ಕಾರಿನೊಳಗೆ 1 ಗಂಟೆಯವರೆಗೆ ಸಿಲುಕಿದ 4 ವರ್ಷದ ಬಾಲಕಿಯ ದಾರುಣ ಸಾವು!
ದುಬೈ: ತಂದೆಯ ನಿರ್ಲಕ್ಷ್ಯದಿಂದಾಗಿ ನಾಲ್ಕು ವರ್ಷದ ಬಾಲಕಿ ಕಾರಿನೊಳಗೆ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ದುಬೈನಲ್ಲಿ ನಡೆದಿದ್ದು, ಮಗು ಗಂಟೆಗಟ್ಟಲೆ ಕಾರಿನಲ್ಲಿ ಲಾಕ್ ಆಗಿದ್ದು, ಉಸಿರುಗಟ್ಟಿ ಸಾವನ್ನಪ್ಪಿದೆ.
ಮಂಗಳವಾರ ರಾತ್ರಿ ಸುಮಾರು 7:30ರ ವೇಳೆಗೆ ಈ ಘಟನೆ ನಡೆದಿದೆ. ತಂದೆ ಶಾಪಿಂಗ್ ಮುಗಿಸಿ ಮನೆಗೆ ಬಂದಿದ್ದು, ತಾನು ಖರೀದಿಸಿದ ವಸ್ತುಗಳನ್ನು ಕಾರಿನಿಂದ ಮನೆಯೊಳಗೆ ಕೊಂಡೊಯ್ಯಲು ಮಕ್ಕಳನ್ನು ಕರೆದಿದ್ದಾನೆ. ಮಕ್ಕಳು ಎಲ್ಲ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದು, ಕಾರಿನ ಬಾಗಿಲು ಹಾಕಿ ಎಲ್ಲರೂ ಹೋಗಿದ್ದಾರೆ.
ಶಾಪಿಂಗ್ ಗೆ ಹೋಗಿ ದಣಿದಿದ್ದರಿಂದಾಗಿ ತಂದೆ ತನ್ನ ಕೋಣೆಗೆ ಹೋಗಿ ನಿದ್ರಿಸಿದ್ದು, ಗಂಟೆಗಳ ಕಾಲ ನಿದ್ರಿಸಿದ ಬಳಿಕ ಎದ್ದಾಗ ನಾಲ್ಕು ವರ್ಷದ ಬಾಲಕಿ ನಾಪತ್ತೆಯಾಗಿರುವುದು ಅವರ ಕುಟುಂಬದ ಗಮನಕ್ಕೆ ಬಂದಿದೆ.
ಮನೆ ಇಡೀ ಮಗುವನ್ನು ಹುಡುಕಿದರೂ ಮಗು ಪತ್ತೆಯಾಗಲಿಲ್ಲ. ಕೊನೆಗೆ ತಂದೆ ಕಾರಿನ ಬಾಗಿಲು ತೆರೆದಾಗ ಕಾರಿನ ಮುಂಭಾಗದ ಸೀಟಿನಲ್ಲಿ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಗಂಟೆಗಳ ಕಾಲ ಕಾರಿನಲ್ಲಿಯೇ ಸಿಲುಕಿದ್ದರಿಂದಾಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ. ದುಬೈ ಪೊಲೀಸ್ ಅಪರಾಧ ತನಿಖಾ ವಿಭಾಗದ ನಿರ್ದೇಶಕ ಕರ್ನಲ್ ಮೆಕ್ಕೀ ಸಲ್ಮಾನ್ ಅಹ್ಮದ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನೂ ಈ ಸಂಬಂಧ ಪೋಷಕರ ವಿರುದ್ಧ ಯಾವ ಕ್ರಮ ಕೈಗೊಳ್ಳಲು ದುಬೈ ಪೊಲೀಸರು ಮುಂದಾಗಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಆದರೆ, “ಪೋಷಕರು ಯಾವಾಗಲೂ ತಮ್ಮ ಮಕ್ಕಳನ್ನು ಬಹಳ ಎಚ್ಚರಿಕೆಯಿಂದ ಗಮನಿಸಬೇಕು. ಯಾವುದೇ ಕಾರಣಕ್ಕೂ ಕಾರಿನಲ್ಲಿ ಮಕ್ಕಳನ್ನು ಮಾತ್ರವೇ ಕೂರಿಸಿ ಹೋಗಬೇಡಿ ಎಂದು ಕರ್ನಲ್ ಅಹ್ಮದ್ ಎಚ್ಚರಿಕೆ ನೀಡಿದ್ದಾರೆ.