“ಚೆನ್ನೈ ಟಾಕ್ಸ್” ಯೂಟ್ಯೂಬ್ ನಲ್ಲಿ ಮಹಿಳೆಯಿಂದ ಸೆಕ್ಸ್ ಟಾಕ್ | ಯೂಟ್ಯೂಬರ್ ಸೇರಿದಂತೆ ಮೂವರು ಅರೆಸ್ಟ್
ಚೆನ್ನೈ: ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯಿಂದ ಸೆಕ್ಸ್ ಹಾಗೂ ಮದ್ಯಪಾನದ ಬಗ್ಗೆ ಮಾತನಾಡಿಸಿದ ಆರೋಪದಲ್ಲಿ ಯೂಟ್ಯೂಬ್ ಚಾನೆಲೊಂದರ ವ್ಯಕ್ತಿಯನ್ನು ಚೆನ್ನೈ ಪೊಲೀಸರು ಬಂಧಿಸಲಾಗಿದೆ. ಬೀಚ್ ಸಮೀಪದಲ್ಲಿ ಸಾರ್ವಜನಿಕರಿಂದ ಬೈಟ್ ಪಡೆದುಕೊಂಡು, ಇದು ಕೇವಲ ತಮಾಷೆಗಾಗಿ ನಡೆಸಲಾಗುತ್ತಿರುವ ಕಾರ್ಯಕ್ರಮ ಎಂದು ಹೇಳುತ್ತಿದ್ದರು ಎನ್ನಲಾಗಿದೆ.
ಮಹಿಳೆಯೊಬ್ಬರಿಂದ ಸೆಕ್ಸ್ ಹಾಗೂ ಮದ್ಯಪಾನದ ಬಗ್ಗೆ ಓಪನ್ ಆಗಿ ಮಾತನಾಡಿಸಿ, ವಿಡಿಯೋವನ್ನು ಯೂಟ್ಯೂಬ್ ಗೆ ಅಪ್ ಲೋಡ್ ಮಾಡಲಾಗಿತ್ತು. ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಇದರಿಂದಾಗಿ ವಿಡಿಯೋದಲ್ಲಿ ಮಾತನಾಡಿದ ಮಹಿಳೆ ಕೂಡ ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ ಚಾನೆಲ್ ಮಾಲಿಕ ದಿನೇಶ್(31) ಹಾಗೂ ವಿಡಿಯೋ ಜಾಕಿ ಅಸೆನ್ ಬಾದ್ ಷಾ(23), ಕ್ಯಾಮೆರಾಮೆನ್ ಅಜಯ್ ಬಾಬು(24) ಎಂಬವರನ್ನು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ಸಾರ್ವಜನಿಕ ಅಶ್ಲೀಲತೆ, ಲೈಂಗಿಕ ಕಿರುಕುಳ ಮೊದಲಾದ ಪ್ರಕರಣಗಳನ್ನು ಆರೋಪಿಗಳ ಮೇಲೆ ಹಾಕಲಾಗಿದೆ. “ಚೆನ್ನೈ ಟಾಕ್ಸ್” ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಇಂತಹ 200 ವಿಡಿಯೋಗಳನ್ನು ಅಪ್ ಲೋಡ್ ಮಾಡಲಾಗಿದೆ. ಚೆನ್ನೈ ಬೆಸೆಂತ್ ನಗರ ಬೀಚ್ ನಲ್ಲಿ ಬಹುತೇಕ ವಿಡಿಯೋಗಳನ್ನು ಮಾಡಲಾಗಿದೆ.
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಶಾಸ್ತ್ರಿನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮುರುಗನ್ ಮತ್ತು ಇನ್ಸ್ ಪೆಕ್ಟರ್ ಷನ್ಮುಗಸುಂದರಂ ಕಾರ್ಯಾಚರಣೆಗಿಳಿದಿದ್ದು, ಬೀಚ್ ಬಳಿಗೆ ತೆರಳಿದಾಗ ಇಬ್ಬರು ಯುವಕರು ಕ್ಯಾಮರಾ ಹಾಗೂ ಮೈಕ್ರೋ ಫೋನ್ ಹಿಡಿದುಕೊಂಡು ನಿಂತಿದ್ದರು. ಅವರನ್ನು ವಿಚಾರಿಸಿದಾಗ ಫ್ರ್ಯಾಂಕ್ ಶೋ ಎಂದು ಹೇಳಿದ್ದಾರೆ. ಆದರೆ ಪೊಲೀಸರು ಇವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.