ಹಿಂದೂ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆಸಿದ ಮುಸ್ಲಿಮ್ ಯುವಕರು!
ಕೊಟ್ಟಿಗೆಹಾರ: ಜಾತಿ–ಧರ್ಮದ ಹೆಸರಲ್ಲಿ ಹಗ್ಗಜಗ್ಗಾಟಗಳು ನಡೆಯುತ್ತಿರುವ ಹೊತ್ತಲ್ಲೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಗ್ರಾಮದಲ್ಲಿ ಮೃತ ಹಿಂದೂ ವ್ಯಕ್ತಿಯ ಹೆಗಲಿಗೆ ಮುಸ್ಲಿಂ ಯುವಕರು ಹೆಗಲು ಕೊಟ್ಟು ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಸಿದ್ದಾರೆ.
20 ವರ್ಷಗಳ ಹಿಂದೆಯೇ ಮನೆ ಬಿಟ್ಟು ಬಂದಿದ್ದ ವ್ಯಕ್ತಿ ಚಕ್ಕಮಕ್ಕಿಯ ಇಮ್ತಿಯಾಜ್ ಎಂಬುವವರ ನ್ಯೂ ಮಂಗಳೂರು ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ದುರದೃಷ್ಟವಶಾತ್ ಆ ವ್ಯಕ್ತಿ ಹೃದಯಘಾತದಿಂದ ಮೃತಪಟ್ಟಿದ್ದರು. ವರ್ಷಗಳ ಹಿಂದೆಯೇ ಮನೆ ಬಿಟ್ಟಿದ್ದರಿಂದ ಆತನಿಗೆ ಯಾರ ಸಂಪರ್ಕವೂ ಇರಲಿಲ್ಲ. ಮೃತ ವ್ಯಕ್ತಿಯ ಮೊಬೈಲ್ ಪರಿಶೀಲಿಸಿ ಯುವಕರು ಸಂಬಂಧಿಗಳಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಮೃತ ವ್ಯಕ್ತಿಗೆ ಇಬ್ಬರು ಪತ್ನಿಯರಿದ್ದು, ಮೊದಲ ಪತ್ನಿ ಮೃತಪಟ್ಟಿರುತ್ತಾರೆ. ಎರಡನೇ ಪತ್ನಿಗೆ ಕರೆ ಮಾಡಿ ವಿಷಯ ತಿಳಿಸಿದರೂ ಯಾರು ಬರುವುದಿಲ್ಲ. ಕೊನೆಗೆ ಮೊದಲ ಪತ್ನಿಯ ಮಗ ಆಳ್ವಾಸ್ ಕಾಲೇಜಿನಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡ ಯುವಕರು ಕೊನೆಗೆ ಮಗನ ಕೈಯಲ್ಲೇ ತಂದೆಯ ಅಂತ್ಯ ಸಂಸ್ಕಾರ ಮಾಡಿಸಿದ್ದಾರೆ. ಚಕ್ಕಮಕ್ಕಿಯ ಮುಸ್ಲಿಂ ಯುವಕರು ಹಾಗೂ ಸಮಾಜ ಸೇವಕ ಆರಿಫ್ ಯುವಕರ ಜೊತೆಗೆ ನಿಂತು ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಅಂತ್ಯಕ್ರಿಯೆ ನೆರವೇರಿಸಲು ಮೂಡಿಗೆರೆಯ ರುದ್ರಭೂಮಿಗೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಿದ್ದಾರೆ . ಈ ವೇಳೆ ಮುಸ್ಲಿಂ ಬಾಂಧವರೇ ಶವಕ್ಕೆ ಹೆಗಲು ಕೊಟ್ಟು ಹಿಂದೂ ಸಂಪ್ರದಾಯದಂತೆ ಪೂಜೆ ನೆರವೇರಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: