ಚೈತ್ರಾ ಕುಂದಾಪುರ: ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ವಂಚನೆ: ಕೋಟ ಪೊಲೀಸರಿಂದ ಚೈತ್ರಾ ವಿಚಾರಣೆ
ಉಡುಪಿ: ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ನಂಬಿಸಿ ಐದು ಲಕ್ಷ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಡಿ ವಾರೆಂಟ್ ಮೂಲಕ ಕುಂದಾಪುರ ಮೂಲದ ಚೈತ್ರಾಳನ್ನು ವಿಚಾರಣೆಗಾಗಿ ಮಂಗಳವಾರ ಬ್ರಹ್ಮಾವರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪೊಲೀಸರು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೇಳಿದ್ದು ಕೋರ್ಟ್ ಒಂದು ದಿನ ಮಾತ್ರ ಕಸ್ಟಡಿಗೆ ನೀಡಿದ್ದರಿಂದ ವಿಚಾರಣೆ ನಡೆಸಿ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ವಂಚಿಸಿದ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಚೈತ್ರಾಳನ್ನು ಪೊಲೀಸ್ ಕಸ್ಟಡಿಗೆ ಪಡೆದ ಕೋಟ ಪೊಲೀಸರು ಮಂಗಳವಾರ ಬೆಂಗಳೂರಿನಿಂದ ಕೋಟಕ್ಕೆ ಕರೆತಂದಿದ್ದರು. ಬ್ರಹ್ಮಾವರ ಸಿಪಿಐ ದಿವಾಕರ್ ಪಿಎಂ ನೇತೃತ್ವದಲ್ಲಿ ಕೋಟ ಪಿಎಸ್ಐ ಶಂಭುಲಿಂಗಯ್ಯ ತಂಡ ವಿಚಾರಣೆ ನಡೆಸಿದ್ದು ಆಕೆಯಿಂದ ಹೇಳಿಕೆ ಪಡೆಯಲಾಗಿದೆ.
ಕೋಟ ಠಾಣೆಯಲ್ಲಿ ಈ ಹಿಂದೆ ಸುಧೀನ ಎನ್ನುವರು ನೀಡಿದ ದೂರಿನ ಕುರಿತಂತೆ ದಿನವಿಡೀ ವಿಚಾರಣೆ ನಡೆಸಲಾಗಿದೆ. ವಿಚಾರಣೆ ಪೂರ್ಣಗೊಂಡ ಬಳಿಕ ಚೈತ್ರಾಳನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಕ ದಂಡಾಧಿಕಾರಿ ನ್ಯಾಯಾಲಯ ಸಂಚಾರಿಪೀಠ ಎದುರು ಹಾಜರುಪಡಿಸಿದರು. ನ್ಯಾಯಾಲಯದ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಚೈತ್ರಾಳನ್ನು ಮಂಗಳೂರಿನ ಜೈಲಿಗೆ ಕಳುಹಿಸಿಕೊಡಲಾಯಿತು. ಅಲ್ಲಿಂದ ನಾಳೆ ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಏನಿದು ವಂಚನೆ ಪ್ರಕರಣ?:
ಕೋಟ ಠಾಣಾ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತ ಸುಧೀನ ಎಂಬುವರಿಗೆ 2015ರಲ್ಲಿ ಪರಿಚವಾದ ಚೈತ್ರಾ ತನಗೆ ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವ ಸಚಿವರು, ಮಂತ್ರಿಗಳ, ಶಾಸಕರ ನಿಕಟ ಸಂಪರ್ಕವಿದೆ ಎಂದು ನಂಬಿಸಿ 2018 ರಿಂದ 2023 ರ ತನಕ ಬಟ್ಟೆ ಅಂಗಡಿ ನಿರ್ಮಾಣಕ್ಕೆ ಐದು ಲಕ್ಷ ಹಣವನ್ನು ಹಂತ ಹಂತವಾಗಿ ಪಡೆದಿದ್ದಳು. ಮೂರು ಲಕ್ಷವನ್ನು ಚೈತ್ರಾ ಖಾತೆಗೆ ವರ್ಗಾಯಿಸಿದ್ದ ಸುದೀನ, ಉಳಿದ ಎರಡು ಲಕ್ಷ ಹಣವನ್ನ ನಗದು ರೂಪದಲ್ಲಿ ನೀಡಿದ್ದರು.
ಅಂಗಡಿಯ ಕುರಿತು ಕೇಳಿದಾಗೆಲ್ಲಾ ಚುನಾವಣಾ ಪ್ರಚಾರ, ಭಾಷಣ, ಕಾರ್ಯಕಾರಣಿ ಸಭೆ, ಪಕ್ಷದ ಮುಖಂಡರ ಭೇಟಿ ಎಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಚೈತ್ರಾ ವರ್ತನೆ ನೋಡಿ ಅನುಮಾನಗೊಂಡ ಸುಧೀನ ಕೂಡಲೇ ಬಟ್ಟೆ ಅಂಗಡಿಗೆ ಒತ್ತಾಯಿಸಿದ್ದರು. ಈ ವೇಳೆ ಚೈತ್ರಾ ಸುಧೀನ ಅವರ ವಿರುದ್ದ ಸುಳ್ಳು ಅತ್ಯಾಚಾರ ಪ್ರಕರಣ ಕೊಡುತ್ತೇನೆ, ಬಾಡಿಗೆ ಗೂಂಡಾಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ವಿವರಿಸಿದ್ದಾರೆ. ಅದರಂತೆ ಪೊಲೀಸರು ಚೈತ್ರಾ ವಿರುದ್ಧ 506, 417, 420 ಐಪಿಸಿ ಸೆಕ್ಷನ್ ಅಡಿ ಎಫ್ಐಆರ್ ದಾಖಲಿಸಿದ್ದರು.