ಹವಾಮಾನ ಮುನ್ನೆಚ್ಚರಿಕೆಯನ್ನು ಗಮನದಲ್ಲಿರಿಸಿ ರಜೆ ಘೋಷಿಸಲಾಗುತ್ತದೆ. ಆದರೆ ಕೆಲವೊಮ್ಮೆ ರಜೆ ಕೊಟ್ಟ ದಿನ ಮಳೆಯೇ ಇರುವುದಿಲ್ಲ. ಪಿಯುಸಿವರೆಗೆ ರಜೆ ಕೊಟ್ಟಾಗ, ಪದವಿ ಮಕ್ಕಳಿಗೆ ಬೇಸರ. ಈ ಸಂದರ್ಭ ಕೆಲವೊಂದು ಹಾಸ್ಯಮಯ ಟ್ರೋಲ್ ಗಳು ಬರುತ್ತವೆ. ನಗು ಬರುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಮಕ್ಕಳೇ ರಜೆಗಾಗಿ ಕರೆ ಮಾಡಿದಾಗ ಕೆಲವೊಮ್ಮೆ ಪೇಚಿಗೆ ಸಿಲುಕುವ ಪರಿಸ್ಥಿತಿ ಎಂದು ಜಿಲ್ಲಾಧಿಕಾರಿ ಮುಗುಳ್ನಕ್ಕರು.
ಇಂತಹ ಅವಸ್ಥೆ ತಪ್ಪಿಸುವ ಸಲುವಾಗಿ ರಜೆಯ ಅವಧಿಯನ್ನು ಮಳೆಗಾಲಕ್ಕೆ ವಿಸ್ತರಿಸಿ ಬೇಸಿಗೆ ಸಂದರ್ಭ ಶಾಲೆಗಳನ್ನು ನಡೆಸುವ ಪ್ರಸ್ತಾಪವೂ ಚಿಂತನೆಯಲ್ಲಿದೆ ಎಂದು ಅವರು ಹೇಳಿದರು.
ಇನ್ನು ಜಿಲ್ಲೆಯಲ್ಲಿ ಸರಕಾರಿ ಬಸ್ಸುಗಳ ಓಡಾಟಕ್ಕಿರುವ ಸಮಸ್ಯೆ, ಇಲೆಕ್ಟ್ರಿಕ್ ಆಟೋರಿಕ್ಷಾಗಳು ಸೇರಿದಂತೆ ಸಾರಿಗೆ ಸಂಬಂಧಿಸಿತ ಸಮಸ್ಯೆಗಳ ಬಗ್ಗೆ ಶೀಘ್ರವೇ ರಸ್ತೆ ಸಾರಿಗೆ ಪ್ರಾಧಿಕಾರದ ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿನ ಹೊಂಡ ಗುಂಡಿಗಳು, ಒಳಚರಂಡಿ ಅವ್ಯವಸ್ಥೆ ಮೊದಲಾದ ಬಗ್ಗೆ ಎನ್ಎಚ್ ಅಧಿಕಾರಿಗಳು ಹಾಗೂ ಮನಪಾ ಅಧಿಕಾರಿಗಳ ಜತೆ ಚಂಟಿ ಪರಿಶೀಲನೆ ನಡೆಸಿ ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw