ಚಂದ್ರಶೇಖರ್ ಆಜಾದ್ ಬೆಂಗಾವಲಿನ ಮೇಲೆ ದಾಳಿ ನಡೆಸಿದ ಗೂಂಡಾಗಳನ್ನು ಬಂಧಿಸಿ | ಭೀಮ್ ಆರ್ಮಿ ಮಸ್ಕಿ ತಾಲೂಕು ಘಟಕ ಒತ್ತಾಯ
ಮಸ್ಕಿ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ಬೆಂಗಾವಲಿಗೆ ಗುಂಡಿನ ದಾಳಿ ನಡೆಸಿದ ಘಟನೆಯನ್ನು ಮಸ್ಕಿ ತಾಲೂಕು ಘಟಕವು ಖಂಡಿಸಿದ್ದು, ಪ್ರಕರಣ ಸಂಬಂಧ ಕೃತ್ಯ ನಡೆಸಿರುವವರನ್ನು ಕೂಡಲೇ ಬಂಧಿಸುವಂತೆ ಭೀಮ್ ಆರ್ಮಿ ಮುಖಂಡರು ಒತ್ತಾಯಿಸಿದರು.
ಸದರ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಚಂದ್ರಶೇಖರ್ ರಾವಣ್ ಅವರ ಬೆಂಗಾವಲಿಗೆ ಗುಂಡು ಹಾರಿಸಲಾಗಿದೆ. ಆಜಾದ್ ಅವರು ಸ್ಥಾಪಿಸಿರುವ ಆಜಾದ್ ಸಮಾಜ್ ಪಾರ್ಟಿ ಅಭ್ಯರ್ಥಿ ಬುಲಾಂದರ್ ಶಹರ್ ನಲ್ಲಿ ಕಣಕ್ಕಿಳಿದಿರುವುದರಿಂದ ಭಯಭೀತರಾಗಿರುವವರು ಈ ರೀತಿಯ ಕೃತ್ಯವನ್ನು ಎಸಗಿದ್ದಾರೆ ಎಂದು ಭೀಮ್ ಆರ್ಮಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಬಂಧ ಮಸ್ಕಿ ತಹಶೀಲ್ದಾರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ಇದೇ ವೇಳೆಯಲ್ಲಿ ನೀಡಲಾಯಿತು. ಕೃತ್ಯ ಎಸಗಿರುವ ಗೂಂಡಾಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದರು.
ಈ ಸಂದರ್ಭ ತಾಲೂಕು ಅಧ್ಯಕ್ಷ ಹನುಮಂತ ಬೆಳ್ಳಿ, ಉಪಾಧ್ಯಕ್ಷ ರಮೇಶ್ ಹೆಚ್, ಗೌರವಾಧ್ಯಕ್ಷ ಅಪ್ಪು ಕೊಠಾರಿ, ಖಜಾಂಚಿ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಜೊತೆಗಿದ್ದರು.