ಉಗ್ರರ ಜೊತೆಗಿನ ಹೋರಾಟದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್: ತನ್ನ ಕುಟುಂಬದ ಏಕೈಕ ಪುತ್ರ
![m v pranjal](https://www.mahanayaka.in/wp-content/uploads/2023/11/M-V-Pranjal.jpg)
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಸಂಭವಿಸಿದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಇಬ್ಬರು ಕ್ಯಾಪ್ಟನ್ ಗಳಲ್ಲಿ ಬೆಂಗಳೂರಿನ ಕ್ಯಾಪ್ಟನ್ ಎಂವಿ ಪ್ರಾಂಜಲ್ ಓರ್ವರಾಗಿದ್ದಾರೆ. ಇವರು ಎಂಆರ್ ಪಿಎಲ್ ನ ನಿವೃತ್ತ ಆಡಳಿತ ನಿರ್ದೇಶಕ ಎಂ. ವೆಂಕಟೇಶ್ ಅವರ ಏಕೈಕ ಪುತ್ರ ಎಂದು ತಿಳಿದು ಬಂದಿದೆ.
ಉಗ್ರರೊಂದಿಗೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾ ಕ್ಯಾಪ್ಟನ್‌ಗಳು ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದರು.
ಹುತಾತ್ಮ ಪ್ರಾಂಜಲ್ ಅವರು ಪ್ರೌಢಶಾಲಾ ಹಂತದ ಶಿಕ್ಷಣವನ್ನು ಮಂಗಳೂರು ಎಂಆರ್‌ಪಿಎಲ್ ಸಮೀಪವೇ ಇರುವ ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಮಾಡಿದ್ದರು. ಬಳಿಕ ಡಿಫೆನ್ಸ್ ಅಕಾಡೆಮಿ ಸೇರಿದ್ದರು. ಅವರು ಇಂಜಿನಿಯರಿಂಗ್ ಶಿಕ್ಷಣ ಉನ್ನತ ಶ್ರೇಣಿಯಲ್ಲಿ ಪೂರೈಸಿದ್ದರು. ಕ್ಯಾಪ್ಟನ್ ಹುದ್ದೆಯಿಂದ ಮೇಜರ್ ಹುದ್ದೆಗೆ ಪದೋನ್ನತಿಗೆ ಕಾಯುತ್ತಿರುವಾಗಲೇ ಅವರು ಉಗ್ರರೊಂದಿಗೆ ಸಂಭವಿಸಿದ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದಾರೆ.
ಹುತಾತ್ಮ ಪ್ರಾಂಜಲ್ ಅವರ ತಂದೆ ವೆಂಕಟೇಶ್ ನಿವೃತ್ತರಾದ ಬಳಿಕ ಕುಟುಂಬ ಸಮೇತ ಬೆಂಗಳೂರಿನಲ್ಲಿ ನೆಲೆಸಿತ್ತು. ಕ್ಯಾಪ್ಟನ್ ಪ್ರಾಂಜಲ್ ಅವರಿಗೆ ವಿವಾಹವಾಗಿದ್ದು, ಪತ್ನಿ ಅದಿತಿ ಬೆಂಗಳೂರಿನಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದಾರೆ. ತಮ್ಮ ಏಕೈಕ ಮಗನನ್ನು ವೆಂಕಟೇಶ್ ಅವರು ಸೇನೆಗೆ ಸೇರಿಸಿದ್ದರು.
ಯೋಧರು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಗುಂಡಿನ ಚಕಮಕಿಯಲ್ಲಿ ಪ್ರಾಂಜಲ್ ಗಂಭೀರ ಗಾಯಗೊಂಡು ಹುತಾತ್ಮರಾದರು. ಇವರ ನಿಧನಕ್ಕೆ ಶಾಸಕ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ , ಸಂಸದ ನಳೀನ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.