ಚಿರತೆಯೊಂದಿಗೆ ಹೋರಾಡಿ ಕೊನೆ ಕ್ಷಣದಲ್ಲಿ ಬದುಕಿ ಬಂದ ಬಾಲಕ!
ಮೈಸೂರು: 6ನೇ ತರಗತಿಯ ವಿದ್ಯಾರ್ಥಿಯೋರ್ವ ಚಿರತೆಯ ಬಾಯಿಯಿಂದ ತಪ್ಪಿಸಿಕೊಂಡಿರುವ ಘಟನೆ ನಡೆದಿದ್ದು, ಚಿರತೆ ಕುತ್ತಿಗೆಯಲ್ಲಿ ಹಿಡಿದಿದ್ದು, ಈ ವೇಳೆ ಬಾಲಕ ಚಿರತೆಯ ಕಣ್ಣಿಗೆ ಕೈ ಹಾಕಿ ಚಿರತೆಯಿಂದ ಪಾರಾಗಿದ್ದಾನೆ.
ಮೈಸೂರು ತಾಲೂಕಿನ ಕಡಕೊಳ ಗ್ರಾಮದ ರವಿಕುಮಾರ್ ಹಾಗೂ ಲಕ್ಷ್ಮೀ ಎಂಬವರ ಪುತ್ರ ನಂದನ್ ಪ್ರತೀ ದಿನ ಶಾಲೆ ಮುಗಿದ ಬಳಿಕ ತಂದೆಯ ಜೊತೆಗೆ ಜಮೀನಿಗೆ ಹೋಗುತ್ತಾನೆ. ಹಾಗೆಯೇ ಶನಿವಾರ ಕೂಡ ಹೋಗಿದ್ದು, ಈ ವೇಳೆ ಹುಲ್ಲು ಕತ್ತರಿಸುತ್ತಿದ್ದ ಸಂದರ್ಭ ಏಕಾ ಏಕಿ ಚಿರತೆಯೊಂದು ಬಾಲನ ಹಿಂದಿನಿಂದ ಬಂದು ಕುತ್ತಿಗೆಯಲ್ಲಿ ಹಿಡಿದು ಹೊತ್ತೊಯ್ಯಲು ಮುಂದಾಗಿದೆ.
ಚಿರತೆ ಏಕಾಏಕಿ ಮಾಡಿದ ದಾಳಿಯಿಂದ ಕೆಲ ಕಾಲ ಏನು ಮಾಡಬೇಕು ಎಂದು ತೋಚದ ಬಾಲಕ ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈ ವೇಳೆ ಚಿರತೆಯ ಕಣ್ಣಿಗೆ ಕೈ ಹಾಕಿದ್ದು, ಈ ವೇಳೆ ಅಲ್ಲೇ ಇದ್ದ ಬಾಲಕನ ತಂದೆ ಚಿರತೆಯನ್ನು ಎಳೆದು ಮಗನನ್ನು ರಕ್ಷಣೆ ಮಾಡಿದ್ದಾರೆ. ಚಿರತೆಯ ಕಣ್ಣಿಗೆ ಕೈ ಹಾಕಿದ ವೇಳೆ ಚಿರತೆ ತನ್ನ ಹಿಡಿತ ಸಡಿಲಿಸಿತ್ತು.
ರಾಜ್ಯಾದ್ಯಂತ ಆನೆ ದಾಳಿ, ಚಿರತೆ ದಾಳಿ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ, ಅರಣ್ಯ ಇಲಾಖೆ ಇನ್ನೂ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಜೀವ ಹೋದ ಮೇಲೆ ಸಮಸ್ಯೆಗಳನ್ನು ಕೇಳುವುದಕ್ಕಿಂತ ಅದಕ್ಕೂ ಮೊದಲೇ ಕ್ರಮವನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.