ಲಾಕ್ ಡೌನ್ | ಚಮ್ಮಾರರ ತುತ್ತಿಗೂ ಕುತ್ತು, ಒಂದು ಹೊತ್ತು ಊಟಕ್ಕೂ ಪರದಾಟ
10/05/2021
ವಾಡಿ: ಲಾಕ್ ಡೌನ್ ನಿಂದಾಗಿ ಪಾದರಕ್ಷೆಗಳ ರಿಪೇರಿ, ಫಾಲಿಶ್ ಮೊದಲಾದ ಕೆಲಸ ಮಾಡುವ ಚುಮ್ಮಾರರ ತುತ್ತಿಗೂ ಕುತ್ತು ಬಂದಿದ್ದು, ಆದಾಯವಿಲ್ಲದೇ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
25 ವರ್ಷಗಳಿಂದ ಚಮ್ಮಾರಿಕೆ ವೃತ್ತಿ ಮಾಡುತ್ತಿರುವ ಸ್ಥಳೀಯ ನಿವಾಸಿ ಧರ್ಮಣ್ಣ ನೀಲಗಲ ಅವರ ಕುಟುಂಬ ಲಾಕ್ ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಆದಾಯವಿಲ್ಲದ ಕಾರಣ ಊಟಕ್ಕೂ ಪರದಾಡುವಂತಾಗಿದೆ.
ಚಮ್ಮಾರಿಕೆ ಮಾಡಿಕೊಂಡು ನಾನು 8 ಮಕ್ಕಳ ಮದುವೆಯನ್ನು ಮಾಡಿದ್ದೇನೆ. ಆದರೆ ಇಂತಹ ಸ್ಥಿತಿ ಎಂದಿಗೂ ಬಂದಿಲ್ಲ ಎಂದು ಧರ್ಮಣ್ಣ ಹೇಳಿದ್ದಾರೆ. ದಿನಕ್ಕೆ 600ರಿಂದ 800 ರೂಪಾಯಿಗಳವರೆಗೆ ದುಡಿಯುತ್ತಿದ್ದವರು ಈಗ 100, 200 ರೂಪಾಯಿಯೂ ದುಡಿಯಲು ಸಾಧ್ಯವಾಗದ ಪರಿಸ್ಥಿತಿ ಬಂದಿದೆ.
ಸರ್ಕಾರ ಕೇವಲ ಲಾಕ್‌ಡೌನ್ ಘೋಷಿಸಿದರೆ ಸಾಲದು. ಬಡವರ ಬದುಕು ಬೀದಿಗೆ ಬೀಳದಂತೆ ನೋಡಿಕೊಳ್ಳುವುದು ಅದರ ಕರ್ತವ್ಯವಾಗಿದೆ. ಚಮ್ಮಾರರು ಸೇರಿದಂತೆ ಎಲ್ಲ ಕಾರ್ಮಿಕರಿಗೂ ಸರ್ಕಾರ ಪರಿಹಾರ ನೀಡಬೇಕು ಎಂದು ಶರಣು ಹೆರೂರು ಎಂಬವರು ಕೂಡ ಮನವಿ ಮಾಡಿದ್ದಾರೆ.