ಹೊಳೆಗೆ ಬಿದ್ದ ಕಾರು ಪತ್ತೆಯಾದರೂ ಯುವಕರ ಪತ್ತೆ ಇಲ್ಲ: ಕಾರಿನಲ್ಲಿದ್ದ ಇಬ್ಬರು ಯುವಕರು ಹೋಗಿದ್ದೆಲ್ಲಿಗೆ?
![kaniyuru](https://www.mahanayaka.in/wp-content/uploads/2022/07/kaniyuru.jpg)
ಕಡಬ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಘಟನೆ ಶನಿವಾರ ತಡರಾತ್ರಿ ನಡೆದಿದ್ದು, ಕಾರಿನಲ್ಲಿದ್ದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಇದೀಗ ಕಾರನ್ನು ಅಗ್ನಿಶಾಮಕ ದಳ ಪತ್ತೆ ಹಚ್ಚಿದೆ. ಆದರೆ, ಕಾರಿನಲ್ಲಿದ್ದವರು ನಾಪತ್ತೆಯಾಗಿದ್ದಾರೆ.
ವಿಟ್ಲದ ಕುಂಡಡ್ಕದ ನಿವಾಸಿ ಧನುಷ್(26) ಹಾಗೂ ಮಂಜೇಶ್ವರ ನಿವಾಸಿ ಧನುಷ್ (21) ನಾಪತ್ತೆಯಾದ ಯುವಕರು ಎಂದು ಹೇಳಲಾಗಿದೆ. ಶನಿವಾರ ತಡರಾತ್ರಿ ಮಾರುತಿ 800 ಕಾರಿನಲ್ಲಿ ಪುತ್ತೂರಿನಿಂದ ಕಾಣಿಯೂರು ಕಡೆಗೆ ತೆರಳುತ್ತಿದ್ದ ವೇಳೆ ಚಾಲಕ ನಿಯಂತ್ರಣ ತಪ್ಪಿದ ಕಾರು ಬೈತಡ್ಕ ಗೌರಿ ಹೊಳೆಗೆ ಹಾರಿದೆ.
ಕಾರು ಹೊಳೆಗೆ ಬೀಳುತ್ತಿರುವ ದೃಶ್ಯ ಬೈತಡ್ಕ ಜುಮಾ ಮಸೀದಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯ ಬಳಿಕ ಇಂದು 12:30ರ ಸುಮಾರಿಗೆ ಕಾರನ್ನು ಪತ್ತೆ ಹಚ್ಚಲಾಗಿದೆ. ಆದರೆ ಕಾರಿನಲ್ಲಿದ್ದ ಯುವಕರ ಪತ್ತೆ ಇನ್ನೂ ಸಾಧ್ಯವಾಗಿಲ್ಲ.
ವರದಿಯ ಪ್ರಕಾರ, ಅಪಘಾತದ ಬಳಿಕ ಯುವಕರು ಮನೆಯವರಿಗೆ ಕರೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದು ಇನ್ನಷ್ಟು ಗೊಂದಲಗಳಿಗೆ ಕಾರಣವಾಗಿದೆ. ಕಾರು ಹೇಗೆ ಅಪಘಾತಕ್ಕೀಡಾಯಿತು. ಕಾರಿನಲ್ಲಿದ್ದ ಯುವಕರು ಹೇಗೆ ಹೊರ ಬಂದರು? ಮನೆಯವರಿಗೆ ಕರೆ ಮಾಡಿದ್ದಾರೆನ್ನಲಾಗಿರುವ ಸುದ್ದಿ ನಿಜವೇ ಎನ್ನುವ ಗೊಂದಲಗಳಿಗೆ ಕಾರಣವಾಗಿದೆ.
ಸದ್ಯ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸದ್ಯದಲ್ಲೇ ಸತ್ಯಾಸತ್ಯತೆಗಳನ್ನು ಪತ್ತೆ ಹಚ್ಚಲಿದ್ದಾರೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka