ವಾಂಟೆಡ್ ಕ್ರಿಮಿನಲ್ ಎಂದು ಫೇಸ್ ಬುಕ್ ನಲ್ಲಿ ಮಾರ್ಕ್ ಜುಕರ್ ಬರ್ಗ್ ಫೋಟೋ ಪ್ರಕಟ! | ಅಷ್ಟಕ್ಕೂ ನಡೆದದ್ದೇನು ಗೊತ್ತಾ?
ಬೊಗೋಟಾ: ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್ ಅವರನ್ನು ಹೋಲುವ ವ್ಯಕ್ತಿಯೋರ್ವ ಇದೀಗ ವಾಂಟೆಡ್ ಕ್ರಿಮಿನಲ್ ಆಗಿದ್ದು, ಪೊಲೀಸರು ಬಿಡುಗಡೆ ಮಾಡಿರುವ ಫೋಟೋ ಕಂಡು ಈತ ಮಾರ್ಕ್ ಜುಕರ್ ಬರ್ಗ್ ಅಲ್ಲವೇ ಎಂದು ಜನರು ಸಂಶಯಪಡುವಂತಾಗಿದೆ.
ಮಾರ್ಕ್ ಜುಕರ್ ಬರ್ಗ್ ಅವರನ್ನೇ ಹೋಲುವ ರೇಖಾ ಚಿತ್ರವನ್ನು ಕೊಲಂಬಿಯಾ ಪೊಲೀಸರು ಬಿಡುಗಡೆ ಮಾಡಿದ್ದು, ಈತನನ್ನು ಹಿಡಿದುಕೊಟ್ಟರೆ 3 ಮಿಲಿಯನ್ ಡಾಲರ್(22 ಕೋಟಿ) ಬಹುಮಾನ ನೀಡಲಾಗುವುದು ಎಂದು ಪೊಲೀಸರು ಪ್ರಕಟಿಸಿದ್ದಾರೆ.
ಮಾರ್ಕ್ ಜುಕರ್ ಬರ್ಗ್ ಅವರನ್ನು ಹೋಲುವ ಫೋಟೋವನ್ನು ಅವರ ಒಡೆತನದ ಸಂಸ್ಥೆ ಫೇಸ್ ಬುಕ್ ನಲ್ಲಿಯೇ ಹಾಕಿ ಈ ವ್ಯಕ್ತಿಯನ್ನು ಪತ್ತೆ ಮಾಡಿದವರಿಗೆ 22 ಕೋ.ರೂ. ಬಹುಮಾನ ಎಂದು ಘೋಷಿಸಲಾಗಿದ್ದು, ಇದರಿಂದಾಗಿ ಜನರು ಗೊಂದಲಕ್ಕೀಡಾಗಿದ್ದಾರೆ.
ಕೊಲಂಬಿಯಾದ ಅಧ್ಯಕ್ಷ ಇವಾನ್ ಡ್ಯೂಕ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮೇಲೆ ಕೆಲವು ಹಂತಕರು ದಾಳಿ ನಡೆಸಿ, ಗುಂಡಿನ ಮಳೆ ಹರಿಸಿದ್ದರು. ಹೆಲಿಕಾಪ್ಟರ್ ನಲ್ಲಿ ಕೊಲಂಬಿಯಾದ ಅಧ್ಯಕ್ಷ ಡ್ಯೂಕ್ ಅವರೊಂದಿಗೆ ರಕ್ಷಣಾ ಸಚಿವ ಡಿಯಾಗೋ ಮೊಲಾನೊ, ಆಂತರಿಕ ಸಚಿವ ಡೇನಿಯಲ್ ಪಲಾಸಿಯೊಸ್, ನಾರ್ಟೆ ಡಿ ಸ್ಯಾಂಟ್ಯಾಂಡರ್ ಸಿಲ್ವಾನೋ ಸೆರಾನೊ ಸೇರಿದಂತೆ ಹಲವು ಅಧಿಕಾರಿಗಳಿದ್ದರು. ಅದೃಷ್ಟವಷಾತ್ ಯಾರಿಗೂ ಯಾವುದೇ ಅಪಾಯವಾಗಿರಲಿಲ್ಲ. ಈ ಘಟನೆಯ ತನಿಖೆ ಭಾಗವಾಗಿ ಕೊಲಂಬಿಯಾ ಪೊಲೀಸರು ಆರೋಪಿಗಳ ರೇಖಾಚಿತ್ರ ರಚಿಸಿದ್ದಾರೆ. ಇವರ ಪೈಕಿ ಓರ್ವ ಮಾರ್ಕ್ ಜುಕರ್ ಬರ್ಗ್ ಅವರನ್ನೇ ಹೋಲುತ್ತಿದ್ದಾನೆ.