ಬೀಜೋತ್ಪಾದನೆಯಲ್ಲಿ 1.3 ಲಕ್ಷ ಬಾಲ ಕಾರ್ಮಿಕರು | ಗುಜರಾತ್ ನಲ್ಲೊಂದು ಅಮಾನವೀಯ ಘಟನೆ ಪತ್ತೆ
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ನಲ್ಲಿ 1.3 ಲಕ್ಷ ಮಕ್ಕಳು ಬಾಲ ಕಾರ್ಮಿಕರಾಗಿ ಬೀಜೋತ್ಪಾದನೆಗೆ ಸಂಬಂಧಿಸಿದ ಹತ್ತಿ ಹೊಲಗಳಲ್ಲಿ ದುಡಿಯುತ್ತಿದ್ದಾರೆ ಎಂದು ಎನ್ ಜಿಒ ಸಂಸ್ಥೆಯೊಂದು ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.
ಸೆಂಟರ್ ಫಾರ್ ಲೇಬರ್ ರಿಸರ್ಚ್ ಆಯಂಡ್ ಆಯಕ್ಷನ್ ಈ ಅಧ್ಯಯನ ನಡೆಸಿದ್ದು, 1.3 ಲಕ್ಷ ಮಕ್ಕಳ ಪೈಕಿ ಬಹುತೇಕ ಮಕ್ಕಳು ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ ಎಂದು ವರದಿಯಾಗಿದೆ.
ಬೀಜೋತ್ಪಾದನೆಗಾಗಿ ಹತ್ತಿ ಕೃಷಿ ಕೈಗೊಂಡವರು ತಮ್ಮ ಹೊಲಗಳಲ್ಲಿ ದುಡಿಯುವ ಕಾರ್ಮಿಕರಿಗೆ ಬಹಳ ಕಡಿಮೆ ಕೂಲಿ ನೀಡುತ್ತಾರೆ. ಹೀಗಾಗಿ ಇಂಥ ಕೃಷಿಕರು ಕೂಲಿ ಕೆಲಸಕ್ಕೆ ಮಕ್ಕಳಿಗೇ ಆದ್ಯತೆ ನೀಡುತ್ತಾರೆ’ ಎಂದು ಎನ್‌ಜಿಒ ಪ್ರತಿನಿಧಿ ಸುಧೀರ್ ಕಟಿಯಾರ್ ತಿಳಿಸಿದ್ದಾರೆ.
ಮಕ್ಕಳನ್ನು ಬೀಜೋತ್ಪಾದನೆ ಕಂಪೆನಿಗಳು ಗುಜರಾತ್ ನಲ್ಲಿ ಈ ಹಿಂದೆ ಅಂದರೆ 10 ವರ್ಷಗಳ ಹಿಂದೆಯೂ ಬಳಸಿಕೊಂಡಿತ್ತು. ಸರ್ಕಾರ ತಕ್ಕಮಟ್ಟಿನ ಕ್ರಮ ಕೈಗೊಂಡ ಪರಿಣಾಮ ನಿಯಂತ್ರಣಕ್ಕೆ ಬಂದಿತ್ತು. ಇದಾದ ಬಳಿಕ ಇದೇ ಕಂಪೆನಿಗಳನ್ನು ಬುಡಕಟ್ಟು ಜನರೇ ಹೆಚ್ಚಾಗಿರುವ ಬಾನಸ್‌ಕಂಠ, ಸಬರ್‌ಕಂಠ, ಅರ್ವಲ್ಲಿ, ಮಹಿಸಾಗರ್ ಹಾಗೂ ಛೋಟಾ ಉದೇಪುರ ಜಿಲ್ಲೆಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಇಲ್ಲಿ ಬುಡಕಟ್ಟು ಜನರ ಮಕ್ಕಳು ವ್ಯಾಪಕವಾಗಿ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದಾಗಿ ಈ ಮಕ್ಕಳ ಭವಿಷ್ಯವೇ ಸರ್ವನಾಶವಾಗುತ್ತಿದೆ ಎಂದು ಹೇಳಲಾಗಿದೆ.