ಚಕ್ ದೇ ಇಂಡಿಯಾ: ಚಂದ್ರನನ್ನು ಚುಂಬಿಸಿದ ಇಸ್ರೋ

ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಬುಧವಾರ ಸಂಜೆ ಚಂದ್ರನ ಅಂಗಳಕ್ಕೆ ಇಳಿಯುವಲ್ಲಿ ಯಶಸ್ವಿಯಾಗಿದೆ. ಚಂದ್ರನ ಅಜ್ಞಾತ ಪ್ರದೇಶವಾದ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮುವ ಮೂಲಕ ಕೋಟ್ಯಂತರ ಭಾರತೀಯರ ಕನಸು ನನಸಾಗಿದೆ.
ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್) ಒಳಗೊಂಡಿರುವ ನೌಕೆ ಬುಧವಾರ ಸಂಜೆ 6.04ಕ್ಕೆ ಚಂದ್ರನ ಮೇಲೆ ಲ್ಯಾಂಡಿಂಗ್ ನಡೆಸಿತ್ತು. ಈ ಮೂಲಕ ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಚೀನಾ, ರಷ್ಯಾ, ಅಮೆರಿಕ ಈಗಾಗಲೇ ಈ ಯತ್ನದಲ್ಲಿ ಯಶಸ್ಸು ಕಂಡಿವೆ.
600 ಕೋಟಿ ರೂಪಾಯಿ ವೆಚ್ಚದ ಚಂದ್ರಯಾನ-3 ನೌಕೆಯನ್ನು ಜುಲೈ 14ರಂದು ಉಡಾವಣೆ ಮಾಡಲಾಗಿತ್ತು. 41 ದಿನಗಳ ಪ್ರಯಾಣದ ನಂತರ ಅದು ಚಂದ್ರನ ಕಕ್ಷೆ ತಲುಪಿತು.
ಅಂದಾಜು 6.8 ಕಿಮೀ ಎತ್ತರದ ಕಕ್ಷೆ ತಲುಪಿದಾಗ ಎರಡು ಎಂಜಿನ್‌ಗಳನ್ನು ಮಾತ್ರ ಬಳಸಲಾಗಿತ್ತು. ಇನ್ನೆರಡು ಎಂಜಿನ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಲ್ಯಾಂಡರ್ ಇಳಿಯುತ್ತಿದ್ದ ಸಂದರ್ಭ ರಿವರ್ಸ್ ಥ್ರಸ್ಟ್ ಬಳಕೆ ಮಾಡಲಾಗಿದೆ.
ಇದಕ್ಕೂ ಮೊದಲು ಸುಮಾರು 150-100 ಮೀಟರ್ ಎತ್ತರದಲ್ಲಿದ್ದಾಗಲೇ ಲ್ಯಾಂಡರ್ ತನ್ನ ಸಂವೇದಕಗಳು ಮತ್ತು ಕ್ಯಾಮರಾಗಳನ್ನು ಬಳಸಿ ಯಾವುದೇ ಅಡೆತಡೆಗಳಿವೆಯೇ ಎಂದು ಪರಿಶೀಲಿಸಿದ ಬಳಿಕ ಮೃದುವಾಗಿ ಲ್ಯಾಂಡಿಂಗ್ ಮಾಡಿದೆ. ಪ್ರತಿ ಸೆಕೆಂಡಿಗೆ ಸುಮಾರು 1.68 ಕಿ.ಮೀ ಪ್ರಾರಂಭಿಕ ವೇಗವನ್ನು ಅಂತಿಮವಾಗಿ ಪ್ರತಿ ಸೆಕೆಂಡ್‌ಗೆ 2 ಮೀಟರ್‌ಗೆ ಇಳಿಸಲಾಗಿತ್ತು.