ಮತ್ತೆ ಮೃತ್ಯುಕೂಪವಾಯ್ತು ಚಾಮರಾಜನಗರ ಜಿಲ್ಲಾಸ್ಪತ್ರೆ | 20 ರೋಗಿಗಳು ಸಾವು
09/05/2021
ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆ ಮೃತ್ಯು ಕೂಪವಾಗಿದ್ದು, ಒಂದೇ ದಿನದಲ್ಲಿ 24 ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ ಘಟನೆ ಮಾಸುವ ಮೊದಲೇ ಮತ್ತೆ 20 ರೋಗಿಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಜಿಲ್ಲಾಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 20 ರೋಗಿಗಳು ಸಾವನ್ನಪ್ಪಿದ್ದಾರೆ. ಇವರಲ್ಲಿ 13 ರೋಗಿಗಳು ಕೊರೊನಾ ಸೋಂಕಿತರಾಗಿದ್ದು, 7 ಜನ ಇತರ ರೋಗಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಕೊರೊನಾ ಸೋಂಕಿತರು ಕೊನೇ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಎಂದು ಇಲ್ಲಿನ ವೈದ್ಯರು ವಾದಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕಳೆದವಾರ 24 ಗಂಟೆಯಲ್ಲಿ 24 ರೋಗಿಗಳು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಮತ್ತೆ 10 ರೋಗಿಗಳು ಸಾವನ್ನಪ್ಪಿದ್ದರೆ ಮೊನ್ನೆ ಕೂಡ 9 ರೋಗಿಗಳು ಮೃತಪಟ್ಟಿದ್ದರು. ಇದೀಗ ಮತ್ತೆ 20 ರೋಗಿಗಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.