ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯೆಯರಿಗೆ ಜಾತಿ ನಿಂದನೆ: ದೂರು ದಾಖಲು
ಬಂಟ್ವಾಳ: ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯೆಯರಿಗೆ ಜಾತಿನಿಂದನೆ ನಡೆಸಿರುವ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಧರ್ಮಸ್ಥಳ ಸಂಘದ ಸದಸ್ಯೆಯರಾದ ಸುಚಿತ್ರಾ, ಚೈತ್ರಾ, ಪವಿತ್ರಾ, ಸಂಧ್ಯಾ ಹಾಗೂ ಪ್ರತಿಮಾ ಎಂಬವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ಇವರನ್ನು, ತಾಯಿ ಪ್ರೇಮಾ ಹಾಗೂ ಮಗಳು ಜಯಂತಿ ಎಂಬವರು ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸುಚಿತ್ರಾ, ಚೈತ್ರಾ, ಪವಿತ್ರಾ, ಸಂಧ್ಯಾ ಹಾಗೂ ಪ್ರತಿಮಾ ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿದ್ದಾರೆ. ಇದೇ ಊರಿನ ಜಯಂತಿಯವರು ಕೂಡ ಈ ಸಂಘದ ಸದಸ್ಯೆಯಾಗಿದ್ದಾರೆ. ಪ್ರತೀ ವಾರ ಸಂಘದ ಸಭೆಯು ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯಲ್ಲಿ ನಡೆಯುತ್ತಿದೆ.
ನವೆಂಬರ್ 5ರಂದು ಕೂಡ ಸಂಘದ ಸಭೆ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಡೆದಿತ್ತು. ಈ ಸಭೆ ಮುಗಿದ ಬಳಿಕ ಈ ಹಿಂದೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಜಯಂತಿಯವರ ಬಳಿಯಲ್ಲಿ ದೂರುದಾರರು ಪ್ರಶ್ನಿಸಿದ್ದರು.
ಆಗ ನೀವು ಮನೆಗೆ ಬಂದು ತಾಯಿಯ ಜೊತೆಗೆ ಮಾತನಾಡಿ ಎಂದು ಅವರು ಹೇಳಿದ್ದರು. ಅಂತೆಯೇ ಅವರ ಮನೆಗೆ ತೆರಳಿ ತಮಗೆ ಬೈದಿರುವ ಬಗ್ಗೆ ಪ್ರಶ್ನಿಸಿದಾಗ, ಪ್ರೇಮಾ ಅವರು ಜಾತಿಯನ್ನು ಉಲ್ಲೇಖಿಸಿ, ನಿಂದಿಸಿ, ನೀವು ದೇವಸ್ಥಾನದ ಒಳಗೆ ಬಂದು ಅಪವಿತ್ರವಾಗಿದೆ. ಇನ್ನೊಮ್ಮೆ ಬ್ರಹ್ಮಕಲಶ ಮಾಡಬೇಕು ಎಂದು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದು, ಈ ವೇಳೆ ಜಯಂತಿ ಅವರು ಕೂಡ, “ನಿಮಗೆ ಚಪ್ಪಲಿಯಲ್ಲಿ ಹೊಡೆಯ ಬೇಕು” ಎಂದು ದೂರು ದಾಖಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ನೊಂದ ಯುವತಿಯರು ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.