ಚಿತ್ರರಂಗದ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ ನಟಿ ಸಂಜನಾ ಗಲ್ರಾನಿ
03/06/2021
ಬೆಂಗಳೂರು: ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ಸಿನಿ ಕುಟುಂಬಕ್ಕೆ ಸಹಾಯ ಹಸ್ತ ಚಾಚಿರುವ ನಟಿ ಸಂಜನಾ ಗಲ್ರಾನಿ, ಕಲಾವಿದರು ಮತ್ತು ತಂತ್ರಜ್ಞರಿಗೆ ದಿನಸಿ ಕಿಟ್ ವಿತರಿಸಿದ್ದಾರೆ.
ಕರ್ನಾಟಕ ವಾಣಿಜ್ಯ ಮಂಡಳಿ ಕಚೇರಿ ಬಳಿಯ ಗುರುರಾಜ ಮಂಟಪದಲ್ಲಿ ಸಂಜನಾ, ಚಿತ್ರರಂಗದ ಕಾರ್ಮಿಕರಿಗೆ ಕಿಟ್ ವಿತರಿಸಿದ್ದು, ಈ ವೇಳೆ ನಿರ್ಮಾಪಕ ಕೆ.ಮಂಜು, ಎನ್.ಕುಮಾರ್ ಹಾಗೂ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಸಾಥ್ ನೀಡಿದರು.
ಇದೇ ಸಂದರ್ಭದಲ್ಲಿ ಮಾಧ್ಯಮಗಳ ಪ್ರಶ್ನೆಗ ಉತ್ತರಿಸಿದ ಅವರು, ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾಗಿರುವ ಕಲಾವಿದರಿಗೆ ನೆರವು ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಂಜನಾ ಗಲ್ರಾನಿ ಫೌಂಡೇಶನ್ ವತಿಯಿಂದ ಇನ್ನಷ್ಟು ಕೆಲಸಗಳನ್ನು ಮಾಡುತ್ತೇನೆ. ನನ್ನ ಹೊಸ ವೆಬ್ ಸೈಟ್ ಕೂಡ ರಿಲೀಸ್ ಆಗಿದೆ. ಎಲ್ಲವೂ ಸರಿ ಹೋಗಲಿದೆ ಎನ್ನುವ ನಂಬಿಕೆ ನನಗಿದೆ ಎಂದು ಅವರು ತಿಳಿಸಿದರು.