ಕ್ವಾರಿ ಕುಸಿತದಿಂದ ಮೂವರು ಬಲಿ ವಿಚಾರ: ಸಮಸ್ಯೆಗೆ ಪರಿಹಾರ ನೀಡದೇ ಅಧಿಕಾರಿಗಳಿಂದ ಅಸಹಾಯಕತೆ ಪ್ರದರ್ಶನ - Mahanayaka
8:06 AM Thursday 12 - December 2024

ಕ್ವಾರಿ ಕುಸಿತದಿಂದ ಮೂವರು ಬಲಿ ವಿಚಾರ: ಸಮಸ್ಯೆಗೆ ಪರಿಹಾರ ನೀಡದೇ ಅಧಿಕಾರಿಗಳಿಂದ ಅಸಹಾಯಕತೆ ಪ್ರದರ್ಶನ

chamarajanagara
27/12/2022

ಚಾಮರಾಜನಗರ: ಚಾಮರಾಜನಗರದಲ್ಲಿ ಎಗ್ಗಿಲ್ಲದೇ ಅಕ್ರಮ, ಅವೈಜ್ಞಾನಿಕ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ಗುಡ್ಡ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.

ಚಾಮರಾಜನಗರ ತಾಲೂಕಿನ ಕಾಗಲವಾಡಿಮೋಳೆ ಗ್ರಾಮದ ಸಿದ್ದರಾಜು, ಕುಮಾರ್ ಹಾಗೂ ಶಿವರಾಜ್ ಎಂಬವರು ಮೃತ ದುರ್ದೈವಿಗಳು‌. ಅಪಾಯಕಾರಿ ಮಟ್ಟದಲ್ಲಿ, ಅವೈಜ್ಞಾನಿಕವಾಗಿ ಗಣಿಗಾರಿಕೆ ನಡೆಸಿದ ಪರಿಣಾಮವೇ ಈ ಅವಘಡಕ್ಕೆ ಕಾರಣವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ನಂಜುಂಡಸ್ವಾಮಿ ಅಸಹಾಯಕತೆ ಪ್ರದರ್ಶನ ಮಾಡಿದ್ದಾರೆ‌.

ಈ ಹಿಂದೆ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಸಮೀಪವೂ ಗುಡ್ಡ ಕುಸಿದು ಮೂವರು ಬಿಹಾರಿಗಳು ಸ್ಥಳದಲ್ಲೇ ಅಸುನೀಗಿದ್ದಾರೆ. ಆ ವೇಳೆ, ಎಚ್ಚೆತ್ತಿದ್ದ ಇಲಾಖೆ ಬಳಿಕ ಸುಮ್ಮನಾದ ಪರಿಣಾಮ ಜಿಲ್ಲೆಯಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.

ಘಟನೆ ಆಗಿದ್ದು ಹೇಗೆ:

ಗಣಿ ಇಲಾಖೆಯ ಪ್ರಕಾರ ಕ್ವಾರಿ ನಡೆಸಬೇಕಾದರೇ ಹಂತ-ಹಂತವಾಗಿ ಮಾಡಬೇಕು, ಜೊತೆಗೆ ಸ್ಪೋಟಕಗಳನ್ನು ಬಳಸಿದ್ದೇ ಆದಲ್ಲಿ ಇಲಾಖೆ ಅನುಮತಿ ಪಡೆದು ನುರಿತ ತಜ್ಞರಿಂದ ಸ್ಪೋಟಿಸಬೇಕೆನ್ನುವುದಾಗಿದೆ‌. ಆದರೆ, ಹಣ ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲೇ ಲಾಭ ಕಾಣಬೇಕೆಂಬ ಅತಿ ಆಸೆಯಿಂದ  ಒಂದೇ ಕಡೇ ಆಳವಾಗಿ ಗಣಿಗಾರಿಕೆ ಮಾಡಿ ಸುರಕ್ಷಿತೆ ಮರೆತದ್ದು ಈ ದುರ್ಘಟನೆಗೆ ಕಾರಣವಾಗಿದೆ‌.

ಅಧಿಕಾರಿಗಳು ಹೇಳೋದೇನು?

ಘಟನಾ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ನಂಜುಂಡಸ್ವಾಮಿ ಭೇಟಿ ನೀಡಿ ಮಾತನಾಡಿ, ಅವೈಜ್ಞಾನಿಕ, ಅಸುರಕ್ಷಿತೆಯ ಗಣಿಗಾರಿಕೆಯಿಂದ ಜೀವಹಾನಿಯಾಗಿದ್ದು, ಇದರ ಸಂಪೂರ್ಣ ಭಾಧ್ಯಸ್ಥರು ಗುತ್ತಿಗೆದಾರರೇ ಆಗಿದ್ದಾರೆ. ಸಾಕಷ್ಟು ಬಾರಿ ನೋಟಿಸ್ ಕೊಟ್ಟು, ಸುರಕ್ಷಿತ ಗಣಿಗಾರಿಕೆ ನಡೆಸುವುದಾಗಿ ಛಾಫ ಕಾಗದದಲ್ಲಿ ಬರೆಸಿಕೊಂಡಿದ್ದರೂ ಅವೈಜ್ಞಾನಿಕ ಕಾರ್ಯ ಎಸಗಿದ್ದಾರೆಂದು ಅಸಹಾಯಕತೆ ಪ್ರದರ್ಶಿಸಿದ್ದಾರೆ.

ಇನ್ನು, ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಅವರು ತಿಳಿಸಿದ್ದಾರೆ. ಆದರೆ, ಸಾಕಷ್ಟು ಬಾರಿ ನೋಟಿಸ್, ಸಭೆಗಳನ್ನು ನಡೆಸಿದರೂ ಯಾವುದಕ್ಕೂ ಗಣಿ ಮಾಲೀಕರು ಬಗ್ಗುತ್ತಿಲ್ಲವೇ ಎಂಬ ಪ್ರಶ್ನೆಯೂ ಮೂಡಿದೆ.

ಗಣಿ ಮಾಲೀಕರ ಬಂಧನಕ್ಕೆ ವಾಟಾಳ್ ನಾಗರಾಜ್ ಒತ್ತಾಯ:

ಜಿಲ್ಲೆಯಲ್ಲಿ ಕರಿಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದೇನೆ. ಆದರೆ ಪೊಲೀಸ್ ಇಲಾಖೆ, ಗಣಿ ಇಲಾಖೆ  ನಿರ್ಲಕ್ಷ್ಯ ವಹಿಸಿದ್ದಾರೆ,  ಕಳೆದ 15 ದಿನಗಳ ಹಿಂದೆ ಬಿಸಲವಾಡಿಯಲ್ಲಿ ಗಣಿಗಾರಿಕೆ ನಿಲ್ಲಿಸುವಂತೆ ಪ್ರತಿಭಟನೆಯನ್ನೂ ಮಾಡಿದ್ದೆ ಎಂದು ವಾಟಾಳ್ ನಾಗರಾಜ್ ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಒಟ್ಟಿನಲ್ಲಿ ಒಂದೆಡೆ ಗಣಿ ಲೂಟಿ ಮತ್ತೊಂದೆಡೆ ಮಾತು ಕೇಳದ ಗಣಿ ಮಾಲೀಕರು, ನಿರ್ಲಕ್ಷ ವಹಿಸಿರುವ ಅಧಿಕಾರಿಗಳ ನಡುವೆ ಸಾಮಾನ್ಯರು ತತ್ತರಿಸುತ್ತಿರುವುದಂತೂ ಸುಳ್ಳಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ