ಚಿರತೆಯ ಜೊತೆಗೆ ಹೋರಾಡಿ ತನ್ನ ಮಗಳನ್ನು ರಕ್ಷಿಸಿದ ತಾಯಿ!
ಮುಂಬೈ: ತಾಯಿಯೊಬ್ಬರು ಚಿರತೆಯೊಂದಿಗೆ ಹೋರಾಡಿ ತನ್ನನ್ನು ಹಾಗೂ ತನ್ನ ಐದು ವರ್ಷದ ಮಗಳನ್ನು ರಕ್ಷಿಸಿಕೊಂಡ ಅಪರೂಪದ ಘಟನೆ ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಕಾಡಿನಲ್ಲಿ ನಡೆದಿದೆ.
ಜಿಲ್ಲಾ ಕೇಂದ್ರದಿಂದ 15 ಕಿ.ಮೀ ದೂರದಲ್ಲಿರುವ ಜುನೊನಾ ಗ್ರಾಮದ ನಿವಾಸಿ ಅರ್ಚನಾ ಮೆಶ್ರಮ್ ಹಳ್ಳಿಯ ಹೊರವಲಯಕ್ಕೆ ಹೋಗುತ್ತಿದ್ದಾಗ ಚಿರತೆ ಅವರ ಹಿಂದೆ ಬಿದ್ದಿತ್ತು. ಚಿರತೆಯನ್ನು ನೋಡಿ ಭಯ ಭೀತರಾದ ಅವರು, ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಆದರೆ ಚಿರತೆಯ ವೇಗದೊಂದಿಗೆ ಮಗಳ ಜೊತೆಗೆ ಓಡುವುದು ಸಾಧ್ಯವಿಲ್ಲದ ಮಾತಾಗಿತ್ತು.
ಅಟ್ಟಿಸಿಕೊಂಡು ಬರುತ್ತಿದ್ದ ಚಿರತೆಗೆ ಮಹಿಳೆ ಬಿದಿರಿನ ಕೋಲೊಂದನ್ನು ಅಡ್ಡ ಹಿಡಿಯುತ್ತಿದ್ದಂತೆಯೇ ಚಿರತೆ ಮಗಳ ಮೇಲೆ ಎರಗಿದೆ. ಈ ವೇಳೆ ಮಹಿಳೆ ಸಮೀಪದಲ್ಲಿ ಬಿದ್ದಿದ್ದ ಬಿದಿರಿನ ಕೋಲಿನಿಂದ ಚಿರತೆಗೆ ಹೊಡೆಯಲು ಆರಂಭಿಸಿದ್ದಾರೆ. ಮಗುವನ್ನು ಚಿರತೆಯಿಂದ ರಕ್ಷಿಸಲು ಸತತವಾಗಿ ಚಿರತೆಗೆ ಏಟು ನೀಡಿದ್ದು, ಈ ವೇಳೆ ನೋವು ಸಹಿಸಲು ಸಾಧ್ಯವಾಗದೇ ಚಿರತೆ ಮಗುವನ್ನು ಸ್ಥಳದಲ್ಲಿಯೇ ಬಿಟ್ಟು, ಓಡಿ ಹೋಗಿದೆ.
ಚಿರತೆಯ ದಾಳಿಯಿಂದ ಬಾಲಕಿ ತೀವ್ರವಾಗಿ ಗಾಯಗೊಂಡು ಬಿದ್ದಿದ್ದಳು, ಆಕೆಯನ್ನು ಹೊತ್ತುಕೊಂಡು ಮಹಿಳೆ ಜೋರಾಗಿ ಕೂಗಿದ್ದು, ಈ ವೇಳೆ ಅರಣ್ಯ ಸಿಬ್ಬಂದಿ ಓಡಿ ಬಂದು ತಾಯಿ- ಮಗಳು ಇಬ್ಬರನ್ನೂ ತಕ್ಷಣವೇ ನಾಗ್ಬುರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಬಾಲಕಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.