ಬೀಡಿಕಾರ್ಮಿಕರ ಮೂಲಭೂತ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಸಿಐಟಿಯು ಧರಣಿ
ಉಡುಪಿ: ಬೀಡಿಕಾರ್ಮಿಕರ ಮೂಲಭೂತ ಸಮಸ್ಯೆ ಬಗೆಹರಿಸಲು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್(ಸಿಐಟಿಯು) ನೇತೃತ್ವದಲ್ಲಿ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಧರಣಿ ನಡೆಸಲಾಯಿತು.
ಬೀಡಿ ಕಾರ್ಮಿಕರಿಗೆ ರಾಷ್ಟ್ರೀಯ ಸಮಾನ ಕನಿಷ್ಟ ಕೂಲಿ 1000 ಬೀಡಿಗೆ 395ರೂ., ತುಟ್ಟಿ ಭತ್ತೆ ಅಂಕ ಒಂದಕ್ಕೆ 5 ಪೈಸೆಯಂತೆ ನೀಡಬೇಕು. ಬೀಡಿ ಕಾರ್ಮಿಕರ ನೈಜ ಬೇಡಿಕೆಗಳಿಗೆ ಸರಕಾರ ಸ್ಪಂದಿಸಿ, ಪರಿಹಾರ ಕಾಣಬೇಕು. ಪರ್ಯಾಯ ಉದ್ಯೋಗಕ್ಕೆ ಯೋಜನೆ ರೂಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಕಾನೂನು ಬಾಹಿರ ಬೀಡಿ ಉತ್ಪಾದನೆಯನ್ನು ನಿಲ್ಲಿಸಿ, ಕಾರ್ಮಿಕ ಕಾನೂನುಗಳ ಕಠಿಣ ಜಾರಿಗೆ ಕ್ರಮ ವಹಿಸಬೇಕು.
ಬೀಡಿಕಾರ್ಮಿಕರ ಆರೋಗ್ಯದ ಪ್ರಶ್ನೆಗಳಿಗೆ ಸರಕಾರ ಜವಾಬ್ದಾರಿ ವಹಿಸಬೇಕು. ಕರ್ನಾಟಕ ರಾಜ್ಯ ಸರಕಾರ ನ್ಯಾಯಾಲಯ ದಲ್ಲಿ ಬಾಕಿ ಇರುವ ಕನಿಷ್ಟ ಕೂಲಿ ಮೊಕದ್ದಮೆ ಕೂಡಲೇ ಇತ್ಯರ್ಥಗೊಳಿಸ ಬೇಕು. ಬೀಡಿ ಕಾರ್ಮಿಕರಿಗೆ ವಾರದಲ್ಲಿ 6 ದಿನದ ಕೆಲಸ ಸಿಗಬೇಕು. ಎಲೆ, ತಂಬಾಕು ಹೆಸರಿನಲ್ಲಿ ದಂಡ ವಸೂಲಿ ನಿಲ್ಲಬೇಕು. ಎಲ್ಲಾ ಬೀಡಿ ಕಾರ್ಮಿಕರಿಗೆ ಲಾಗ್ ಪುಸ್ತಕ ನೀಡಬೇಕು.
ಬೀಡಿಕಾರ್ಮಿಕರಿಗೆ ಇ.ಎಸ್.ಐ. ಸೌಲಭ್ಯ ಒದಗಿಸಬೇಕು. 2015 ರಲ್ಲಿ ಬಾಕಿ ಇರಿಸಿಕೊಂಡಿದ್ದ 12.75ರೂ. ತುಟ್ಟಿಭತ್ಯೆ ಮತ್ತು ಕನಿಷ್ಟ ಕೂಲಿಯನ್ನು ಕೂಡಲೇ ಕೊಡಿಸಬೇಕು. ಬೀಡಿ ಕಾರ್ಮಿಕರಿಗೆ ತಿಂಗಳಿಗೆ 6000ರೂ. ಪಿಂಚಣಿ ನೀಡಬೇಕು. ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡಬೇಕು. ಬೀಡಿಕಾರ್ಮಿಕರಿಗೆ ನಿವೇಶನಕ್ಕೆ ಅಂದರೆ ಜಾಗ ಇಲ್ಲದವರಿಗೆ ಜಾಗ ಕೊಟ್ಟು ಸಹಾಯಧನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಬಳಿಕ ಈ ಕುರಿತ ಮನವಿಯನ್ನು ಅಪಾರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯ ಮಂತ್ರಿಯವರಿಗೆ ಸಲ್ಲಿಸಲಾಯಿತು. ಈ ವೇಳೆ ಜಿಲ್ಲೆಯ ಕಾರ್ಮಿಕ ಅಧಿಕಾರಿ ಕುಮಾರ್ ಹಾಜರಿದ್ದರು. ಧರಣಿಯಲ್ಲಿ ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಅಧ್ಯಕ್ಷ ಮಹಾಬಲ ಹೊಡೆಯರಹೊಬಳಿ, ಕಾರ್ಯದರ್ಶಿ ಉಮೇಶ್ ಕುಂದರ್, ಕೋಶಾಧಿಕಾರಿ ಕವಿರಾಜ್ ಎಸ್., ಮುಖಂಡರಾದ ಬಲ್ಕೀಸ್, ಸುನೀತಾ ಶೆಟ್ಟಿ, ನಳಿನಿ ಎಸ್., ಸಿಐಟಿಯು ಉಡುಪಿ ತಾಲೂಕು ಸಮಿತಿ ಸದಸ್ಯರಾದ ಮೋಹನ್, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಕೋಣಿ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw