ಕಾಫಿನಾಡಿಗರ ನಿದ್ದೆಗೆಡಿಸಿದ ಭೈರ ಮತ್ತೆ ಸೇಫ್: ಹಿಡಿಯಲು ಬಂದ ಆನೆಗಳ ಗ್ಯಾಂಗ್ ವಾಪಸ್
ಮತ್ತೆ ಭೈರ ಸೇಫ್. ಆ ದಸರಾ ಆನೆಗಳ ಗ್ಯಾಂಗ್ ಆರು ದಿನಗಳ ಹಿಂದೆಯಷ್ಟೇ ಕಾಫಿನಾಡಿಗರ ನಿದ್ದೆಗೆಡಿಸಿದ ಕಿರಾತಕ ಕಾಡಾನೆಯನ್ನ ಹಿಡಿಯಲು ಬಂದಿದ್ವು. ಜನರಿಗೋ ಖುಷಿಯೋ ಖುಷಿ.. ಅರಣ್ಯ ಇಲಾಖೆಯವ್ರಿಗಂತೂ ಅಬ್ಬಾ, ಇನ್ಮೇಲೆ ಜನರಿಂದ ತೇಪೆ ಹಾಕಿಸಿಕೊಳ್ಳುವ ಕಾರ್ಯಕ್ರಮ ಇರಲಲ್ವಾ ಅಂತಾ ಅವ್ರಿಗೂ ಡಬಲ್ ಖುಷಿ. ಆದ್ರೆ ಈ ಖುಷಿ, ಸಂಭ್ರಮ ಎಲ್ಲಾ ತಾತ್ಕಾಲಿಕ ಕಣ್ರೋ ಅಂತಾ ಅಂದೇ ಆತ ಮನಸ್ಸಲ್ಲೇ ಅಂದ್ಕೊಂಡಿದ್ದ.. ಈಗ ಎಲ್ಲವೂ ಅವನು ಅಂದ್ಕೊಡಿದ ಹಾಗೆಯೇ ಆಗಿದೆ.. ದಸರಾ ಆನೆಗಳ ಗ್ಯಾಂಗ್ ವಾಪಸ್ ಆಗಿವೆ.. ಅಷ್ಟಕ್ಕೂ ಅಭಿಮನ್ಯುನಂತಹ ಬಲಿಷ್ಠನಿಗೆ ಚಳ್ಳೆಹಣ್ಣು ತಿನ್ನಿಸಿದವನಾದ್ರೂ ಯಾರು ಅಂತೀರಾ..?
ನಾನ್ ರೆಡಿ.. ನೀನ್ ರೆಡಿನಾ..! ಹ…ನಾನು ರೆಡಿನೇ..! ನೀವಿಬ್ರು ಮಾತ್ರವಲ್ಲ, ನಾವು ರೆಡಿನೇ… !
ಹೀಗೆ ಈ ಆರು ದಸರಾ ಆನೆಗಳು ಆತನೊಬ್ಬನನ್ನ ಹಿಡಿಯಲು ಎಲ್ಲಾ ತಯಾರಿ ಮಾಡಿಕೊಂಡು ನಿಂತಿದ್ರು. ಹೀಗೆ ನಿಂತವರು ಯಾರು ಸಾಮಾನ್ಯರಲ್ಲ.. ಒಬ್ರಿಗಿಂತ ಮತ್ತೊಬ್ರು ಪಂಟ್ರು, ಅಭಿಮನ್ಯು, ಭೀಮ, ಮಹೇಂದ್ರ, ಗೋಪಾಲಸ್ವಾಮಿ, ಅಜೇಯ, ಪ್ರಶಾಂತ್ ಗ್ಯಾಂಗ್ ಆತನನ್ನ ಕೆಡವಿ ಖೆಡ್ಡಾಕ್ಕೆ ಬೀಳಿಸಲು ತೊಡಿತಟ್ಟಿದ್ರು.. ಅಂದಾಗೆ ಇದೆಲ್ಲಾ ಒಂದು ವಾರದ ಹಿಂದಿನ ಸೀನ್.. ಆದ್ರೆ ಇದೀಗ ಆ ಸೀನ್ ಕಂಪ್ಲೀಟ್ ಉಲ್ಟಾ ಆಗಿದೆ. ನಾವು ಹೊರಟೆವು.. ನಾವು ಹೊರಟೆವು.. ಅಂತಾ ಎಲ್ಲರೂ ಟಾಟಾ ಬೈಬೈ ಹೇಳಿ ಲಾರಿಯಲ್ಲಿ ಹೋಗ್ತಿದ್ದಾರೆ.. ಇದ್ದಕ್ಕಿದ್ದಂತೆ ಈ ಗ್ಯಾಂಗ್ ಹೊರಟಿದ್ದನ್ನ ಕಂಡು ಸ್ಥಳೀಯರು ಶಾಕ್ ಆಗಿದ್ದಾರೆ..
ಅಷ್ಟಕ್ಕೂ ಆಗಿದ್ದೇನು ಅಂತಾ ಕೇಳಿದ್ರೆ ನೀವು ಒಂದ್ ಕ್ಷಣ ಬೆರಗಾಗ್ತೀರಾ.. ಹೌದು, ಕಾಫಿನಾಡಿನಲ್ಲಿ ಕಳೆದ ಕೆಲ ವರ್ಷಗಳಿಂದ ಭಾರೀ ಕ್ವಾಟ್ಲೆ ಕೊಡ್ತಿದ್ದ ಕಾಡಾನೆಯನ್ನ ಹಿಡಿಯಲು ಈ ಗ್ಯಾಂಗ್ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮಕ್ಕೆ ಧಾವಿಸಿತು. ಕಳೆದ ಭಾನುವಾರ ಬಂದಿದ್ದ ಈ ದಸರಾ ಆನೆಗಳು, ನೂರು ಮಂದಿ ಅರಣ್ಯ ಸಿಬ್ಬಂದಿಗಳ ಜೊತೆ ಸೋಮವಾರದಿಂದ ಕಾರ್ಯಾಚರಣೆಗೆ ಇಳಿದಿದ್ವು. ಆದರೆ ಎರಡ್ಮೂರು ದಿನ ಭೈರ ಎಂಬ ಕಾಡಾನೆಗೆ ಹುಡುಕಾಟ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಆತನೇ ಸುಳಿವೇ ಸಿಗಲಿಲ್ಲ.
ಅಯ್ಯೋ, ಹೀಗಾಗಿ ಬಿಡ್ತಲ್ಲ ಅಂತಾ ಚಿಂತೆಯಲ್ಲಿರುವಾಗಲೇ ಆಪರೇಷನ್ ಭೈರ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅಭಿಮನ್ಯುಗೆ ಆರೋಗ್ಯ ಹದೆಗೆಟ್ಟಿದೆ (ಭೇದಿ ಶುರುವಾಗಿದೆ).. ಏನಪ್ಪಾ ತಂಡದ ಕ್ಯಾಪ್ಟನ್ಗೆ ಈ ತರ ಆಯ್ತಲ್ಲ ಅಂತಾ ಟೆನ್ಷನ್ ಸ್ಟಾರ್ಟ್ ಆದಾಗ ಗೋಪಾಲಸ್ವಾಮಿ ಮದವೇರಿ ಹೆಂಗ್ಯಾಗೋ ಆಡೋದಕ್ಕೆ ಶುರುಮಾಡಿದ್ದಾನೆ.. ಆತನನ್ನ ಕಂಟ್ರೋಲ್ ಮಾಡೋದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಅದ್ ಯಾವ ಲೆವೆಲ್ಗೆ ಅಂದ್ರೆ ಕೊನೆಗೆ ಜಿಲ್ಲಾಧಿಕಾರಿಗಳೇ 144 ಸೆಕ್ಷನ್ ಜಾರಿ ಮಾಡಿ ಜನರು ಯಾರು ಆನೆ ಕಾರ್ಯಾಚರಣೆಯ ಸುತ್ತ ಓಡಾಡದಂತೆ ಆದೇಶ ಹೊರಡಿಸೋವರೆಗೂ.. ಕೊನೆಗೆ ಇಷ್ಟೆಲ್ಲಾ ಸೀನ್ ಕ್ರಿಯೇಟ್ ಆದ್ಮೇಲೆ ನಿನ್ನೆ ಇದ್ದಕ್ಕಿದ್ದಂತೆ ಅಭಿಮನ್ಯು ನೇತೃತ್ಚದ ಆರು ದಸರಾ ಆನೆಗಳ ತಂಡ ನಾಗರಹೊಳೆ ಹಾಗೂ ದುಬಾರೆ ಕ್ಯಾಂಪ್ ಗಳಿಗೆ ವಾಪಸ್ ಆಗಿವೆ..:
ಅಂದಾಗೆ ಈ ಭೈರನನ್ನ ಹಿಡಿಯುವ ಕಾರ್ಯಾಚರಣೆಗೆ ಅಷ್ಟು ಸುಲಭವಾಗಿ ಸರ್ಕಾರ ಮನಸ್ಸು ಮಾಡಿರಲಿಲ್ಲ. ಕಳೆದ ಎರಡು ತಿಂಗಳಲ್ಲೇ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ರು. ಹೀಗಾಗಿ ಕಾಡಾನೆಯನ್ನ ಹಿಡಿಯಬೇಕು ಅಂತಾ ಮೃತದೇಹವನ್ನ ಹಿಡಿದುಕೊಂಡು ಮೂಡಿಗೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಈ ವೇಳೆ ಲಾಠಿಚಾರ್ಜ್ ಆಗಿ ಇನ್ನೂ ಕೆಲವರಿಗೆ ಬಾಸುಂಡೆಯೇ ಹೋಗಿಲ್ಲ.. ಇಷ್ಟೆಲ್ಲಾ ಡ್ರಾಮಾ ನಡೆದ್ಮೇಲೆ ಹೇಗೋ ಸರ್ಕಾರ ಒಂದು ಕಾಡಾನೆಯನ್ನ ಹಿಡಿಯಲು ಅನುಮತಿ ನೀಡಿತ್ತು. ಅಷ್ಟರಲ್ಲಿಯೇ ಕಾರ್ಯಾಚರಣೆಗೆ ಬಂದಿದ್ದ ದಸರಾ ಆನೆಗಳ ಟೀಂ ವಾಪಸ್ ಹೊರಟಿವೆ.
ಇಷ್ಟಕ್ಕೆಲ್ಲಾ ಅರಣ್ಯ ಅಧಿಕಾರಿಗಳ ಬೇಜಬ್ದಾರಿತನವೇ ಕಾರಣ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.. ಕಾರ್ಯಾಚರಣೆಗೆ ಬಂದಿದ್ದ ಆನೆಗಳಿಗೆ ಸ್ಥಳೀಯರು ಬೆಲ್ಲ, ಗಿಲ್ಲ ಅಂತಾ ಎಲ್ಲವನ್ನೂ ಕೊಟ್ಟು ಆನೆಗಳ ಆರೋಗ್ಯ ಹಾಳು ಮಾಡಿದ್ದಾರೆ ಅಂತಾ ಅರಣ್ಯ ಇಲಾಖೆಯವರು ಆರೋಪಿಸ್ತಾ ಇದ್ದಾರೆ. ಅಯ್ಯೋ, ಆನೆಗಳ ಹತ್ತಿರ ಹೋಗೋದಕ್ಕೂ ಮಾವುತನ ಅನುಮತಿ ಪಡೆಯಬೇಕಿತ್ತು, ಇನ್ನೆಲ್ಲಿ ನಾವು ಆಹಾರವನ್ನ ಆನೆಗಳಿಗೆ ನೀಡೋದು. ತಂಪಾಗಿದ್ದ ದಸರಾ ಆನೆಗಳನ್ನ ಬಿಸಿಲಲ್ಲಿ ನಿಲ್ಲಿಸಿ, ಸರಿಯಾದ ವ್ಯವಸ್ಥೆ ಮಾಡದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳೇ ಬೇಜವಾಬ್ದಾರಿ ತೋರಿ, ಬಿಲ್ ಮಾಡಿಕೊಳ್ಳಲು ಜಸ್ಟ್ ಈ ರೀತಿ ಕಾರ್ಯಾಚರಣೆಯ ನಾಟಕವಾಡಿದ್ದಾರೆ ಅನ್ನೋದು ಸ್ಥಳೀಯರ ಆಕ್ರೋಶ. ಒಟ್ಟಿನಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರ ಜಟಾಪಟಿಯಲ್ಲಿ ಆರೋಗ್ಯ ಹದೆಗೆಡಿಸಿಕೊಂಡು ದಸರಾ ಆನೆಗಳು, ಕ್ಯಾಂಪ್ ಕಡೆ ಮುಖ ಮಾಡಿದ್ರೆ, ಹೆಂಗೇ ನಾನು ನಿಮಗೆಲ್ಲಾ ಚಳ್ಳೆಹಣ್ಣು ತಿನ್ಸಿದ್ದು ಅಂತಾ ಕಿವಿ ಕೊಡುವುತ್ತಲೇ ಕಾಡಿನ ಕಡೆ ಮುಖ ಮಾಡಿದ್ದಾನೆ ಭೈರ..
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka