ಸಿಡಿ ವಿಚಾರ: ಪೊಲೀಸರ ಮೊರೆ ಹೋದ ಋಷಿಕುಮಾರ ಸ್ವಾಮೀಜಿ
ಬೆಂಗಳೂರು: ಸಿಡಿ ಕೇಸ್ ಗೆ ಸಂಬಂಧಿಸಿದಂತೆ ಆರೋಪಿ ರಮೇಶ್ ಜಾರಕಿಹೊಳಿ ಪರವಾಗಿ ಮಾತನಾಡಿರುವುದಕ್ಕೆ ತನಗೆ ಬೆದರಿಕೆ ಹಾಕಲಾಗಿದೆ ಎಂದು ಎಂದು ಋಷಿಕುಮಾರ ಸ್ವಾಮೀಜಿ ಪೊಲೀಸರ ಮೊರೆ ಹೋಗಿದ್ದಾರೆ.
ರಮೇಶ್ ಜಾರಕಿಹೊಳಿ ಪರ ಮಾತನಾಡಿದ್ದಕ್ಕೆ ಬರುವ ಅಮವಾಸ್ಯೆಗೆ ನಿನ್ನನ್ನು ಮುಗಿಸುತ್ತೇವೆ ಎಂದು ಅಪರಿಚಿತ ವ್ಯಕ್ತಿಗಳು ತನಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಹಾಗಾಗಿ ತನಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಸ್ವಾಮೀಜಿ ಮನವಿ ಮಾಡಿದ್ದಾರೆ.
ಸಿಡಿ ಪ್ರಕರಣ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧವೇ ಇಲ್ಲದ ಋಷಿಕುಮಾರಸ್ವಾಮೀಜಿಗೆ ಯಾಕೆ ಬೆದರಿಕೆ ಹಾಕಲಾಗಿದೆ ಎನ್ನುವುದು ತಿಳಿದು ಬಂದಿಲ್ಲ. ರಮೇಶ್ ಜಾರಕಿಹೊಳಿ ಪರವಾಗಿ ಸಾಕಷ್ಟು ಜನರು ಮಾತನಾಡಿದ್ದಾರೆ. ಆದರೆ ಋಷಿಕುಮಾರಸ್ವಾಮೀಜಿಗೆ ಯಾಕೆ ಬೆದರಿಕೆ ಹಾಕಲಾಗಿದೆ ಎನ್ನುವುದು ತಿಳಿದು ಬಂದಿಲ್ಲ.
ಋಷಿಕುಮಾರಸ್ವಾಮೀಜಿಯ ಹಿನ್ನೆಲೆ ಗಮನಿಸಿದರೆ, ರಾಜ್ಯದಲ್ಲಿ ಈ ಹಿಂದೆ ಹಲವಾರು ನಾಟಕೀಯ ಬೆಳವಣಿಗೆಗೆ ಈ ಸ್ವಾಮೀಜಿ ಕಾರಣರಾಗಿದ್ದರು. ತಾನು ಸ್ವಾಮೀಜಿ ಅಲ್ಲ ಎಂದು ತನ್ನ ಕಾವಿ ವಸ್ತ್ರವನ್ನು ಕನ್ನಡ ಸುದ್ದಿವಾಹಿನಿಯೊಂದರ ಸ್ಟುಡಿಯೋದಲ್ಲಿ ಲೈವ್ ಕಾರ್ಯಕ್ರಮದಲ್ಲಿಯೇ ಕಳಚಿದ್ದರು. ಬಳಿಕ ಬಿಗ್ ಬಾಸ್ ನಲ್ಲಿ ಹೆಣ್ಣು ಮಕ್ಕಳ ಜೊತೆಗೆ ಡಾನ್ಸ್ ಮಾಡಿರುವ ವಿಚಾರದಲ್ಲಿಯೂ ವಿವಾದಕ್ಕೀಡಾಗಿದ್ದರು. ಇದೀಗ ಯಾರದ್ದೋ ಲೈಂಗಿಕ ಸಂಬಂಧದ ವಿಚಾರದಲ್ಲಿ ಮೂಗು ತೂರಿಸಿದ್ದು, ಇದೀಗ ಈ ಪ್ರಕರಣದಲ್ಲಿ ತನಗೆ ಬೆದರಿಕೆ ಬಂದಿದೆ ಎಂದು ಪೊಲೀಸ್ ಆಯುಕ್ತರ ಮೊರೆ ಹೋಗಿದ್ದಾರೆ.