ಚುನಾವಣಾ ಪ್ರಚಾರ ಎಂದು ಹೀಗಾ ಮಾಡೋದು? | ನಾಯಿಗಳನ್ನು ಹೇಗೆ ದುರ್ಬಳಕೆ ಮಾಡಿದ್ದಾರೆ ನೋಡಿ
ರಾಯ್ ಬರೇಲಿ: ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಗಳು ನಾನಾ ರೀತಿಯ ಪ್ರಚಾರ ತಂತ್ರಗಳನ್ನು ಮಾಡುವುದು ಸಾಮಾನ್ಯ ಆದರೆ, ಉತ್ತರಪ್ರದೇಶದ ಪಂಚಾಯತ್ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಚಾರಕ್ಕೆ ನಾಯಿಗಳನ್ನು ದುರ್ಬಳಕೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಅಭ್ಯರ್ಥಿಗಳ ಹೆಸರು ತಿಳಿದು ಬಂದಿಲ್ಲ. ಆದರೆ ಒಬ್ಬ ಅಭ್ಯರ್ಥಿ ರಾಯ್ ಬರೇಲಿ ಮತ್ತು ಇನ್ನೋರ್ವ ಬಲ್ಲಿಯಾದಿಂದ ಸ್ಪರ್ಧಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇವರು ಬೀದಿ ನಾಯಿಗಳ ಮೇಲೆ ತಮ್ಮ ಚುನಾವಣಾ ಪ್ರಚಾರದ ಪೋಸ್ಟರ್ ಅಂಟಿಸಿ ಊರಿನೊಳಗೆ ಅಟ್ಟಿಸಿ ಬಿಡುತ್ತಾರೆ. ನಾಯಿ ವಿವಿಧ ಕಡೆಗಳಿಗೆ ಸುತ್ತಾಡುತ್ತದೆ. ನಾಯಿಗಳಿಗೆ ಪೋಸ್ಟರ್ ನ್ನು ತನ್ನ ಬೆನ್ನಿನಿಂದ ಎಳೆಯಲು ಸಾಧ್ಯವಾಗದೇ ಇರುವುದರಿಂದ ಸಾರ್ವಜನಿಕರು ಈ ಪೋಸ್ಟರ್ ನ್ನು ಗಮನಿಸುತ್ತಿರುತ್ತಾರೆ ಎನ್ನುವುದು ಅಭ್ಯರ್ಥಿಗಳು ಲೆಕ್ಕಚಾರವಾಗಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರ ವೈರಲ್ ಆಗುತ್ತಿದ್ದು, ಈ ಘಟನೆಯ ವಿರುದ್ಧ ಪ್ರಾಣಿ ಪ್ರಿಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳಿಗೆ ಈ ರೀತಿಯ ಹಿಂಸೆಯನ್ನು ನೀಡುವುದು ತಪ್ಪು ಎಂದು ಸಾರ್ವಜನಿಕರು ಹೇಳಿದ್ದಾರೆ.
ಈ ಅಭ್ಯರ್ಥಿಗಳ ಪೈಕಿ ಹೆಸರು ಹೇಳಲು ಇಚ್ಛಿಸದ ಅಭ್ಯರ್ಥಿ, ನಾವು ನಾಯಿಗೆ ಹೊಟ್ಟೆ ತುಂಬಾ ಊಟ ಕೊಡುತ್ತಿದ್ದೇವೆ. ನಾಯಿಗೆ ಯಾವ ರೀತಿಯಲ್ಲಿಯೂ ಹಿಂಸೆ ನೀಡುತ್ತಿಲ್ಲ. ಚುನಾವಣಾ ಪ್ರಚಾರಕ್ಕೆ ಇದೊಂದು ಹೊಸ ಪ್ರಯೋಗ ಎಂದು ಹೇಳಿದ್ದಾರೆ.
ಚುನಾವಣೆ ಪ್ರಚಾರಕ್ಕಾಗಿ ನಾಯಿಗಳಿಗೆ ಹಿಂಸೆ ನೀಡಲು ಅವಕಾಶ ನೀಡಬಾರದು. ಈ ಕೃತ್ಯದ ವಿರುದ್ಧ ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕು ಎಂದು ಪ್ರಾಣಿ ಪ್ರಿಯರು ಹೇಳಿಕೆ ನೀಡಿದ್ದಾರೆ.