ಮಹಿಳೆಯ ಮೇಲಿನ ಹಲ್ಲೆಯನ್ನು ಸಮರ್ಥಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಪ್ರಕರಣ ದಾಖಲು

ಮಲ್ಪೆ: ಮಲ್ಪೆ ಬಂದರಿನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿದವರ ಪರ ಮಲ್ಪೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಉದ್ರೇಕಕಾರಿ ಭಾಷಣ ಮಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಮಲ್ಪೆ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ದಲಿತ ಮಹಿಳೆಯ ಮೇಲೆ ನಡೆಸಲಾದ ಹಲ್ಲೆಯನ್ನು ಸಮರ್ಥಿಸಿ ಭಾಷಣ ಮಾಡಿದ್ದ ಪ್ರಮೋದ್ ಮಧ್ವರಾಜ್, ಕಳ್ಳರು ನಮ್ಮ ಮನೆಗೆ ಬಂದರೆ ನಾವು ಏನು ಮಾಡುತ್ತೇವೆ? ಕಳ್ಳರನ್ನು ಕಟ್ಟಿ ಹಾಕಲೇ ಬೇಕು ಮತ್ತೇನು ಮಾಡಲಿಕ್ಕೆ ಆಗುತ್ತೆ? ಅವರಿಗೆ ಮಚ್ಚು ಖಡ್ಗ, ತಲವಾರಿನಲ್ಲಿ ಹೊಡೆದಿದ್ದೇವಾ? ಕೇವಲ ಎರಡು ಕೆನ್ನೆಗೆ ಬಾರಿಸಿದ್ದು. ಅದೂ ಕಳ್ಳಿ ಅಂತ. ಆ ಮಹಿಳೆಯದ್ದು ಏನಾದ್ರೂ ಆಕ್ಷೇಪ ಉಂಟಾ ಅಂತ ಪ್ರಶ್ನಿಸಿದ್ದರು.
ಪ್ರಮೋದ್ ಮಧ್ವರಾಜ್ ಸಾರ್ವಜನಿಕರಲ್ಲಿ ಅಪರಾಧ ಮಾಡಲು ಪ್ರೇರೇಪಣೆ ನೀಡಿದ್ದು, ಇದರಿಂದ ದೊಂಬಿಯ ಅಪರಾಧ ನಡೆಯುವ ಸಾಧ್ಯತೆ ಇದೆ ಎಂದು ದೂರಲಾಗಿದ್ದು, ಅವರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ 57, 191(1), 192 ಬಿಎನ್ ಎಸ್ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಾಂಗ್ರೆಸ್ ಒತ್ತಡಕ್ಕೆ ಮಣಿದು ಎಫ್ ಐಆರ್ ಆರೋಪ:
ಪ್ರಮೋದ್ ಮಧ್ವರಾಜ್ ವಿರುದ್ಧ ಪೊಲೀಸ್ ಇಲಾಖೆ ಕಾಂಗ್ರೆಸ್ ಒತ್ತಡಕ್ಕೆ ಮಣಿದು ಎಫ್ ಐಆರ್ ದಾಖಲಿಸಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆರೋಪಿಸಿದ್ದಾರೆ.
ಮಹಿಳಾ ಮೀನುಗಾರರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಕಾಂಗ್ರೆಸ್ ಸರ್ಕಾರದ ನಿರ್ದೇಶನದಂತೆ ಕೇಸು ದಾಖಲಿಸಿದ ಪೊಲೀಸ್ ಇಲಾಖೆಯ ಲೋಪವನ್ನು ಪ್ರಶ್ನಿಸಿದ ಮಾಜಿ ಸಚಿವರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸುವ ಮೂಲಕ ಮೀನುಗಾರರ ಧ್ವನಿ ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಮಹಿಳೆ ಮೇಲಿನ ಹಲ್ಲೆ ಸಮರ್ಥನೆ ಎಷ್ಟು ಸರಿ?
ಮಹಿಳೆ ಮೇಲೆ ಕಳ್ಳತನದ ಆರೋಪ ಹೊರಿಸಿ ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ರಾಜ್ಯಾಧ್ಯಂತ ಸುದ್ದಿಯಾಗಿದೆ. ಮಹಿಳೆ ಕಳ್ಳತನ ಮಾಡಿದ್ದರೆ, ಆಕೆಯ ಮೇಲೆ ದೂರು ನೀಡಿ ಪೊಲೀಸರಿಗೆ ಒಪ್ಪಿಸಬಹುದಿತ್ತು. ಆದರೆ ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರಿಸಿ, ಹಗ್ಗದಿಂದ ಮರಕ್ಕೆ ಕಟ್ಟಿ ಹಾಕಿ, ಹಲ್ಲೆ ನಡೆಸಿ ಕಾನೂನು ಕೈಗೆತ್ತಿಕೊಂಡು ದೌರ್ಜನ್ಯ ನಡೆಸಿರುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಕೇಳಿ ಬಂದಿದೆ. ದಲಿತರ ಪರ ಕಾಳಜಿ ವಹಿಸುತ್ತೇವೆ ಎನ್ನುವ ಬಿಜೆಪಿ ನಾಯಕರು ದಲಿತ ಮಹಿಳೆಯ ಮೇಲೆ ನಡೆದ ಹಲ್ಲೆಯನ್ನು ಸಮರ್ಥಿಸುತ್ತಿರುವುದು, ದಲಿತರಲ್ಲಿ ಭದ್ರತೆಯ ಆತಂಕವನ್ನು ಸೃಷ್ಟಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: