ಬೆಂಗಳೂರು ನಗರ ಶಾಸಕರ ಜೊತೆ ಸಿಎಂ ಸಭೆ
ಬೆಂಗಳೂರು:ಲೋಕಸಭೆ, ಬಿಬಿಎಂಪಿ ಚುನಾವಣೆ ಮುನ್ನ ಆಪರೇಷನ್ ಹಸ್ತ ನಡೆಯುತ್ತಿದೆ. ಕೈ ಪಾಳಯದ ನಾಯಕರು ಬಿಜೆಪಿಯ ಕೆಲ ಶಾಸಕರ ಸಂಪರ್ಕದಲ್ಲಿದ್ದಾರೆ. ಪ್ರಭಾವಿ ಸಮುದಾಯಗಳ ಶಾಸಕರು, ಮುಖಂಡರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ. ಕೆಲ ಕ್ಷೇತ್ರಗಳ ಶಾಸಕರ ಬೆಂಬಲಿಗರಿಗೆ ಆಪರೇಷನ್ ಹಸ್ತ ಯಶಸ್ವಿಯಾಗಿದೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿಂದು ಬೆಂಗಳೂರು ನಗರ ಜಿಲ್ಲೆಯ ಶಾಸಕರುಗಳ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಆರಂಭವಾಗಿದೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳು-ಅನುದಾನ, ಸರ್ಕಾರ- ಪಕ್ಷದ ಜತೆಗಿನ ಸಮನ್ವಯ ಹಾಗೂ ಬಿಬಿಎಂಪಿ ವ್ಯಾಪ್ತಿಯ ಅಭಿವೃದ್ಧಿ ಮತ್ತು ಚುನಾವಣೆ ಕುರಿತಾಗಿ ಶಾಸಕರುಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಲಹೆಗಳನ್ನು ನೀಡಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಂಸದರಾದ ಡಿ.ಕೆ.ಸುರೇಶ್ ಅವರುಗಳು ಉಪಸ್ಥಿತರಿದ್ದರು.
ಗುರುವಾರ ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರು ಶಾಸಕರ ಮಹತ್ವದ ಸಭೆ ನಡೆಯಲಿದೆ. 15% ಕಮೀಷನ್, ಕಾಮಗಾರಿ ಸ್ಥಗಿತ, ಅಭಿವೃದ್ಧಿ ಕಡೆಗಣನೆ ವಿರುದ್ಧ ಹೊರಾಟದ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಜೊತೆಗೆ ಇದೇ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ನಿರ್ಧಾರ ಮಾಡಲಾಗುತ್ತದೆ. ಒಂದಿಡೀ ದಿನ ಬೆಂಗಳೂರು ಶಾಸಕರಿಂದ ಸರ್ಕಾರದ ವಿರುದ್ಧ ಧರಣಿ ನಡೆಯಲಿದೆ. ರಾಜ್ಯಪಾಲರಿಗೂ ಕಮಿಷನ್, ಕಾಮಗಾರಿ ಸ್ಥಗಿತ ವಿರುದ್ಧ ದೂರಿಗೆ ಚಿಂತನೆಯನ್ನು ಈ ಸಭೆಯಲ್ಲಿ ನಡೆಸುವ ಸಾಧ್ಯತೆಗಳಿವೆ.