ಸಿಗರೇಟ್ ನ ಕಪಿ ಮುಷ್ಠಿಯಲ್ಲಿ ಸಿಲುಕಿ ಒದ್ದಾಡಿ ಬಿಟ್ಟಿದ್ದೆ | ಮರೆಯಲಾರದ ಘಟನೆ
ನಮ್ಮ ಜೀವನದ ಬಗ್ಗೆ ನಾವು ಅತಿಯಾದ ಕನಸು ಕಾಣುತ್ತೇವೆ. ಚೆನ್ನಾಗಿ ಓದ ಬೇಕು, ಒಳ್ಳೆಯ ಜಾಬ್ ಬೇಕು. ಒಳ್ಳೆ ಹಣ, ಕಾರು, ಮನೆ, ಸುಂದರಿ ಪತ್ನಿ ಬೇಕು. ಹೀಗೆ ನಮ್ಮ ಕನಸಿಗೇನೂ ಕಡಿಮೆ ಇಲ್ಲ. ನಾನೊಬ್ಬ ಕನಸುಗಾರ.. ಅತಿಯಾಗಿ ಕನಸು ಕಾಣುತ್ತೇನೆ. ಎಲ್ಲಾದ್ರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದರೆ, ಸುಮ್ಮನೆ ಕಣ್ಣು ತೆರೆದುಕೊಂಡು ಹಗಲು ಕನಸು ಕಾಣುತ್ತಿರುತ್ತೇನೆ.
ಕನಸು ಅನ್ನೋದು ನನಗೆ ಒಂದು ರೀತಿಯಲ್ಲಿ ಬಡತನ ನಿರ್ಮೂಲನೆ ಕಾರ್ಯಕ್ರಮದಂತೆ. ಯಾಕೆಂದರೆ, ನಾನು ಕಾಲೇಜಿನಲ್ಲಿರುವಾಗ, ಕಡುಬಡತನದಲ್ಲಿದ್ದವನು ನನ್ನ ಮನೆಯಲ್ಲಿ ವಿದ್ಯುತ್ ವ್ಯವಸ್ಥೆ ಕೂಡ ಇರಲಿಲ್ಲ. ಆ ಸಂದರ್ಭದಲ್ಲೆಲ್ಲ ನಾನು ಕಾಲೇಜಿನಿಂದ ಮನೆಗೆ ಬಸ್ಸಿನಲ್ಲಿ ಬರುವ ವೇಳೆ ಸುಮ್ಮನೆ ಕುಳಿತು ಕನಸು ಕಾಣುತ್ತಿದ್ದೆ. ಆ ಕನಸು ನೆನೆಸಿದರೆ ಈಗಲೂ ಒಮ್ಮೊಮ್ಮೆ ನಗು ಬರುತ್ತದೆ.
ನನ್ನ ಕನಸುಗಳು ತುಂಬಾ ವಿಚಿತ್ರವಾಗಿತ್ತು. ನಾನು ಕಾಲೇಜು ಬಿಟ್ಟುಮನೆಗೆ ಹೋಗುವ ದಾರಿಯಲ್ಲಿ ಕಂತೆ ಕಂತೆ ಹಣ ಬಿದ್ದು ಸಿಗಬೇಕು ಎಂಬಲ್ಲಿಂದ ನನ್ನ ಕನಸು ಆರಂಭವಾಗುತ್ತಿತ್ತು. ಆ ಹಣದಲ್ಲಿ ನನ್ನ ಕುಟುಂಬಸ್ಥರಿಗೆಲ್ಲ ಹಣ ಹಂಚ ಬೇಕು, ನನ್ನ ಶತ್ರುಗಳ ಎದುರು ಕಾರಿನಲ್ಲಿ ಹೋಗಬೇಕು. ಅವರಿಗೆ ನನ್ನನ್ನು ಕಂಡು ಹೊಟ್ಟೆ ಕಿಚ್ಚು ಬರಬೇಕು. ನಾನು ಒಂದು ಕಂಪೆನಿ ಆರಂಭಿಸಬೇಕು. ನನ್ನ ಕಾಲೇಜಿನಲ್ಲಿ ಓದುತ್ತಿರುವ ಅಹಂಕಾರಿ ಹುಡುಗಿಯರು ಉದ್ಯೋಗ ಕೇಳಿ ಕೊಂಡು ನನ್ನ ಹಿಂದೆ ಬರಬೇಕು, ನನ್ನ ಪ್ರಾಣ ಸ್ನೇಹಿತರಿಗೆಲ್ಲ ಕಂಪೆನಿಯಲ್ಲಿ ಟಾಪ್ ಪೋಸ್ಟ್ ನೀಡಿ, ಒಳ್ಳೆಯ ಸಂಬಳ ನೀಡಬೇಕು… ಹೀಗೆ ನನ್ನ ಕನಸು, ನಾನು ಇಳಿಯುವ ಬಸ್ ಸ್ಟಾಪ್ ವರೆಗೆ ನಾನ್ ಸ್ಟಾಪ್ ಆಗಿ ಓಡುತ್ತಲೇ ಇತ್ತು.
ಕಾಲೇಜು ಮುಗಿದ ಬಳಿಕದ ಚಿತ್ರಣವೇ ಬದಲಾಯ್ತು. ನನ್ನ ಜೊತೆಗಿದ್ದ ಪ್ರಾಣ ಸ್ನೇಹಿತರೂ ಇರಲಿಲ್ಲ, ಶತ್ರುಗಳೂ ಇರಲಿಲ್ಲ… ಎಲ್ಲರೂ ಅವರವರ ಭವಿಷ್ಯ ರೂಪಿಸಲು ಅವರು ಹೋಗಿ ಬಿಟ್ಟರು. ಡಿಗ್ರಿ ಮುಗಿಸಿದರೆ ಸಾಕು, ಗವರ್ನ್ ಮೆಂಟ್ ಜಾಬ್ ಸಿಗುತ್ತದೆ ಅಂದುಕೊಂಡಿದ್ದ ನನ್ನ ಕಲ್ಪನೆ ಬರೇ ಭ್ರಮೆ ಅನ್ನೋದು ಗೊತ್ತಾಯ್ತು. ಕಾಲೇಜಿನಿಂದ ಹೊರ ಬಂದ ಬಳಿಕ ದುಡಿಮೆ ಅನಿವಾರ್ಯವಾಯಿತು. ಜಾಬ್ ಗಾಗಿ ಅಲೆದಾಡಿ ಅಲೆದಾಡಿ ಬಳಲಿ ಬೆಂಡಾಗಿದೆ. ಎಲ್ಲಿ ಹೋದರೂ ನಿಮ್ಮ ಮಾರ್ಕ್ಸ್ ಎಷ್ಟು ಎಂದು ಯಾರು ಕೇಳಲಿಲ್ಲ, ನಿನಗೆ ವರ್ಕ್ ಎಕ್ಸ್ ಪೀರಿಯನ್ಸ್ ಇದೆಯಾ ಅಂತಲೇ ಕೇಳಿದರು. ಜಾಬ್ ಕೊಟ್ರೆ ತಾನೆ, ಎಕ್ಸ್ ಪೀರಿಯನ್ಸ್ ಆಗೋದು ಅಂತ ಕೆಲವು ಕಡೆಗಳಲ್ಲಿ ಕೋಪದಿಂದ ಉಗಿದು ಬಂದದ್ದೂ ಇದೆ…
ಕೊನೆಗೆ ಹೇಗೋ ಒಂದು ಕಡೆ ಜಾಬ್ ಆಯಿತು. ದಿನದಲ್ಲಿ 9 ಗಂಟೆ ದುಡಿಯಬೇಕಿತ್ತು. ಹತ್ತು ಸಾವಿರ ರೂಪಾಯಿ ಸಂಬಳಕ್ಕೆ ತಿಂಗಳಿಡೀ ದುಡಿಯ ಬೇಕಾಯ್ತು. ಈ ಸಂಬಳ ಹೇಗಿತ್ತೆಂದರೆ, ಜೋರು ಚಳಿಯ ಸಂದರ್ಭ ಸಣ್ಣ ಕಂಬಳಿಯನ್ನು ಒದ್ದುಕೊಂಡತಿತ್ತು. ಕಾಲಿಗೆ ಎಳೆದರೆ, ತಲೆಗೆ ಇಲ್ಲ ತಲೆಗೆ ಎಳೆದರೆ ಕಾಲಿಗೆ ಇಲ್ಲ. ಅಂತೂ ಇಂತೂ ಇದೇ ನನ್ನ ಜೀವನ ಅನ್ನಿಸಿತು. ಕನಸುಗಳೆಲ್ಲ ನುಚ್ಚುನೂರಾಯ್ತು… ಕೈಗೆ ಸಿಗರೇಟ್ ಬಂತು, ಪೆಗ್ ಹಾಕಲು ಸ್ನೇಹಿತರೂ ಸಿಕ್ಕಿದರು. ಆ ಬಳಿಕ ಜೀವನ ಒಂಥರಾ ಜಾಲಿ ಅನ್ನಿಸಿತು. ಕುಡಿದಾಗ ಖುಷಿಯಾಗುತ್ತಿತ್ತು. ಮತ್ತು ಇಳಿದಾಗ ಬೇಸರವಾಗುತ್ತಿತ್ತು. ಈ ನಡುವೆ ಸಿಗರೇಟ್ ಪ್ಯಾಕೇಟ್ ಗಟ್ಟಲೆ ಸೇದಲು ಆರಂಭಿಸಿದೆ. ಕೆಲಸದ ಸಮಯದಲ್ಲಿಯೂ ಸಿಗರೇಟ್ ತುಂಬಾ ನೆನಪಾಗುತ್ತಿತ್ತು. ಇದಾದ ಬಳಿಕ ಕೊನೆಗೂ 10 ಸಾವಿರ ರೂಪಾಯಿಯ ಜಾಬ್ ಬಿಡುವ ದಿನ ಬಂದೇ ಬಿಡ್ತು. ವರ್ಕ್ ಎಕ್ಸ್ ಪೀರಿಯನ್ಸ್ ಇದ್ದ ಕಾರಣ ಬೇರೊಂದು ಕಂಪೆನಿಯಲ್ಲಿ 25 ಸಾವಿರ ರೂಪಾಯಿಗೆ ದುಡಿಯಲು ಆರಂಭಿಸಿದೆ. ಈಗ ಹಳೆಯ ಫ್ರೆಂಡ್ಸ್ ಕೂಡ ದೂರವಾಗಿ ಬಿಟ್ಟರು. ಆದರೆ, ಅವರ ಜೊತೆ ಸೇರಿ ಕಲಿತ ಸಿಗರೇಟ್ ನ್ನು ಬಿಡುವುದು ನನಗೆ ಹರಸಾಹಸವಾಯ್ತು. ಕುಡಿತವನ್ನು ಅತೀ ಸುಲಭವಾಗಿ ಬಿಟ್ಟಿದ್ದೆ. ಆದರೆ ಸಿಗರೇಟ್ ಬಿಡಲು ಮಾಡದ ತಪಸ್ಸಿಲ್ಲ. ದೇವರಿಗೆ ಹರಕೆ ಹೇಳಿದರೂ ಏನು ಮಾಡಿದರೂ ಸಿಗರೇಟ್ ದೂರವಾಗಲಿಲ್ಲ. ಕೊನೆಗೆ ಮನಸ್ಸಿನಲ್ಲಿ ಗಟ್ಟಿ ನಿರ್ಧಾರ ಮಾಡಿದೆ. ಎಷ್ಟೇ ಕಷ್ಟವಾದರೂ ಸಿಗರೇಟ್ ಸೇದಲ್ಲ ಎಂದು ನಿರ್ಧಾರ ಮಾಡಿದೆ. ಕೊನೆಗೂ ಸಿಗರೇಟ್ ಗೆ ತಿಲಾಂಜಲಿ ಹಾಡಿದೆ.
ನನಗೆ ಈಗ 35 ವರ್ಷ, ಈಗ ಮದುವೆಯಾಗಬೇಕು ಅಂತ ಅಂದುಕೊಂಡಿದ್ದೇನೆ. ಇನ್ನುಳಿದ ಜೀವನವನ್ನಾದರೂ ನೆಟ್ಟಗೆ ನಿರ್ವಹಿಸಬೇಕು ಅಂದುಕೊಂಡಿದ್ದೇನೆ. ಅಪ್ಪ, ಅಮ್ಮ ಮತ್ತು ನಮ್ಮ ಸಂಬಂಧಿಕರು ನನಗಾಗಿ ಹುಡುಗಿ ಕೂಡ ಹುಡುಕಿದ್ದಾರೆ. ಹುಡುಗಿ ಬಹಳ ಸುಂದರವಾಗಿದ್ದಾಳೆ. ನನ್ನ ಹಳೆಯ ಕೆಟ್ಟ ನೆನಪುಗಳ ಹಾಳೆಯನ್ನು ಹರಿದು ಹಾಕಬೇಕು ಅನ್ನುವಷ್ಟರಲ್ಲಿ ಫೇಸ್ ಬುಕ್ ನಲ್ಲಿ ಮಹಾನಾಯಕ ಮಾಧ್ಯಮದ ಮರೆಯಲಾಗದ ಘಟನೆ ಕಾರ್ಯಕ್ರಮದ ಬಗ್ಗೆ ನೋಡಿದೆ. ಹಾಗಾಗಿ ಒಂದಷ್ಟು ಅಕ್ಷರಗಳನ್ನು ಅಚ್ಚೊತ್ತಿದ್ದೇನೆ. ಹೊಸ ಜೀವನಕ್ಕಾಗಿ ದುಷ್ಚಟಗಳನ್ನು ಮೊದಲು ಬಿಟ್ಟೆ. ನೀವು ಕೂಡ ಅಮಲುಗಳ ಲೋಕದ ದುಷ್ಚಟದಿಂದ ಹೊರಬನ್ನಿ, ನಮಗಾಗಿ ಸುಂದರ ಲೋಕ, ಸುಂದರ ಕನಸುಗಳು, ನಮ್ಮವರು ಕಾಯುತ್ತಿರುತ್ತಾರೆ. ನನ್ನ ಹೆಸರು ನಾನಿಲ್ಲಿ ಪ್ರಸ್ತಾಪಿಸಲು ಇಚ್ಛಿಸುವುದಿಲ್ಲ…
ಟೇಕ್ ಕೇರ್…
ಮಹಾನಾಯಕ ಡಾಟ್ ಇನ್ ಮಾಧ್ಯಮದಲ್ಲಿ ಹೊಸದಾಗಿ ಆರಂಭಿಸಿರುವ “ಮರೆಯಲಾರದ ಘಟನೆ” ವಿಭಾಗದಲ್ಲಿ ನೀವು ಕೂಡ ನಿಮ್ಮ ಜೀವನದ ಅನುಭವಗಳಲ್ಲಿ ಬರೆಯಬಹುದಾಗಿದೆ. ನಿಮ್ಮ ಜೀವನದ ಘಟನೆಗಳನ್ನು ಕಥೆಯಾಗಿ ಬರೆದು ನಿಮಗೆ ಕಳುಹಿಸಿ. ಜೀವನದಲ್ಲಿ ನೀವು ಕಲಿತ ಪಾಠ ಇನ್ನೊಬ್ಬರಿಗೂ ಮಾದರಿಯಾಗಲಿ. ನಿಮ್ಮ ಕಥೆಗಳನ್ನು 9686872149ಗೆ ವಾಟ್ಸಾಪ್ ಮಾಡಿ. ಅಥವಾ mahanayakain@gmail.com ಗೆ ಮೇಲ್ ಮಾಡಿ.