ಚಾಮರಾಜನಗರ ದುರಂತ ಸಾವೋ, ಕೊಲೆಯೋ? | ನಿರ್ಲಕ್ಷ್ಯ ಸ್ಪಷ್ಟವಾದರೂ ಪ್ರಶ್ನೆಗಳಿಗೆ ಉತ್ತರವಿಲ್ಲ
ನವದೆಹಲಿ: ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿ 24 ಜನರು ದಾರುಣವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಇದು ಅತಿ ನಿರ್ಲಕ್ಷ್ಯದಿಂದ ಸಂಭವಿಸಿರುವ ಘಟನೆಯಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆಗಳು ಮಾತ್ರವೇ ಸಿಗುತ್ತಿದೆ. ಯಾರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಈ ನಡುವೆ ರಾಜ್ಯದ ಹಲವಾರು ಜನಪ್ರತಿನಿಧಿಗಳು ಈ ಘಟನೆಯನ್ನು ಖಂಡಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದು ಸಾವೋ ಕೊಲೆಯೋ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ಇದು ಸಾವೋ ಅಥವಾ ಕೊಲೆಯೋ? ಎಂದು ಪ್ರಶ್ನಿಸಿದ್ದಾರೆ. ದುರಂತದ ವರೆದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ದುರಂತಕ್ಕೆ ಸಂತಾಪ ಸೂಚಿಸಿದ ರಾಹುಲ್ ಗಾಂಧಿ ವ್ಯವಸ್ಥೆ ಎಚ್ಚೆತ್ತುಕೊಳ್ಳುವ ಮೊದಲು ಇನ್ನೆಷ್ಟು ಸಂಕಟ ಅನುಭವಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಸಿಎಂ, ಆರೋಗ್ಯ ಸಚಿವ ರಾಜೀನಾಮೆ ನೀಡಲಿ
ಇನ್ನೂ ಚಾಮರಾಜನಗರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇವರನ್ನು ನಂಬಿದರೆ ನಮ್ಮೆಲ್ಲರ ತಿಥಿಯಾಗುತ್ತದೆ
ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸರ್ಕಾರ ನಮ್ಮನ್ನು ಉಳಿಸಿಕೊಳ್ಳುತ್ತೆ ಅಂದುಕೊಂಡಿದ್ದರೆ, ಅದು ನಮ್ಮೆಲ್ಲರ ತಿಥಿ ಆಗುತ್ತೆ ಎಂದರ್ಥ. ಇದನ್ನು ಬರೆದಿಟ್ಟುಕೊಳ್ಳಿ. ಅವನ್ಯಾವನೋ ಆರೋಗ್ಯ ಮಂತ್ರಿ ಒಂದೇಳುತ್ತಾನೆ. ಮುಖ್ಯಮಂತ್ರಿ ಒಂದೇಳುತ್ತಾನೆ. ಇವರ್ಯಾರೂ ಸರಿಯಾದ ಮಾಹಿತಿಯನ್ನ ಜನರಿಗೆ ನೀಡುತ್ತಿಲ್ಲ ಎಂದು ಏಕವಚನದಲ್ಲೇ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಟುಂಬಸ್ಥರಿಗೆ ಸರ್ಕಾರ ಪರಿಹಾರ ನೀಡಬೇಕು
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಆಕ್ಸಿಜನ್ ಕೊರತೆಯಿಂದ ಚಾಮರಾಜನಗರದಲ್ಲಿ ದೊಡ್ಡ ದುರಂತ ಸಂಭವಿಸಿದ್ದು, ಇದು ತುಂಬಾ ದುಃಖಕರ ಘಟನೆ ಎಂದು ಹೇಳಿದರು. ಈ ಘಟನೆಗೆ ಕಾರಣ ಏನು ಎಂಬುದರ ಬಗ್ಗೆ ಕೂಲಂಕಶವಾಗಿ ತಿಳಿಯಲು ಆರೋಗ್ಯ ಸಚಿವರು ನಗರಕ್ಕೆ ಭೇಟಿ ನೀಡುತ್ತಿದ್ದು, ಅವರು ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲಿದ್ದಾರೆ ಎಂದರು. ಮೈಸೂರಿನಿಂದ ಆಕ್ಸಿಜನ್ ಪೂರೈಕೆಯಾಗದೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಘಟನೆಯಿಂದ ಸಾವನ್ನಪ್ಪಿರುವ ಬಡ ಕುಟುಂಬಗಳಿಗೆ ಹೆಚ್ಚಿನ ಪರಿಹಾರವನ್ನು ನೀಡಬೇಕೆಂದು ಮುಖ್ಯಮಂತ್ರಿ ಅವರಿಗೆ ಮಾನವಿ ಮಾಡುವುದಾಗಿ ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತ ಪ್ರಸಾದ್ ತಿಳಿಸಿದರು.
ಸಾವಿಗೆ ಹೊಣೆ ಯಾರು?
ಆಕ್ಸಿಜನ್ ಕೊರತೆಯಿಂದ 24 ಜನರ ಸಾವಿಗೆ ಹೊಣೆಯಾರು? ಇವರನ್ನು ಕಳೆದುಕೊಂಡಿರುವ ಕುಟುಂಬಕ್ಕೆ ಹೇಗೆ ಧೈರ್ಯ ತುಂಬಬೇಕು ಎಂಬುದೇ ತೋಚುತ್ತಿಲ್ಲ. ಈ ಸರ್ಕಾರ ನಂಬಿಕೆ ಕಳೆದುಕೊಂಡಿದ್ದು, ಮುಖ್ಯಕಾರ್ಯದರ್ಶಿಗಳನ್ನು ಭೇಟಿ ಮಾಡಿ ಜನರಿಗೆ ವಾಸ್ತವಾಂಶ ತಿಳಿಸಿ ಎಂದು ಮಾಡಿಕೊಳ್ಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಮಸ್ಯೆ ತಿಳಿದು ಸುಮ್ಮನಿದ್ದದ್ದು ಅಪರಾಧ
ಆಕ್ಸಿಜನ್ ಕೊರತೆಯಿಂದ 24 ಮಂದಿ ಮೃತಪಟ್ಟ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರದಲ್ಲಿ ಚಾಮರಾಜನಗರ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದ್ದು, ಮುನ್ನೆಚ್ಚರಿಕೆ ಕ್ರಮವಹಿಸಿದ್ದರೆ ಅನಾಹುತ ತಪ್ಪಿಸಬಹುದಿತ್ತು. ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳೇ ಈ ಘಟನೆಗೆ ನೇರ ಕಾರಣ. ಇದು ದೊಡ್ಡ ಕ್ರಿಮಿನಲ್ ಅಪರಾಧವಾಗಿದೆ. ಅಲ್ಲಿನ ಡಿಸಿ, ಸಚಿವರ ಜೊತೆ ನೆನ್ನೇಯೇ ದೂರವಾಣಿ ಮೂಲಕ ಸಂಪರ್ಕಿಸಿದ್ದೆ, ಆದರೆ ಸಂಪರ್ಕಕ್ಕೆ ಸಿಗಲಿಲ್ಲ. ಇಂದು ಬೆಳಗ್ಗೆ ಕರೆ ಮಾಡಿ ಸಮಸ್ಯೆ ಇಲ್ಲ ಎಂದರು. ಒಂದು ವಾರದ ಹಿಂದೆಯೇ ಜಿಲ್ಲೆಯಲ್ಲಿ ಸಮಸ್ಯೆ ಇದೆ ಎಂದು ಗೊತ್ತಿದ್ದರೂ ಸುಮ್ಮನಿದ್ದದ್ದು ಅಪರಾಧ ಎಂದು ಹೇಳಿದರು.
ನಿಜಕ್ಕೂ ದುರ್ದೈವದ ಸಂಗತಿ
ಮೈಸೂರಿನಿಂದ ಸುಮಾರು 145 ಆಕ್ಸಿಜನ್ ಸಿಲಿಂಡರ್‌ಗಳನ್ನು ತಲುಪಿಸಿದ್ದೇವೆ. ಆದರೂ ಪರಿಸ್ಥಿತಿ ನಿಭಾಯಿಸುವಲ್ಲಿ ಲೋಪ ಉಂಟಾಗಿ ಇಷ್ಟೊಂದು ಜನರು ಪ್ರಾಣ ಕಳೆದುಕೊಂಡಿರುವುದು ನಿಜಕ್ಕೂ ದುರ್ದೈವದ ಸಂಗತಿ. ಚಾಮರಾಜನಗರ ಜಿಲ್ಲಾಡಳಿತ ಇನ್ನಷ್ಟು ಜಾಗರೂಕತೆ ವಹಿಸಬೇಕಾಗಿತ್ತು’ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿದರು.
ತನಿಖೆಗೆ ಆದೇಶಿಸಿದ ಸಿಎಂ ಯಡಿಯೂರಪ್ಪ
ಜಿಲ್ಲೆಯಲ್ಲಿ ಭಾನುವಾರ ಮಧ್ಯರಾತ್ರಿ ಆಮ್ಲಜನಕ ಕೊರತೆಯಿಂದ ಸಂಭವಿಸಿದ 24 ಜನ ಸೋಂಕಿತ ರೋಗಿಗಳ ಸಾವಿಗೆ ಸಂಬಂಧಪಟ್ಟಂತೆ ತನಿಖೆಗೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದು, ಮೂರು ದಿನಗಳ ಒಳಗಾಗಿ ತನಿಖಾ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಐಎಎಸ್ ಅಧಿಕಾರಿ ಶಿವಯೋಗಿ ಕಳಸದ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವ್ಯವಸ್ಥಾಪಕ ನಿರ್ದೇಶಕ) ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಘಟನೆಯ ಕುರಿತಾಗಿ ತನಿಖಾ ವರದಿಯನ್ನು ಮೂರು ದಿನಗಳ ಒಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶಿಸಲಾಗಿದೆ.