ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು: ಇಬ್ಬರು ಸ್ಥಳದಲ್ಲೇ ಸಾವು, ಮಹಿಳೆಯ ಸ್ಥಿತಿ ಗಂಭೀರ

06/09/2023
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಇದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಇನ್ನೋರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ.
ಚಿಕ್ಕಮಗಳೂರು ನಗರದ ಹೊರ ವಲಯದ ಕಣಿವೆ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ನಿರಂಜನ್ (42) ಚೆನ್ನಮ್ಮ (67) ಸ್ಥಳದಲ್ಲೇ ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ.
ಚಿಕ್ಕಮಗಳೂರಿನಿಂದ ಕಡೂರಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮೃತರು ಚಿಕ್ಕಮಗಳೂರಿನ ವಿಜಯಪುರ ಬಡಾವಣೆ ನಿವಾಸಿಗಳಾಗಿದ್ದಾರೆ.
ಮೃತ ನಿರಂಜನ್ ಖಾಸಗಿ ಆಸ್ಪತ್ರೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಗಂಭೀರ ಗಾಯಗೊಂಡ ಮಹಿಳೆ ರತ್ನಮ್ಮ ಅವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ. ಈ ಘಟನೆ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.