ಸಿಎಂ ಯಡಿಯೂರಪ್ಪರ ಸ್ವಕ್ಷೇತ್ರದಲ್ಲಿಯೇ ದಲಿತರಿಗೆ ರಕ್ಷಣೆ ಇಲ್ಲ | ಸಾಮಾಜಿಕ ಬಹಿಷ್ಕಾರ, ಗುಂಪುಗಳಿಂದ ಹಲ್ಲೆ! - Mahanayaka
6:20 AM Thursday 12 - December 2024

ಸಿಎಂ ಯಡಿಯೂರಪ್ಪರ ಸ್ವಕ್ಷೇತ್ರದಲ್ಲಿಯೇ ದಲಿತರಿಗೆ ರಕ್ಷಣೆ ಇಲ್ಲ | ಸಾಮಾಜಿಕ ಬಹಿಷ್ಕಾರ, ಗುಂಪುಗಳಿಂದ ಹಲ್ಲೆ!

yediyurappa
17/06/2021

ಶಿವಮೊಗ್ಗ: ಸಿಎಂ ಯಡಿಯೂರಪ್ಪನವರ ಸ್ವಕ್ಷೇತ್ರದಲ್ಲಿಯೇ ದಲಿತರಿಗೆ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಿಶಿಷ್ಟ ಸಮುದಾಯದ ಮೇಲೆ ತಾವು ಮೇಲ್ಜಾತಿಯವರು ಎನ್ನುವ ಮಾನಸಿಕತೆ ಉಳ್ಳವರ ದೌರ್ಜನ್ಯ ನಿರಂತರವಾಗಿ ಸಾಗಿದೆ.

ಬುಧವಾರ ಇಲ್ಲಿನ ತಹಶೀಲ್ದಾರ್ ಕವಿರಾಜ್ ಅವರು ಪೊಲೀಸರೊಂದಿಗೆ ಬಂದು ಪರಿಶಿಷ್ಟ ಸಮುದಾಯದವರು ಬಿತ್ತನೆ ಮಾಡಿದ್ದ ಜಮೀನಿನ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಗೊಳಿಸಿದರು. ಈ ಸಂದರ್ಭದಲ್ಲಿ ಪರಿಶಿಷ್ಟ ಸಮುದಾಯದ ಕುಟುಂಬದವರು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೀಗಾಗಿ ತಹಶೀಲ್ದಾರ್ ಹಾಗೂ ಪೊಲೀಸರು ಭೂಮಿ ವಶಪಡಿಸಿಕೊಳ್ಳುವ ಪ್ರಯತ್ನ ನಿಲ್ಲಿಸಿ ಹಿಂತಿರುಗಿದ್ದಾರೆ.

ಮಾಯತಮ್ಮನ ಮುಚುಡಿ ಗ್ರಾಮದ ಪರಿಶಿಷ್ಟ ಸಮುದಾಯದ 19 ಕುಟುಂಬಗಳು 40 ವರ್ಷಗಳಿಂದ ಸರ್ವೆ ನಂಬರ್ 128ರಲ್ಲಿ ತಲಾ 2 ಹಾಗೂ 3 ಎಕರೆಯಂತೆ ಬಗರ್‌ ಹುಕುಂ ಸಾಗುವಳಿ ಮಾಡಿಕೊಂಡು ಬರುತ್ತಿದ್ದವು. ಮಂಜೂರಾತಿಗಾಗಿ 1991ರಲ್ಲಿ ಆ ಕುಟುಂಬಗಳವರು 53 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಬಗರ್‌ ಹುಕುಂ ಸಾಗುವಳಿ ಹಕ್ಕಿಗಾಗಿ ಅವರು ನಿರಂತರವಾಗಿ ಹೋರಾಡುತ್ತಾ ಬಂದಿದ್ದರೂ ಇನ್ನೂ ಅವರಿಗೆ ಭೂಮಿಯ ಹಕ್ಕನ್ನು ನೀಡದೇ ವಂಚಿಸಲಾಗಿದೆ.

ಸರ್ವೆ ನಂಬರ್ 128ರಲ್ಲಿ ಹಲವರು ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಆದರೆ, ನಮ್ಮ ಸಮುದಾಯದವರನ್ನು ಹೊರತುಪಡಿಸಿ ಎಲ್ಲರಿಗೂ ಭೂಮಿಯನ್ನು ಮಂಜೂರು ಮಾಡಿಕೊಟ್ಟಿದ್ದಾರೆ. ಆದರೆ ದಲಿತರಿಗೆ ಮಾತ್ರ ಭೂಮಿಯ ಒಡೆತನ ನೀಡದೇ ಸತಾಯಿಸುತ್ತಿದ್ದಾರೆ. ಕೇಳಿದರೆ ಇದು ಕಂದಾಯ ಭೂಮಿ ಎಂದು ಅಧಿಕಾರಿಗಳು ಮೋಸದಾಟ ಆಡುತ್ತಿದ್ದಾರೆ ಎಂದು ಇಲ್ಲಿನ ಜನರು ಆರೋಪಿಸಿದ್ದಾರೆ.

ಇನ್ನೂ ಇಲ್ಲಿನ ಪರಿಶಿಷ್ಟ ಕುಟುಂಬವನ್ನು ಕೂಲಿಗೆ ಕರೆಯದಂತೆ ಬಹಿಷ್ಕಾರ ಹಾಕಲಾಗಿದ್ದು,  ಯಾರಾದರೂ ಕೂಲಿಗೆ ಕರೆದರೆ ಅವರಿಗೆ 25 ಸಾವಿರ ದಂಡ ಹಾಕುತ್ತಿದ್ದಾರೆ.  ಹೊರಗಡೆ ದಲಿತರು ಓಡಾಡಿದರೆ, ಮೇಲ್ಜಾತಿಯವರು ಗುಂಪು ಸೇರಿಕೊಂಡು ಹಲ್ಲೆ ನಡೆಸಲು ಬರುತ್ತಿದ್ದಾರೆ. ಇದೇ ಸರ್ವೆ ನಂಬರ್‌ನಲ್ಲಿ ಬಲಾಢ್ಯ ಜಾತಿಗಳವರಿಗೆ ಹತ್ತಾರು ಎಕರೆ ಭೂಮಿ ಮಂಜೂರು ಮಾಡಿರುವಾಗ ನಮಗೂ ಕನಿಷ್ಠ ಒಂದು ಎಕರೆ ಭೂಮಿಯನ್ನಾದರೂ ಮಂಜೂರು ಮಾಡಿ, ಬದುಕಲು ಬಿಡಿ. ನಮಗೆ ಈ ಜಮೀನು ಬಿಟ್ಟರೆ ಜೀವನಕ್ಕೆ ಯಾವುದೇ ಆಧಾರವಿಲ್ಲ ಎಂದು ಇಲ್ಲಿನ ನಿವಾಸಿಗಳು ಹೇಳಿದ್ದಾರೆ.

ಗ್ರಾಮದ ಲಿಂಗಾಯತರು ನಮ್ಮ ಮೇಲೆ ನಿರಂತರ ಹಲ್ಲೆ ನಡೆಸುತ್ತಾ ಬಂದಿದ್ದಾರೆ. ಈ ಹಿಂದೆ ಸಂಸದ ಬಿ.ವೈ.ರಾಘವೇಂದ್ರ ಅವರ ಸೂಚನೆ ಮೇರೆಗೆ ನಮ್ಮ ಕುಟುಂಬಗಳಿಗೆ ತಲಾ ಒಂದು ಎಕರೆ ಜಮೀನು ಕೊಡುವ ಬಗ್ಗೆ ಪಂಚಾಯಿತಿ ನಡೆದಿತ್ತು. ಆದರೂ ಅಲ್ಲಿನ ತೀರ್ಮಾನವನ್ನು ಗ್ರಾಮಸ್ಥರು ಪಾಲಿಸುತ್ತಿಲ್ಲ. ಬದಲಿಗೆ ಬಹಿಷ್ಕಾರ, ದಂಡ ಹಾಕಿದರು. ಒಂದು ವಾರದಲ್ಲಿ ಸಂಸದರು ಬಂದ ಮೇಲೆ ಚರ್ಚೆ ಮಾಡುವ ಭರವಸೆಯನ್ನು ತಹಶೀಲ್ದಾರ್‌ ನೀಡಿದ್ದಾರೆ. ನಮಗೆ ಭೂಮಿ ಮಂಜೂರು ಮಾಡದಿದ್ದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಇನ್ನು ನಮ್ಮಿಂದ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಇಲ್ಲಿನ ನಿವಾಸಿಗಳು ನೋವು ತೋಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ