ರೋಹಿಣಿ–ರೂಪಾ ವಿರುದ್ಧ ಕಾನೂನು ಕ್ರಮಕ್ಕೆ ಸಿಎಂ ಬೊಮ್ಮಾಯಿ ಸೂಚನೆ
ಬೆಂಗಳೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ರೂಪಾ ನಡುವಿನ ಕಿತ್ತಾಟಕ್ಕೆ ಸಿಎಂ ಬೊಮ್ಮಾಯಿ ಅಸಮಾಧಾನ ಹೊರ ಹಾಕಿದ್ದಾರೆ. ಇಬ್ಬರು ಹಿರಿಯ ಅಧಿಕಾರಿಗಳು ಹೀಗೆ ಬಹಿರಂಗವಾಗಿ ಮಾತನಾಡುವುದು, ಕಿತ್ತಾಡುವುದು ಶೋಭೆ ತರುವುದಿಲ್ಲ ಎಂದಿದ್ದಾರೆ.
ಇಬ್ಬರು ಅಧಿಕಾರಿಗಳಿಗೆ ನೊಟೀಸ್ ನೀಡಲು ಸಿಎಂ ಸೂಚನೆ ನೀಡಿದ್ದು, ಇಬ್ಬರಿಂದ ಉತ್ತರ ಬಂದ ಬಳಿಕ ಕ್ರಮ ತೆಗೆದುಕೊಳ್ಳುವಂತೆ ಸಿಎಂ ನಿರ್ದೇಶನ ನೀಡಿದ್ದಾರೆ. ಇದರ ಜೊತೆ ಇಬ್ಬರು ಅಧಿಕಾರಿಗಳ ವಿರುದ್ದ ಕಾನೂನಿನ ಅಡಿ ಕ್ರಮ ತೆಗೆದುಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ಸಿಂಧೂರಿ ಮತ್ತು ರೂಪಾ ನಡುವಿನ ಕಿತ್ತಾಟದ ಬಗ್ಗೆ ಸಿಎಂ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಇಬ್ಬರು ಅಧಿಕಾರಿಗಳ ವರ್ತನೆಯಿಂದ ಸರ್ಕಾರಕ್ಕೆ ಮುಜುಗರ ಆಗ್ತಿದೆ. ಹೀಗಾಗಿ ಇವರ ವಿರುದ್ದ ಕ್ರಮ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಏನು ಸಾಧ್ಯವೋ ಅದರಂತೆ ಕ್ರಮ ತೆಗೆದುಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಅಧಿಕಾರಿಗಳ ನಡುವಿನ ಕಿತ್ತಾಟದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು, ಅಧಿಕಾರಿಗಳ ಈ ವರ್ತನೆಗಳಿಂದ ನನಗೆ ಬಹಳ ಬೇಸರವಾಗಿದೆ. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ಜನ ದೇವಮಾನವರೆಂದುಕೊಂಡಿದ್ದಾರೆ. ಆದರೆ ಇವರಿಂದ ಎಲ್ಲಾ ಅಧಿಕಾರಿಗಳಿಗೂ ಅಪಮಾನವಾಗಿದೆ ಎಂದಿದ್ದಾರೆ.
ಈಗಾಗಲೇ ಪೊಲೀಸ್ ಮಾಹಾನಿರ್ದೇಶಕರೊಂದಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಲಾಗಿದೆ. ಕಾನೂನು ಚೌಕಟ್ಟಿನೊಳಗೆ ಏನು ಕ್ರಮಕೈಗೊಳ್ಳಬೇಕೋ ಅದನ್ನು ಸಿಎಂ ತೆಗೆದುಕೊಳ್ಳುತ್ತಾರೆ. ಈ ಹಿಂದೆ ಸಹ ಈ ಇಬ್ಬರಿಗೆ ನೋಟಿಸ್ ನೀಡಲಾಗಿತ್ತು. ಅಷ್ಟಾದರೂ ಇದು ಮುಂದುವರೆದಿದೆ ಎಂದಿದ್ದಾರೆ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw