ಧರೆ ಹತ್ತಿ ಉರಿದಡೆ ನಿಲಬಹುದೆ ? - Mahanayaka
1:30 AM Tuesday 10 - December 2024

ಧರೆ ಹತ್ತಿ ಉರಿದಡೆ ನಿಲಬಹುದೆ ?

dammapriya
10/08/2023

  • ದಮ್ಮಪ್ರಿಯ, ಬೆಂಗಳೂರು 

ಇತ್ತೀಚೆಗೆ ನಾನು ಒಂದು ಲೇಖನವನ್ನು  ಓದಿದೆ.  ಬಹಳ  ಖುಷಿಯಾಯಿತು.  ನಮ್ಮ ಭಾರತ ದೇಶ ಇಂಗ್ಲೆಂಡಿನ  ಉನ್ನತ  ಶಿಕ್ಷಣ ವ್ಯವಸ್ಥೆಯ ಕಡೆಗೆ  ದಾಪುಗಾಲು ಹಾಕಬೇಕಿದೆ ಎನ್ನುವುದು  ನಮ್ಮ  ಬರಹಗಾರರ ಅಭಿಪ್ರಾಯ.  (ದಿನಾಂಕ 01-08-2023 ವಿಜಯಕರ್ನಾಟಕ)  ಇಂಗ್ಲೆಂಡಿನ ಉನ್ನತ ಶಿಕ್ಷಣ ನಮಗಿಂತ ಹೇಗೆ ಭಿನ್ನ ? ಎನ್ನುವ ಶಿರೋನಾಮೆಯಡಿಯಲ್ಲಿ  ಡಾ. ನಿರಂಜನ ವಾನಳ್ಳಿ ಬರೆದಿರುವ ಲೇಖನ ನನ್ನ ಮನಸಿನ ಮೇಲೆ ಬಹಳ ಪ್ರಭಾವವನ್ನು ಬೀರಿತು. ಏನಾದರು ಬರೆಯಬೇಕು ಎಂದು ನನ್ನನು ಪ್ರೇರೇಪಿಸಿತು.  ಸುಮಾರು ಎರಡುಮೂರು ದಿನ ಸುಮ್ಮನಾದರು ನನ್ನನ್ನು ಬಿಡದೆ ಕಾಡಿದ ಈ ಲೇಖನ, ಕೊನೆಗೆ ಪ್ರತಿಕ್ರಿಯೆ  ಬರೆಯಲೇಬೇಕು ಎಂದು ತೀರ್ಮಾನಿಸಿತು. ಹೆಸರಾಂತ ಕುಲಪತಿಗಳಾಗಿರುವ ಇರುವ ಹುದ್ದೆ ಬಹಳ ಗಂಭೀರವಾದದ್ದು,  ಈ ಹುದ್ದೆಯಲ್ಲಿರುವವರು  ತಾವು ಎಲ್ಲಿದ್ದೇವೆ,  ಯಾವ ಭೌಗೋಳಿಕ  ಹಿನ್ನೆಲೆಯಲ್ಲಿದ್ದೇವೆ, ಯಾವ ಸಮಾಜದೊಳಗೆ  ನಾವಿದ್ದೇವೆ, ಇದು ಎಂತಹ ಪ್ರಜಾಪ್ರಭುತ್ವ ವ್ಯವಸ್ಥೆ ಎನ್ನುವುದನ್ನು ಸ್ವಲ್ಪ ಗಮನದಲ್ಲಿಟ್ಟುಕೊಂಡು ಚಿಂತಿಸಿದ್ದರೆ ಬಹಳ ಒಳ್ಳೆಯ ಲೇಖನ ಎನಿಸುತ್ತಿತ್ತೇನೋ.

ಬಹುಷಃ ಇವರ ಮಕ್ಕಳು ಮೊಮ್ಮಕ್ಕಳು ವಿದೇಶಗಳಲ್ಲಿ ಗ್ರೀನ್ ಕಾರ್ಡ್  ವಾಸಿಗಳಾಗಿರಬೇಕು. ಹಾಗಾಗಾಗಿ ಇವರಿಗೆ ವಿದೇಶಗಳ ಬಗ್ಗೆ ಚಿಂತನೆಗಳು ಹೆಚ್ಚು ಎಂದುಕೊಳ್ಳಬಹುದು.  ನಮಗೂ ದೇಶದಲ್ಲಿ ಹೊಸ ಬದಲಾವಣೆಗಳು ಆಗಬೇಕು ಎನ್ನುವ ಆಸೆ. ಆದರೆ ಯಾವಾಗ  ಮತ್ತು ಹೇಗೆ ಎನ್ನುವುದನ್ನು  ಒಮ್ಮೆ ಗಮನಿಸಬೇಕಾಗಿದೆ.  ಈ ದೇಶದಲ್ಲಿ  ಸುಮಾರು  ಕೇವಲ  ಶೇ 4 ರಷ್ಟಿರುವ ಜನರ ಕೈಯಲ್ಲಿ  ಶೇಕಡ  95 ರಷ್ಟು  ಸಂಪತ್ತು ಮತ್ತು ಅಧಿಕಾರವಿದ್ದು,  ಇನ್ನುಳಿದ ಶೇ 96 ರಷ್ಟು  ಜನರ ಕೈಯಲ್ಲಿ  ಶೇಕಡ  5 ರಷ್ಟು  ಸಂಪತ್ತು ಅಧಿಕಾರವಿರುವುದು  ಈ ದೇಶದ ಪ್ರತಿಯೊಬ್ಬ ನಾಗರೀಕ ಪ್ರಜೆಗೂ ತಿಳಿದ ವಿಚಾರವೇ ಆಗಿದೆ.

ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ,  ಸಮಾನತೆಗಾಗಿ, ಸಮಾನ ಹಕ್ಕುಗಳಿಗಾಗಿ , ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ,  ಉದ್ಯೋಗಕ್ಕಾಗಿ, ಮಹಿಳೆಯರ ಮೇಲಿನ ದಿನನಿತ್ಯ ದೌರ್ಜನ್ಯಗಳನ್ನು, ಅತ್ಯಾಚಾರಗಳನ್ನು ತಡೆಯಲು,  ದಲಿತರ ಕಗ್ಗೊಲೆ,  ದೇವಾಲಯಕ್ಕೆ, ಹೋಟೆಲ್ ಗಳಿಗೆ ದಲಿತರ ಪ್ರವೇಶ ನಿಷೇಧವನ್ನು ಖಂಡಿಸಲು,  ಊಟವಿಲ್ಲದೆ ಅಪೌಷ್ಠಿಕತೆಯಿಂದ ನಿತ್ಯ ಸಾವಿರಾರು ಮಕ್ಕಳ ದುರ್ಮರಣ, ಇವೆಲ್ಲವೂ ಇನ್ನು ಜೀವಂತವಾಗಿಯೇ ಈ ದೇಶದಲ್ಲಿ  ಇವೆ.  ಇವುಗಳನ್ನು ಸರಿಪಡಿಸುವ ಹೊಣೆ ಯಾರದು ಮತ್ತು ಹೇಗೆ ?  ಎಂದು ಚಿಂತಿಸುವ ಅಗತ್ಯತೆ ನಮ್ಮ ಚಿಂತಕರಿಗೆ ಇಲ್ಲವಾಯಿತೆ  ಎನ್ನುವುದಾಗಿದೆ.

ಮಾನ್ಯರು  ಒಂದು ಉನ್ನತ ಸ್ಥಾನದಲ್ಲಿ ಕುಳಿತಿರುವಾಗ  ಮೊದಲು ಸಮಾಜದಲ್ಲಿನ ಅಸಮಾನತೆಯನ್ನು ಗಮನಿಸಬೇಕಿತ್ತು. ಸಮಾಜದಲ್ಲಿ  ಸಾವಿರಾರು ಬುದ್ದಿವಂತ ವಿದ್ಯಾರ್ಥಿಗಳು ಆರ್ಥಿಕವಾಗಿ ಸಭಲರಿಲ್ಲದ ಕಾರಣ ಎಷ್ಟೋ ವಿದ್ಯಾರ್ಥಿಗಳು  ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹಾಗಾದರೆ  ಇವರಿಗೆ ಸರಿಯಾದ ರೀತಿಯಲ್ಲಿ  ಶಿಕ್ಷಣ ಒದಗಿಸಬೇಕಾದ  ಹೊಣೆ ಯಾರದು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಬೇರೆ ದೇಶಗಳಲ್ಲಿ ಶಿಕ್ಷಣ  ಅರೋಗ್ಯ, ಮತ್ತು  ಮೂಲಭೂತ ಸೌಕರ್ಯಗಳನ್ನು  ಒದಗಿಸುವುದು  ಪ್ರತೀ ದೇಶಗಳ ಮೂಲ ಕರ್ತವ್ಯ ಎಂದು ತಿಳಿದಿವೆ.  ಆದರೆ  ಈ ದೇಶದಲ್ಲಿ  ಮಾತ್ರ ಶಿಕ್ಷಣವನ್ನು  ವ್ಯಾಪಾರ ಮಾಡಿಕೊಳ್ಳಬೇಕಿದೆ, ಅದೊಂದು ಅಪ್ಪಟ ವ್ಯವಹಾರವಾಗಬೇಕಿದೆ ಎನ್ನುವ ನಿಮ್ಮ ಮನದಾಳದ ಮಾತು  ನಿಮ್ಮಿಂದ ಹೊರಬರಲು ಹೇಗೆ ಸಾಧ್ಯ ಎನ್ನುವುದಾಗಿದೆ.

ಯಾವುದು ಉಚಿತವಾಗಿ ಸಿಗುತ್ತಿಲ್ಲ ಎನ್ನುವ ನಿಮ್ಮ ಬರಹದ ತಿರುಳನ್ನು ಗಮನಿಸಿದರೆ,  ಇತ್ತೀಚೆಗೆ ರಾಜ್ಯ ಸರ್ಕಾರ ನೊಂದ ಬಡಜನರಿಗೆ ಅಸಹಾಯಕ ಹೆಣ್ಣುಮಕ್ಕಳಿಗೆ,  ನಿರುದ್ಯೋಗಿ ಯುವ ಪೀಳಿಗೆಗೆ, ವೃದ್ಧರಿಗೆ ಅವರ ಜೀವನಾಂಶಕ್ಕೆ  ನೀಡುವ ಅನ್ನಭಾಗ್ಯ,  ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವನಿಧಿ,  ಶಕ್ತಿ ಯೋಜನೆಗಳನ್ನು ನೀವು ಪರೋಕ್ಷವಾಗಿ ಪ್ರಶ್ನಿಸಿ ವಿರೋಧಿಸುವಂತಿದೆ. ಅಲ್ಲದೆ  ವಿರೋಧ ಪಕ್ಷದ ಕಾರ್ಯಕರ್ತರನ್ನು ಪಕ್ಷದ ನಾಯಕರನ್ನು ಪ್ರಚೋದಿಸಿದಂತಿದೆ.

ಯಾವುದು ಉಚಿತ ಅನ್ನುವುದನ್ನು ತಾವು ಅರಿಯಬೇಕಿದೆ,  ಈ  ದೇಶದ ಜನರಿಗೆ  ನೀಡುವ  ಮೂಲಭೂತ ಸೌಕರ್ಯವನ್ನು ಹಣ, ಆಹಾರ ಪದಾರ್ಥಗಳ  ರೂಪದಲ್ಲಿ ನೀಡುವುದು ಉಚಿತವೆನಿಸಿದರೆ,  ಹಾಗಾದರೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾದ ಹೊಣೆಗಾರಿಕೆ ಯಾರದು ? ಶತಮಾನಗಳ ಕಾಲ,  ವಿದ್ಯೆಯಿಂದ ಅಧಿಕಾರದಿಂದ, ಆಸ್ತಿಯಿಂದ  ಉದ್ಯೋಗದಿಂದ ಶೋಷಿತ ಸಮುದಾಯವನ್ನು ವಂಚಿಸಲಾಗಿತ್ತು. ಅದರ ಬಗ್ಗೆ ತಮಗೆ ಬಹುಷಃ ಯಾರೂ ಹೇಳಲಿಲ್ಲವೇ ? ಅಥವಾ ತಾವು ಎಲ್ಲಿಯೂ  ಓದಲಿಲ್ಲವೇನೋ ಅನಿಸುತ್ತಿದೆ.  ತಾವು ಸಮಾಜದಲ್ಲಿನ  ಉನ್ನತ ವರ್ಗದಿಂದ ಬಂದಿರಬೇಕು, ಅದಕ್ಕಾಗಿ  ಈ ಹಸಿದವರ ಕೂಗು,  ನೊಂದ ಜನರ ಕಣ್ಣೀರು ಹೊರೆಸುವ,  ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಠಿಸುವ ಚಿಂತನೆಗಳು,  ಯೋಜನೆಗಳು ನಿಮಗೆ ಉಚಿತವೆನಿಸುತ್ತಿವೆ. ಕೆಲವು ಮನಸ್ಸುಗಳು ಇವುಗಳನ್ನು  ಬಿಟ್ಟಿಭಾಗ್ಯ ಅಂತಲೂ  ಹೇಳುತ್ತಿರುವುದನ್ನು  ನೀವು ಸರಳ ಭಾಷೆಯಲ್ಲಿ  ಉಚಿತ ಎಂದಿದ್ದೀರಷ್ಟೇ.

ಹಾಗಾದರೆ  ನೀವು ಈ ಉನ್ನತ ಹುದ್ದೆಯಲ್ಲಿರುವಾಗ  ಸರ್ಕಾರದ ಅನುಧಾನದ ಅಡಿಯಲ್ಲಿ ಬಂದಿರುವ ಮಕ್ಕಳಿಗೆ  ಬಿಟ್ಟಿಯಾಗಿ ಬಂದವರು,  ಉಚಿತ ಸೇವೆ ಪಡೆಯುತ್ತಿರುವವರು ಎಂದು ಯೋಚಿಸಿ ಅವರಿಗೆ ತಾರತಮ್ಯ ಮಾಡಿಲ್ಲ ಎನ್ನುವುದು ಯಾವ ಗ್ಯಾರಂಟಿ,  ಇದನ್ನು ನೀವು ಹೀಗೆ ಹೇಳಬಹುದೇ ? ಕೇವಲ ರೈತರಿಗೆ ಮಹಿಳೆಯರಿಗೆ  ಬಡತನದ ವಿದ್ಯಾರ್ಥಿಗಳಿಗೆ  ನೀಡುವ ಒಂದು ಸಣ್ಣ ಸವಲತ್ತು ಉಚಿತ ಎನ್ನುವುದಾದರೆ, ವರ್ಷಕ್ಕೊಮ್ಮೆ ಸಾರ್ವಜನಿಕರ ಕೋಟ್ಯಾಂತರ ರೂಪಾಯಿಯನ್ನು  ಸಾಲಗಳ ರೂಪದಲ್ಲಿ ಪಡೆದು  ಕೊನೆಗೆ  ಪಂಗನಾಮ ಹಾಕಿ ದೇಶಕ್ಕೆ ವಂಚನೆ  ಮಾಡುತ್ತಾರೆ ಅದನ್ನು ಏನೆಂದು ಕರೆಯಬೇಕು ನೀವೇ ಹೇಳಿ ? ಕೆಲವು ದೇಶಗಳಲ್ಲಿ  ಶಿಕ್ಷಣ ಅರೋಗ್ಯ ಎಲ್ಲವನ್ನು ಆ ದೇಶದ ಪ್ರಜೆಗಳಿಗೆ ಹುಟ್ಟಿನಿಂದ ಸಾಯುವವರೆಗೂ  ನೀಡುತ್ತಾರೆ.  ಅವುಗಳನ್ನು ಯಾರೂ ಉಚಿತವೆಂದು ಹೇಳುವುದಿಲ್ಲಾ,  ಅದು  ಆ ದೇಶದ ಸರ್ಕಾರಗಳ ಆದ್ಯ ಕರ್ತವ್ಯ ಎನ್ನುತ್ತಾರೆ.

ಆದರೆ ನಮ್ಮ ದೇಶದಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ, ಯಜಮಾನರಿಗೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಅದನ್ನು ನೀವು  ಉಚಿತವೆಂದು ಕರೆಯದೆ ಬೆಂಬಲವೆಂದು ಕರೆದು ಗೌರವಿಸುತ್ತಾರೆ.  ಉಚಿತವಾಗಿ ಪಡೆದವರಿಗೆ ಬೆಂಬಲ ಎಂಬ ಪದವನ್ನು ಬಳಸುತ್ತೀರ.  ಅದೇ ಬಡ ಜನರಿಗೆ ನೀಡುವ ಸಣ್ಣ ಪ್ರಮಾಣದ ಹಣವನ್ನು ಉಚಿತವೆಂದು ಬಾಯಿಗೆ ಬಂದಂತೆ ಮಾತನಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತೀರ. ನಿಮ್ಮ ದೃಷ್ಠಿಯಲ್ಲಿ ಬಡವರಿಗೆ ನೀಡುವ ಯೋಜನೆಗಳನ್ನು ಯಾಕೆ ಬೆಂಬಲ ಯೋಜನೆಗಳೆಂದು ಹೇಳುವುದಿಲ್ಲ ?   ಬಡವರಿಗೆ ಸರ್ಕಾರ ನೀಡುವ ಎಲ್ಲವನ್ನೂ ಬೆಂಬಲವೆಂದೇ ಹೇಳಬೇಕೇ ಹೊರತು ಉಚಿತ/ಬಿಟ್ಟಿ ಎಂದು ಹೇಳಲಾಗದು. ಅದು ಸರ್ಕಾರಗಳ ಜವಾಬ್ದಾರಿ ಕೂಡ. ಕಾರ್ಪೊರೇಟ್ ಕಂಪನಿಗಳಿಗೆ ನೀಡುವ ಲಕ್ಷಾಂತರ ಕೋಟಿ ಹಣವನ್ನು ಮಾತ್ರ ಉಚಿತವೆಂದು ಹೇಳಬೇಕು ಯಾಕೆಂದರೆ ವರ್ಷಕ್ಕೊಮ್ಮೆ ಸರ್ಕಾರ ಅವೆಲ್ಲವನ್ನು ಮನ್ನಾ ಮಾಡುತ್ತಿದೆ.  ಅವರನ್ನು ವಿದೇಶಗಳಿಗೆ ಹೋಗಲು ಪರವಾನಗಿ ನೀಡಲು ಸೂಚಿಸಿ ತಮಗರಿವಿಲ್ಲದಂತೆ ಕೂರುತ್ತಿವೆ. ಇಂತಹ ಗೊಂದಲಗಳಿಗೆ  ನೀವುಗಳು  ಉತ್ತರ ನೀಡಬಹುದೇ ?

ನೀವು ಮೂಲತಃ ಶಿಕ್ಷಕರು Teacher will be pillar of the nation, teacher will be director of the nation. ಇದು ಸ್ವಾಮಿ ವಿವೇಕಾನಂದರ ಮಾತು.  ಇದನ್ನು ನಿಮ್ಮ ಹಾಗೆ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಯಾವ ಭಾರತೀಯ ಪ್ರಜೆಯು ಮರೆಯುವಂತಿಲ್ಲ. ನೀವು  ಮತ್ತೆ ಮತ್ತೆ ಉಚಿತ /ಬಿಟ್ಟಿ ಭಾಗ್ಯ (ನಿಮ್ಮ ಒಳಮನಸಿನ ಭಾವ ಎಂದುಕೊಳ್ಳುವೆ) ಎಂದು  ಹೇಳುವುದಾದರೆ  ಅಂತಹ ಸಂದರ್ಭದಲ್ಲಿ ನಮಗೆ ಬಸವಣ್ಣ ನೆನಪಾಗುತ್ತಾರೆ

“ಓಲೆ ಹತ್ತಿ ಉರಿದಡೆ ನಿಲಬಹುದು,

ಧರೆಹತ್ತಿ ಊರೊದಡೆ ನಿಲಬಹುದೇ,

ಏರಿ ನೀರುಂಬೋಡೆ,  ಬೇಲಿ ಕೈಯ್ಯ ಮೇವೊಡೆ,

ನಾರಿ ತನ್ನ ಮನೆಯಲ್ಲಿ ತಾನು  ಕಳುವೊಡೆ,

ತಾಯಿ ಮೊಲೆಹಾಲು ನಂಜಾಗಿ ಕೊಲುವೊಡೆ,

ಇನ್ನಾರಿಗೆ ದೂರಲಿ ಕೂಡಲಸಂಗಮದೇವ”

ಈಗಿರುವಾಗ  ಈ ಸಮಾಜವನ್ನು, ಅಲ್ಲಿರುವ ಅಸಮಾನತೆಯನ್ನು ತೊಡೆದುಹಾಕಲು ಯಾರೂ ಶ್ರಮಿಸಬೇಕು, ಅಂತವರನ್ನು ಯಾರು ತಯಾರು ಮಾಡಬೇಕು  ಒಮ್ಮೆ ನೀವೇ ಯೋಚಿಸಿ.

ತಾವು ಬಹಳ ಜಾಣ್ಮೆಯಿಂದ ಲೇಖನವನ್ನು ಬರೆಯುವುದರ ಜೊತೆಗೆ ಅಲ್ಲಿನ ವ್ಯವಸ್ಥೆಯ ಬಗ್ಗೆ ಮಾತ್ರ ತಿಳಿಸಿದ್ದೇನೆ ಎಂದು ಹೇಳಿ  ಕೈ ತೊಳೆದುಕೊಳ್ಳುವ ಕೆಲಸ ಮಾಡಿದ್ದೀರ. ಆದರೆ ಶೋಷಿತ ಸಮುದಾಯದ ಹಿನ್ನೆಲೆಯಲ್ಲಿ ನಿಂತು ಈ ಲೇಖನವನ್ನು ಓದಿದಾಗ  ನಿಮ್ಮ ಬರವಣಿಗೆಯಲ್ಲಿ ಬಹುಮುಖ್ಯವಾಗಿ ಕಂಡುಕೊಂಡಂತಹ  ಕೆಲವು ಅಂಶಗಳೆಂದರೆ,

* ಕರ್ನಾಟಕದ ಮಟ್ಟಿಗೆ ಯೋಚಿಸುವುದಾದರೆ ಇಂದಿನ ಸರ್ಕಾರದ ಯೋಜನೆಗಳನ್ನು ಉಚಿತವೆಂದು ಬಳಸಿ, ಯಾರಿಗೂ ಉಚಿತವಾಗಿ ಯಾವುದನ್ನೂ ಕೊಡಬಾರದು ಎಂದು ಸರ್ಕಾರಕ್ಕೆ ತಿಳಿಸಲು ಪ್ರಯತ್ನಿಸಿರುವುದು.

* ಜಾತಿ ಆಧಾರದ ಮೇಲೆ ಶಿಕ್ಷಣ ಮತ್ತು ಸವಲತ್ತುಗಳನ್ನು ನೀಡಲೇಬಾರದು,ಎನ್ನುವುದರ ಹಿಂದೆ ಶಿಕ್ಷಣ ಕ್ಷೇತ್ರದಲ್ಲಿ  ಮೀಸಲಾತಿಯನ್ನು ಕಿತ್ತೊಗೆಯಬೇಕು ಎಂದು ಪರೋಕ್ಷವಾಗಿ ತಿಳಿಸಲು ಪ್ರಯತ್ನ ನಡೆದಿದೆ ಎನ್ನಬಹುದು.

* ರೈತರಿಗೆ ಮತ್ತು ಮಹಿಳೆಯರಿಗೆ  ನೀಡುತ್ತಿರುವ  ಸಹಾಯ ಧನ ಮತ್ತು ಶಕ್ತಿ ಯೋಜನೆಯನ್ನು, ರೈತರ ಸಾಲಮನ್ನ ಅಥವಾ ಬೆಂಬಲಿತ ಬೆಲೆಯನ್ನು ಆರ್ಥಿಕ ಅಭಿವೃದ್ಧಿ ಸೂಚಕ ಎನ್ನದೆ  ಉಚಿತ ಎನ್ನುವುದು,  ಕಾರ್ಪೊರೇಟ್ ಕಂಪನಿಗಳಿಗೆ ನೀಡುವುದನ್ನು ಉಚಿತ ಎನ್ನದೆ ಬೆಂಬಲ ಎನ್ನುವ ಧೋರಣೆ ನಿಮ್ಮ ಬರಹದಲ್ಲಿದೆ.

* ಶಿಕ್ಷಣ ಸಂಸ್ಥೆಗಳು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ  ಸೇವಾ ಸಂಸ್ಥೆಗಳೇ ಹೊರತು  ಯಾವ ಲಾಭದಾಯಕ   ಕಾರ್ಖಾನೆಗಳಲ್ಲ,  ಆದರೆ ಅವುಗಳೆಲ್ಲವೂ ಅಪ್ಪಟ ವ್ಯವಹಾರ ಮಾಡುವ ಸಂಸ್ಥೆಗಳಾಗಬೇಕು ಎಂದಿರುವುದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ತದ್ವಿರುದ್ಧವಾದದ್ದು.

* ಸರ್ಕಾರಿ  ಒಡೆತನದ ಸಂಸ್ಥೆಗಳು ತಮ್ಮ ದಕ್ಷತೆಯನ್ನು ಕಳೆದುಕೊಂಡಿವೆ,  ಅವುಗಳೆಲ್ಲವನ್ನೂ ಖಾಸಗೀಕರಣ ಮಾಡದಿದ್ದಲ್ಲಿ  ಶಿಕ್ಷಣ ಸಂಸ್ಥೆಗಳಿಗೆ ಉಳಿಗಾಲವೇ ಇಲ್ಲಾ ಎಂದಿರುವುದು ತಾವು ಖಾಸಗೀಕರಣಕ್ಕೆ  ಉತ್ತೇಜನಪೂರ್ವಕವಾಗಿ ಬರೆದಂತಿದೆ.

* ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ದ್ವಂಸವಾದರು ಸರಿಯೇ, ಸರ್ವಾಧಿಕಾರದ ವ್ಯವಸ್ಥೆ ಜಾರಿಯಾದರೆ ಬಹಳ ಒಳ್ಳೆಯದು ಎನ್ನುವುದು ನಿಮ್ಮ ಬರವಣಿಗೆಯ ಮೂಲ ತಿರುಳಾಗಿದೆ. ಅದಲ್ಲದೆ ಖಾಸಗೀ ಸಂಸ್ಥೆಗಳು ನಿರ್ವಹಿಸುವ ಕಟ್ಟಡ ನಿರ್ಮಾಣ ರೀತಿಯನ್ನು,  ಸರ್ಕಾರಿ ಸಂಸ್ಥೆಗಳು ನಿರ್ವಹಿಸುವಲ್ಲಿ ಈ ದೇಶ ಸಂಸ್ಥೆಗಳು  ವಿಫಲವಾಗಿವೆ ಎನ್ನುವುದನ್ನು ಸರ್ಕಾರಿ ನೌಕರರಾಗಿ ನೀವೇ ಒಪ್ಪಿಕೊಂಡಂತಾಗಿದೆ.

* ಇದಲ್ಲದೆ  ಉದ್ಯೋಗ ಸೃಷ್ಠಿಯ ಹೊಣೆಗಾರಿಕೆಯನ್ನು  ಪ್ರಶ್ನಿಸುತ್ತಿರುವ ಭಾರತೀಯ ಯುವ ಜನತೆಗೆ  ಉದ್ಯೋಗ ಸೃಷ್ಠಿಯ ಹೊಣೆ  ಸರ್ಕಾರದ್ದಲ್ಲ ! ನೀವುಗಳೇ ಸೃಷ್ಠಿ ಮಾಡಿಕೊಳ್ಳಬೇಕು ಅವುಗಳು ಹೊಸ ಸ್ಟಾರ್ಟ್ ಅಪ್ ಮೂಲಕ ತಯಾರಾಗಬೇಕು ಎನ್ನುವಂತ್ತಿದ್ದು,  ಪಕೋಡ ಮಾರುವ ಕೆಲಸವನ್ನು  ನೇರವಾಗಿ ಸಮರ್ಥಿಸಿಕೊಂಡಿದ್ದೀರ.   ಇದಲ್ಲದೆ  ಸಂವಿಧಾನವನ್ನೇ ಬದಲಾವಣೆ ಮಾಡಿದರೆ ಒಳ್ಳೆಯದು ಎನ್ನುವಷ್ಟರ ಮಟ್ಟಿಗೆ, ಆಡಳಿತ ಮಂಡಳಿ  ವ್ಯವಸ್ಥೆ ಇರಬಾರದು, ಸರ್ವಾಧಿಕಾರದ ವ್ಯವಸ್ಥೆಯಿದ್ದರೆ ಅಭಿವೃದ್ಧಿ ಸಾಧ್ಯ ಎನ್ನುವಷ್ಟರ ಮಟ್ಟಿಗೆ ಇಡೀ ಲೇಖನವನ್ನು ಬರೆಯಲಾಗಿದೆ. ಅಲ್ಲದೆ ಅದರಿಂದ  ಬಹಿರಂಗವಾಗಿ ಸಮಾಜಕ್ಕೆ ತಿಳಿಸಬೇಕಾದ ಖಾಸಗೀಕರಣ, ಪ್ರಜಾಪ್ರಭುತ್ವ ವ್ಯವಸ್ಥೆಯ ಬದಲಾವಣೆ, ಮೀಸಲಾತಿಯ ನಿರಾಕರಣೆ, ಉಚಿತ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳ ನಿರಾಕರಣೆ,  ನಾವು ಮಾಡುವ ಸಾಮಾಜಿಕ ಸೇವೆಗಳು ಅಪ್ಪಟ ವ್ಯವಹಾರಗಳಾಗಬೇಕು, ಸರ್ವಾಧಿಕಾರವೆಂಬುದು ಜಾರಿಯಾಗಬೇಕು, ಎನ್ನುವುದು ನಿಮ್ಮ ಲೇಖನದಿಂದ ತಿಳಿದ ಬಹಳ ಗಂಭೀರವಾದ ವಿಚಾರಗಳಾಗಿವೆ.

ಇನ್ನಾದರೂ ನಾವು ನಮ್ಮ ಸಮಾಜ  ಮೂಲ ಸನಾತನಿಗಳ  ಜಾತಿ ವ್ಯವಸ್ಥೆಯಿಂದ ಬಿಡುಗಡೆಗೊಂಡು, ಸಮ ಸಮಾಜದ ಕಡೆಗೆ ಮುಖ ಮಾಡಬೇಕೆ,  ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಸವಲತ್ತುಗಳನ್ನು ಪಡೆಯುತ್ತಿರುವ ನಾವು ಪ್ರಭುತ್ವವನ್ನು ಗೌರವಿಸಬೇಕೆ, ಸಂಪತ್ತಿನ ಅಸಮಾನ ಹಂಚಿಕೆಯ ವಿರುದ್ಧ ಸಮರ ಸಾರಬೇಕೇ,  ವಿಜ್ಞಾನದಿಂದ ಕೂಡಿದ ವೈಚಾರಿಕ ಶಿಕ್ಷಣದ ಕಡೆಗೆ ಇಂದಿನ ಯುವ ಜನತೆಯನ್ನು ಸಜ್ಜುಗೊಳಿಸಬೇಕೇ ,  ಇವೆಲ್ಲವೂ ಪ್ರಜ್ಞಾವಂತರಾದ ನಿಮಗೆ ಬಿಟ್ಟಿದ್ದು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ