ಯೋಗಿ ಕುರ್ಚಿ ಗಡಗಡ | ಚುನಾವಣೆ ಸಮೀಪಿಸುತ್ತಿರುವಾಗಲೇ ಬಿಜೆಪಿ ಹೈಕಮಾಂಡ್ ಹೈಡ್ರಾಮಾ?
ನವದೆಹಲಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಕುರ್ಚಿ ಅಲುಗಾಡುತ್ತಿದ್ದು, ಕಳಪೆ ಕೊವಿಡ್ ನಿರ್ವಹಣೆಯ ಹಿನ್ನೆಲೆಯಲ್ಲಿ ಯೋಗಿ ವಿರುದ್ಧ ಬಿಜೆಪಿ ಹೈಕಮಾಂಡ್ ಗರಂ ಆಗಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ಪ್ರಧಾನಿ ಮೋದಿಯ ಭೇಟಿಗಾಗಿ ದೆಹಲಿಗೆ ಹಾರಿದ್ದಾರೆ.
ಉತ್ತರ ಪ್ರದೇಶ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇವೆ. ಇದೇ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಅವರ ಆಡಳಿತದಿಂದ ಉತ್ತರ ಪ್ರದೇಶ ರಾಜ್ಯ ದುಸ್ಥಿತಿ ಇಡೀ ವಿಶ್ವದಲ್ಲಿಯೇ ಚರ್ಚೆಗೀಡಾಗಿದೆ. ಬಿಜೆಪಿ ಗೆಲುವು ಸಾಧಿಸಿದ ಬಳಿಕ ಉತ್ತರ ಪ್ರದೇಶದಲ್ಲಿ ಜನರ ಜೀವನ ಸ್ಥಿತಿ ತೀರಾ ಹೀನಾಯ ಮಟ್ಟಕ್ಕೆ ಇಳಿದಿದೆ.
ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡ ಬಳಿಕ ಉತ್ತರಪ್ರದೇಶದಲ್ಲಿ ಗೂಂಡಾಗಳ ಅಬ್ಬರ ಮತ್ತೆ ಏರಿಕೆಯಾಗಿದೆ. ಮಹಿಳೆಯರ ಸ್ಥಿತಿಯಂತೂ ಹೇಳತೀರದು. 90 ವರ್ಷ ವಯಸ್ಸಿನ ವೃದ್ಧೆಯರಿಂದ ಹಿಡಿದು ಹುಟ್ಟಿ ಕೆಲವೇ ದಿನಗಳ, ತಿಂಗಳುಗಳ ಮಕ್ಕಳ ಮೇಲೆ ಕೂಡ ಅತ್ಯಾಚಾರ ಆರಂಭವಾಗಿತ್ತು. ದಲಿತರು ಹಾಗೂ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ, ದೌರ್ಜನ್ಯ, ಕೊಲೆ, ಹಿಂಸಾಚಾರಗಳೇ ನಡೆದು ಹೋಗಿದ್ದವು. ಜನ ಚುನಾವಣೆಗಾಗಿ ಕಾದು ಕುಳಿತಿದ್ದರು. ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ, ಯೋಗಿ ಆದಿತ್ಯನಾಥ್ ನ್ನು ಶಿಕ್ಷಿಸುವ ನಾಟಕವೊಂದನ್ನು ಬಿಜೆಪಿ ಹೈಕಮಾಂಡ್ ಆರಂಭಿಸಿದ್ದು, ಈ ಮೂಲಕ ಪಕ್ಷದ ವರ್ಚಸ್ಸನ್ನು ಉಳಿಸಿಕೊಳ್ಳಲು ಮುಂದಾಗಿದೆ ಎಂದು ಹೇಳಲಾಗಿದೆ.
ಕೊರೊನಾ ನಿಯಂತ್ರಣದಲ್ಲಿ ಯೋಗಿ ಸರ್ಕಾರ ವಿಫಲವಾಗಿದೆ ಎನ್ನುವ ವಿಚಾರವನ್ನು ಮಾತ್ರವೇ ರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಬಿಂಬಿಸುತ್ತಿವೆ. ಆದರೆ, ಯೋಗಿ ಆದಿತ್ಯನಾಥ್ ಆಡಳಿತ ಸಂದರ್ಭದಲ್ಲಿ ಜಾತಿ, ಧರ್ಮ, ಲಿಂಗದ ಆಧಾರದಲ್ಲಿ ನಡೆದ ಘನಘೋರ ಘಟನೆಗಳನ್ನು ಮುಚ್ಚಿಡಲಾಗಿದೆ.
ಕೊವಿಡ್ ವಿಚಾರದಲ್ಲಿ ಯೋಗಿ ಆದಿತ್ಯನಾಥ್ ನ್ನು ಶಿಕ್ಷಿಸುವ ಬಿಜೆಪಿ ಹೈಕಮಾಂಡ್ ನ ಹೈಡ್ರಾಮಾದಿಂದ ಯೋಗಿ ಆದಿತ್ಯನಾಥ್ ಅವರ ಆಡಳಿತ ಅವಧಿಯಲ್ಲಿ ದಲಿತ, ಮುಸ್ಲಿಮ್, ಕ್ರೈಸ್ತ ಸೇರಿದಂತೆ ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಮೇಲೆ ನಡೆದ ಅತ್ಯಾಚಾರಗಳನ್ನು ಮುಚ್ಚಿ ಹಾಕುವ ಹುನ್ನಾರ ಕೂಡ ಸೇರಿದೆ ಎನ್ನುವ ಅನುಮಾನಗಳು ಇದೀಗ ಕೇಳಿ ಬಂದಿದೆ.