ಆ್ಯಂಬುಲೆನ್ಸ್ ಇಲ್ಲದೇ ತಂದೆಯ ಮೃತದೇಹ ಬೈಕ್ ನಲ್ಲಿ ಸಾಗಿಸಿದ ಮಕ್ಕಳು: ಇಬ್ಬರು ಸಚಿವರಿರುವ ತುಮಕೂರು ಜಿಲ್ಲೆಯ ದುಸ್ಥಿತಿ!
ತುಮಕೂರು: ಎಲ್ಲೋ ದೂರದ ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ನಡೆಯುತ್ತಿದ್ದ ಘಟನೆ ಇದೀಗ ನಮ್ಮ ಕರ್ನಾಟಕದ ಅದರಲ್ಲೂ ಒಂದೇ ಜಿಲ್ಲೆಯಲ್ಲಿ ಇಬ್ಬರು ಸಚಿವರಿರುವ ತುಮಕೂರು ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.
ಹೌದು..! ತಮ್ಮ ತಂದೆಯ ಮೃತದೇಹವನ್ನು ಸಾಗಿಸಲು ಆ್ಯಂಬುಲೆನ್ಸ್ ಸಿಗದ ಕಾರಣ ಮಕ್ಕಳು ಬೈಕ್ ನಲ್ಲಿ ತಂದೆಯ ಮೃತದೇಹವನ್ನು ಸಾಗಿಸಿರುವ ಅಮಾನವೀಯ ಘಟನೆ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.
ವಯೋಸಹಜ ಕಾಯಿಲೆಯಿಂದ ದಳವಾಯಿ ಹಳ್ಳಿ ಗ್ರಾಮದ ಗುಡುಗುಲ್ಲ ಹೊನ್ನೂರಪ್ಪ ಎನ್ನುವ 80 ವರ್ಷದ ವೃದ್ಧ ವೈ.ಎನ್.ಹೋಸಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದರು. ಮೃತಪಟ್ಟಿರುವ ಹೊನ್ನೂರಪ್ಪ ಅವರ ಶವವನ್ನು ಸಾಗಿಸಲು ಆಂಬುಲೆನ್ಸ್ ಇಲ್ಲದ ಕಾರಣ ದ್ವಿಚಕ್ರ ವಾಹನದಲ್ಲಿಯೇ ಹೊನ್ನೂರಪ್ಪ ಅವರ ಹಿರಿಯ ಪುತ್ರ ಚಂದ್ರಣ್ಣ ಮತ್ತು ಕಿರಿಯ ಪುತ್ರ ಗೋಪಾಲಪ್ಪ ತಮ್ಮೂರಿಗೆ ತೆಗೆದುಕೊಂಡು ತೆಗೆದುಕೊಂಡು ಹೋಗಿದ್ದಾರೆ.
ಪಾವಗಡ ತಾಲೂಕಿನಲ್ಲಿ ನಡೆದಿರುವ ಈ ಘಟನೆ ತುಮಕೂರು ಜಿಲ್ಲಾಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ. ಒಂದೇ ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ, ಇಂತಹದ್ದೊಂದು ಘಟನೆ ನಡೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಜ್ಯ ಗೃಹ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ತುಮಕೂರು ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ.
ಇನ್ನೊಂದೆಡೆ ತಾಲೂಕಿನ ಶಾಸಕ ಹೆಚ್.ವಿ.ವೆಂಕಟೇಶ್ ಅವರ ವೈಫಲ್ಯಕ್ಕೆ ಈ ಘಟನೆಯೇ ಸಾಕ್ಷಿ ಎಂದು ಹೇಳುವಂತಾಗಿದೆ. ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಕ್ರಮವಹಿಸುವರೇ ಕಾದು ನೋಡಬೇಕಿದೆ.
ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಿದೆ ಎನ್ನುವ ಒತ್ತಾಯ ಕೇಳಿ ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: